ಶವ ಸಂಸ್ಕಾರಕ್ಕೆ ತೆರಳುತ್ತಿದ್ದವರ ಮೇಲೆ ಹೆಜ್ಜೇನು ದಾಳಿ: 30 ಮಂದಿ ಅಸ್ವಸ್ಥ
Update: 2018-11-30 21:32 IST
ನಾಗಮಂಗಲ, ನ.30: ಶವ ಸಂಸ್ಕಾರಕ್ಕೆ ತೆರಳುತ್ತಿದ್ದ ಜನರ ಗುಂಪಿನ ಮೇಲೆ ಹೆಜ್ಜೇನು ದಾಳಿ ಮಾಡಿದ ಪರಿಣಾಮ ಸುಮಾರು 30 ಮಂದಿ ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ದೊಡ್ಡಯಗಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬೆಟ್ಟಯ್ಯ ಎಂಬ ವಯೋಸಹಜ ವೃದ್ಧರ ಶವ ಸಂಸ್ಕಾರಕ್ಕೆ ಸ್ಮಶಾನದತ್ತ ತೆರಳುತ್ತಿದ್ದ ಜನರ ಗುಂಪಿನ ಮೇಲೆ ಶುಕ್ರವಾರ ಸಂಜೆ ಹೆಜ್ಜೇನು ಹುಳುಗಳು ದಾಳಿ ಮಾಡಿವೆ. ಜೇನು ಕಡಿತಕ್ಕೆ ಜನರು ಶವ ಬಿಟ್ಟು ದಿಕ್ಕಾಪಾಲಾಗಿ ಓಡಿ ಹೋಗಿ ಬೆಂಕಿಯಿಂದ ರಕ್ಷಣೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಸುಮಾರು 30 ಮಂದಿ ಜೇನು ಕಡಿತಕ್ಕೆ ಒಳಗಾಗಿದ್ದು, ನಾಗಮಂಗಲ ಪಟ್ಟಣದ ಜನರಲ್ ಆಸ್ಪತ್ರೆಗೆ 26 ಮಂದಿ ಹಾಗೂ ಬಸರಾಳು ಆಸ್ಪತ್ರೆಗೆ 4 ಮಂದಿ ಚಿಕಿತ್ಸೆಗೆ ದಾಖಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.