ಮೂಡಿಗೆರೆ: ಟಿಪ್ಪು ಸುಲ್ತಾನ್ ಜಯಂತಿ ಸಾರ್ವಜನಿಕ ಆಚರಣೆಗೆ ಅವಕಾಶ ನೀಡಲು ಒತ್ತಾಯ

Update: 2018-11-30 17:58 GMT

ಮೂಡಿಗೆರೆ,ನ.30: ದೇಶೀ ಸಂಸ್ಕೃತಿ ಮತ್ತು ಪರಂಪರೆಗಳನ್ನು ಮೈಸೂರು ರಾಜ್ಯದಲ್ಲಿ ಹುಟ್ಟುಹಾಕಿ ಪ್ರಜೆಗಳಿಗೆ ಸೌಹಾರ್ದತೆಯ ಪಾಠ ಕಲಿಸಿದ ಮಹಾನ್ ಚೇತನ ಟಿಪ್ಪು ಸುಲ್ತಾನ್ ಅವರ ಜಯಂತಿಯನ್ನು ಸಾರ್ವಜನಿಕವಾಗಿ ಆಚರಿಸಲು ರಾಜ್ಯ ಸರ್ಕಾರ ಅವಕಾಶ ನೀಡಬೇಕು ಎಂದು ಬಿಎಸ್‍ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಝಾಕೀರ್ ಹುಸೇನ್ ಒತ್ತಾಯಿಸಿದರು.

ಅವರು ಶುಕ್ರವಾರ ಬಿಎಸ್‍ಪಿ, ಮುಸ್ಲಿಂ ಹಿತರಕ್ಷಣಾ ಒಕ್ಕೂಟ ಮತ್ತು ದಲಿತ ಸಂಘರ್ಷ ಸಮಿತಿಯಿಂದ ಆಯೋಜಿಸಿದ್ದ ಟಿಪ್ಪು ಸುಲ್ತಾನ್ ಜಯಂತಿಯನ್ನು ಸಾರ್ವಜನಿಕವಾಗಿ ಆಚರಿಸಬೇಕೆಂದು ಸರ್ಕಾರ ಅನುಮತಿ ನೀಡಬೇಕೆಂದು ಒತ್ತಾಯಿಸಿ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ದೇಶದಲ್ಲಿ ಹಿಂದಿನ ಕಾಲದಲ್ಲಿದ್ದ ಒಟ್ಟು 550 ರಾಜರ ಪೈಕಿ, 530 ರಾಜರು ಸರ್ವಾಧಿಕಾರಿ ಆಡಳಿತವನ್ನೇ ನೀಡಿದ್ದಾರೆ. ಟಿಪ್ಪು ಸುಲ್ತಾನ್ ಮಾತ್ರ ತನ್ನ ಮಕ್ಕಳನ್ನೇ ಒತ್ತೆಯಿರಿಸಿ, ರಾಜ್ಯವನ್ನೂ ಹಾಗೂ ರಾಜ್ಯದ ನೆಲ ಜಲವನ್ನೂ, ಪ್ರಾರ್ಥನಾ ಮಂದಿರಗಳನ್ನೂ ಉಳಿಸಿದ್ದರು. ಅವರ ಜಯಂತಿಯನ್ನು 15 ವರ್ಷಗಳಿಂದ ಬಿಎಸ್‍ಪಿ ಆಚರಿಸುತ್ತಾ ಬಂದಿದೆ. ಈಗ ಸರ್ಕಾರ ತಡೆಯೊಡ್ಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಎಸ್‍ಪಿ ಮುಖಂಡ ಮರಗುಂದ ಪ್ರಸನ್ನ ಮಾತನಾಡಿ, ಸರ್ಕಾರ ಕೋಮುವಾದಿಗಳ ಕೈಗೊಂಬೆಯಾಗಿದೆ. ಸರ್ಕಾರ ಆಚರಿಸುವ ಜಯಂತಿಯಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಾದಿಯಾಗಿ ಕೆಲ ಸಚಿವರು ಕಾರ್ಯಕ್ರಮದಿಂದ ಪಲಾಯಾನಗೈದು ಈಗ ಸಾರ್ವಜನಿಕವಾಗಿ ಆಚರಿಸಲು ಅವಕಾಶ ನೀಡದೆ, ದರ್ಪ ತೋರುತ್ತಿದ್ದಾರೆ ಎಂದು ದೂರಿದರು. 

ಡಿಎಸ್‍ಎಸ್ ಮುಖಂಡ ಯು.ಬಿ.ಮಂಜಯ್ಯ ಮಾತನಾಡಿ, ಟಿಪ್ಪು ಸುಲ್ತಾನ್ ಸೇನೆಯಲ್ಲಿ ಶೇ.90ರಷ್ಟು ಮಂದಿ ಹಿಂದು ಸೈನಿಕರಿದ್ದರು. ಓಪ್ಪು ಸುಲ್ತಾನ್ ಹಿಂದು ವಿರೋಧಿಯಾಗಿ ಮುಸ್ಲಿಮರನ್ನು ಮೆಚ್ಚಿಸಿ, ಹಿಂದುಗಳನ್ನೇ ಕೊಂದು ಹಾಕಿದ್ದರೆ ಕರ್ನಾಟಕ ಮುಸ್ಲಿಂ ರಾಜ್ಯವಾಗುತ್ತಿತ್ತು. ಈಗ ಕರ್ನಾಟಕದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರೆಂದು ಸರ್ಕಾರವೇ ಘೋಷಿಸಿದೆ. ಒಂದು ವೇಳೆ ಮುಸ್ಲಿಮರು ಹೆಚ್ಚಾಗಿದ್ದರೆ ಅಲ್ಪಸಂಖ್ಯಾತರಾಗುತ್ತಿದ್ದರೇ ಎಂದು ಪ್ರಶ್ನಿಸಿದ ಅವರು, ಟಿಪ್ಪು ಸುಲ್ತಾನ್ ದೇವಸ್ಥಾನಗಳನ್ನು, ಮಠ-ಮಂದಿರಗಳನ್ನು ಕಟ್ಟಿದ್ದಾರೆಯೇ ಹೊರತು ಮಸೀದಿಗಳನ್ನು ನಿರ್ಮಿಸಿದ ಉದಾಹರಣೆಯಿಲ್ಲ. ಕೋಮುವಾದಿಗಳ ಕಣ್ಣಿಗೆ ಮಾತ್ರ ಟಿಪ್ಪು ಸುಲ್ತಾನ್ ಕಳನಾಯಕನಾಗಿ ಕಾಣುತ್ತಿರುವುದು ದುರಂತ ಎಂದು ಹೇಳಿದರು. 

ಮುಸ್ಲಿಂ ಮುಖಂಡ ಅಲ್ತಾಫ್ ಬಿಳಗುಳ ಮಾತನಾಡಿ, ದೇಶ ಕಂಡ ಅಪ್ರತಿಮ ದೊರೆಯ ಜಯಂತಿಯನ್ನು ಸಾರ್ವಜನಿಕವಾಗಿ ಆಚರಿಸಲು ರಾಜ್ಯ ಸರ್ಕಾರ ತಡೆಯೊಡ್ಡುತ್ತಿರುವುದು ಸರಿಯಲ್ಲ. ಇಂತಹ ಧೋರಣೆಯಿಂದ ಸರ್ಕಾರ ಹಿಂದೆ ಸರಿದು, ಸಾರ್ವಜನಿಕರಿಗೆ ಜಯಂತಿ ಆಚರಿಸಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು. 

ಪ್ರಾರಂಭದಲ್ಲಿ ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಸಾಗಿ ತಾಲೂಕು ಕಚೇರಿಯಲ್ಲಿ ಸಮಾವೇಶಗೊಂಡು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಮುಖಂಡರಾದ ಲೋಕವಳ್ಳಿ ರಮೇಶ್, ಶಬ್ಬೀರ್ ಅಹ್ಮದ್ ಬೇಗ್, ಅಲ್ತಾಫ್ ಬಿಳಗುಳ, ಎ.ಸಿ.ಅಯೂಬ್ ಹಾಜಿ, ಬಿ.ರಾಮ, ಸಬ್ಬೇನಹಳ್ಳಿ ಹಸನಬ್ಬ, ಚಂದ್ರಶೇಖರ್‍ನಾಯ್ಕ್, ಪಿ.ಕೆ.ಮಂಜುನಾಥ್, ಶ್ರೀಕಾಂತ್, ಹಮೀದ್, ರತನ್ ಊರುಬಗೆ, ವಕೀಲ ಚಂದ್ರು, ಯಾಕೂಬ್ ಗೋಣಿಗದ್ದೆ, ಝಾಕಿರ್ ಹುಸೇನ್, ಡಿ.ವೈ.ಅಬ್ದುಲ್ ಖಾದರ್ ಮತ್ತಿತರರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News