ಮೈಸೂರು: ಭತ್ತದ ಖರೀದಿ ಕೇಂದ್ರ ಆರಂಭಿಸಲು ಒತ್ತಾಯಿಸಿ ರೈತರ ಪ್ರತಿಭಟನೆ
ಮೈಸೂರು,ನ.30: ಭತ್ತದ ಖರೀದಿ ಕೇಂದ್ರ ಆರಂಭ ಹಾಗೂ ಕಬ್ಬು ಕಟಾವು ಕೂಲಿ ಏರಿಕೆ ತಪ್ಪಿಸಲು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ ವತಿಯಿಂದ ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಯಿತು.
ಸರ್ಕಾರ ಭತ್ತದ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಲು ವಿಳಂಬ ಮಾಡುತ್ತಿದ್ದು, ಭತ್ತದ ಬೆಲೆ ಕುಸಿಯುತ್ತಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರ ತಕ್ಷಣವೇ ಎಲ್ಲಾ ಜಿಲ್ಲೆಗಳ ತಾಲೂಕು ಕೇಂದ್ರಗಳಲ್ಲಿ ಭತ್ತದ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಪ್ರತಿ ಕ್ವಿಂಟಾಲ್ ಗೆ ಕನಿಷ್ಠ 2000 ರೂ. ಬೆಂಬಲ ಬೆಲೆ ನಿಗದಿಗೊಳಿಸಬೇಕು ಎಂದು ಒತ್ತಾಯಿಸಿದರು.
ಬಣ್ಣಾರಿ ಸಕ್ಕರೆ ಕಾರ್ಖಾನೆಯು ಹೊರ ಜಿಲ್ಲೆಗಳಿಂದ ಕಡಿಮೆ ದರಕ್ಕೆ ಕಬ್ಬು ಖರೀದಿಸಿ ತಂದು ಅರೆದು, ರೈತರನ್ನು ವಂಚಿಸುತ್ತಿದ್ದಾರೆ. ಇದರಿಂದ ಸ್ಥಳೀಯ ರೈತರ ಕಬ್ಬು 14-15 ತಿಂಗಳುಗಳು ಆದರೂ ಕಟಾವು ಆಗುತ್ತಿಲ್ಲ. ಇದರಿಂದ ಕಟಾವು ಕೂಲಿ 700 ರೂ.ಗಳಿಗೆ ಏರಿದೆ. ಕಾರ್ಖಾನೆ ಫೀಲ್ಡ್ ಮನ್ ಗಳು ಅನಧಿಕೃತವಾಗಿ ರೈತರಿಂದ ಕಟಾವು ಕೂಲಿಯನ್ನು ಹೆಚ್ಚುವರಿಯಾಗಿ 200 ರೂ.ಗಳನ್ನು ವಸೂಲಿ ಮಾಡಿ ತೂಕದ ಚೀಟಿಯಲ್ಲಿ ಕಡಿಮೆ ಕೂಲಿಯನ್ನು ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಸಕ್ತ ಸಾಲಿನ ಕಬ್ಬಿನ ಎಫ್‍ಆರ್ ಪಿ ದರ ರೈತರಿಗೆ ನ್ಯಾಯಸಮ್ಮತವಾಗಿ ನಿರ್ಧಾರವಾಗಿಲ್ಲ. ಎಫ್‍ಆರ್ ಪಿ ದರವನ್ನು ರೈತರ ಹೊಲದಲ್ಲಿನ ದರ ಎಂದು ಘೋಷಿಸಬೇಕು. ಕಳೆದ ವರ್ಷದ ಎಸ್‍ಎಪಿ ದರದ ಬಾಬ್ತು ಪ್ರತಿ ಟನ್ ಗೆ 200 ರೂ. ಕೊಡಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೂ ಮುನ್ನ ನಗರದ ಗನ್ ಹೌಸ್ ಸರ್ಕಲ್ ನಲ್ಲಿರುವ ಸಂಘದ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದರು.
ಪ್ರತಿಭಟನೆಯಲ್ಲಿ ಪಿ.ಸೋಮಶೇಖರ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕಿರಗಸೂರು ಶಂಕರ್, ಅತ್ತಹಳ್ಳಿ ದೇವರಾಜ್, ವರಕೋಡು ಕೃಷ್ಣೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.