ನನ್ನ ತೇಜೋವಧೆಗೆ ಪಕ್ಷದ ಕೆಲ ನಾಯಕರಿಂದಲೇ ಷಡ್ಯಂತ್ರ: ಸಚಿವ ರಮೇಶ್ ಜಾರಕಿಹೊಳಿ

Update: 2018-11-30 13:02 GMT

ಬೆಂಗಳೂರು, ನ. 30: ನಾನು ಪಕ್ಷ ತೊರೆದು ಎಲ್ಲಿಯೂ ಹೋಗುವ ಪ್ರಶ್ನೆಯೇ ಇಲ್ಲ. ಆದರೆ, ನನ್ನ ತೇಜೋವಧೆಗಾಗಿ ನಮ್ಮ ಪಕ್ಷದ ಕೆಲ ನಾಯಕರೇ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ಇಂದಿಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಇಲ್ಲಿನ ಚಾಲುಕ್ಯ ವೃತ್ತದಲ್ಲಿನ ತನ್ನ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ನ ಕೆಲ ಶಾಸಕರು ಮುಂಬೈಗೆ ತೆರಳಲಿದ್ದಾರೆ ಎಂಬುದು ಕೇವಲ ವದಂತಿ. ನಾನು ನಗರದಲ್ಲಿಯೇ ಇದ್ದೇನೆ. ಎಲ್ಲಿಯೂ ಹೋಗಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಮುಂಬೈ, ದಿಲ್ಲಿ ಎಲ್ಲಿಗೂ ಹೋಗಿಲ್ಲ. ಎರಡು ದಿನಗಳಿಂದ ಬೆಂಗಳೂರಿನಲ್ಲೆ ಇದ್ದೇನೆ. ಆದರೆ, ಕಾಂಗ್ರೆಸ್ ಪಕ್ಷದಲ್ಲಿರುವ ಕೆಲ ಸ್ವಯಂಘೋಷಿತ ನಾಯಕರು ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆಂದು ಅವರು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಅವರನ್ನು ಟೀಕಿಸಿದರು.

ನಮ್ಮ ನಡುವೆ ಭಿನ್ನಮತ ಇದದ್ದು ನಿಜ. ಅದನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಬಗೆಹರಿಸಿದ್ದಾರೆ. ಅಲ್ಲಿಗೆ ಅದು ಮುಗಿದ ಅಧ್ಯಾಯ. ಆದರೂ ಪದೇ ಪದೇ ನನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದು, ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದರು. ಪಕ್ಷದಲ್ಲಿ ಉಂಟಾಗಿದ್ದ ಎಲ್ಲ ಸಮಸ್ಯೆಗಳು ಬಗೆಹರಿದಿದ್ದು, ಯಾವುದೇ ಶಾಸಕರು ಮುಂಬೈಗೂ ಹೋಗುವುದಿಲ್ಲ. ಚೆನ್ನೈಗೂ ತೆರಳುವುದಿಲ್ಲ. ಯಾರು ಎಲ್ಲಿಗೆ ಬೇಕಾದರೂ ಹೋಗಲು ಸ್ವತಂತ್ರರು. ಅದನ್ನು ತಡೆಗಟ್ಟಲು ನಾವು ಯಾರು ಎಂದು ರಮೇಶ್ ಜಾರಕಿಹೊಳಿ ಪ್ರಶ್ನಿಸಿದರು.

ನಾನು ಇಲ್ಲೇ ಇದ್ದೇನೆ: ‘ನಾನು ಎಲ್ಲಿಯೂ ಹೋಗಲ್ಲ. ಹೋಗಬೇಕಾದ ಅಗತ್ಯವೂ ನನಗಿಲ್ಲ. ನಮ್ಮ ನಾಯಕರೇ ಇಲ್ಲೇ ಕುಳಿತು ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಿದ್ದು, ನಾವು ಎಲ್ಲಿಗೂ ಹೋಗುವ ಅಗತ್ಯವಿಲ್ಲ’ ಎಂದು ಶಾಸಕ ಬಿ.ಸಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಯಾರೂ ಮುಂಬೈಗೆ ಹೋಗಲ್ಲ:

‘ಕಾಂಗ್ರೆಸ್ ಪಕ್ಷದ ಅತೃಪ್ತ ಶಾಸಕರು ಮುಂಬೈಗೆ ಹೋಗುತ್ತಾರೆಂಬುದು ಕೇವಲ ವದಂತಿ. ಪಕ್ಷದಲ್ಲಿ ಎಲ್ಲವೂ ಸರಿ ಇದ್ದು, ಯಾರೂ ಎಲ್ಲೂ ಹೋಗುವುದಿಲ್ಲ. ಸಂಪುಟ ವಿಸ್ತರಣೆ ಮಾಡಬೇಕೆಂಬ ಬೇಡಿಕೆಯಿದೆ. ಈ ಬಗ್ಗೆ ಎಲ್ಲರೂ ಕೂತು ಚರ್ಚಿಸಿ ತೀರ್ಮಾನಿಸುತ್ತೇವೆ. ಆದರೆ, ಮಾಧ್ಯಮಗಳ ವರದಿ ಆಧಾರ ರಹಿತ’

-ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ

‘ನನ್ನ ಮೇಲೆ ಯಾರು ಬೇಕಾದರೂ ಪ್ರಹಾರ ಮಾಡಲಿ, ಅದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಸಚಿವ ರಮೇಶ್ ಜಾರಕಿಹೊಳಿ ಯುವ ಕಾಂಗ್ರೆಸಿನಿಂದ ಬೆಳೆದು ಬಂದವರು. ಅವರು ನನ್ನ ವೈಯಕ್ತಿಕ ಗೆಳೆಯ. ಅವರ ಇಮೇಜ್ ಅನ್ನು ಏಕೆ ಹಾಳು ಮಾಡ್ತೀರಿ’

-ಡಿ.ಕೆ.ಶಿವಕುಮಾರ್, ಜಲಸಂಪನ್ಮೂಲ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News