ಕರ್ತಾರ್‌ಪುರ್ ಕಾರಿಡಾರ್: ಸಂಬಂಧ ಸುಧಾರಣೆಯಲ್ಲಿ ಹೊಸ ಹೆಜ್ಜೆ

Update: 2018-11-30 18:49 GMT

 ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೊತೆಗೆ ಮಾತುಕತೆಗೆ ತಾವು ಸಿದ್ಧವಿರುವುದಾಗಿ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಹೇಳಿದ್ದು ಸ್ವಾಗತಾರ್ಹವಾಗಿದೆ. ಕರ್ತಾರ್‌ಪುರ್ ಕಾರಿಡಾರ್ ನಿರ್ಮಾಣ ಯೋಜನೆಗೆ ಅಡಿಗಲ್ಲು ಹಾಕುವ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದ ಭಾರತೀಯ ಪತ್ರಕರ್ತರೊಂದಿಗೆ ಮಾತಾಡಿದ ಇಮ್ರಾನ್ ಖಾನ್, ಉಗ್ರಗಾಮಿ ಚಟುವಟಿಕೆಗಳಿಗೆ ಪಾಕಿಸ್ತಾನದ ನೆಲವನ್ನು ಬಳಸಿಕೊಳ್ಳಲು ಅವಕಾಶ ನೀಡುವುದು ತನ್ನ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನ ಶಾಂತಿ ಬಯಸುತ್ತದೆ ಎಂದು ಹೇಳಿದ್ದಾರೆ.

 ಭಾರತ-ಪಾಕಿಸ್ತಾನ ನೆರೆಹೊರೆಯ ದೇಶಗಳು. ಸೌಹಾರ್ದದಿಂದ ಬಾಳುವುದು ಎರಡೂ ದೇಶಗಳಿಗೆ ಕ್ಷೇಮ. ಅಕ್ಕಪಕ್ಕದಲ್ಲಿರುವ ದೇಶಗಳು ಸದಾ ಕಚ್ಚಾಡುತ್ತಿರುವುದು ಒಳ್ಳೆಯದಲ್ಲ. ಈ ವಿವೇಕ ಪಾಕಿಸ್ತಾನಕ್ಕೆ ಮಾತ್ರವಲ್ಲ ಭಾರತದಲ್ಲಿನ ಯುದ್ಧವಾದಿಗಳಿಗೂ ಇರಬೇಕಾಗಿದೆ. ಭಾರತ, ಪಾಕಿಸ್ತಾನ ಎರಡೂ ದೇಶಗಳ ಜನತೆಗೆ ಯುದ್ಧ ಬೇಕಾಗಿಲ್ಲ, ಉಭಯ ದೇಶಗಳ ಜನರ ನಡುವೆ ಕರುಳುಬಳ್ಳಿಯ ಸಂಬಂಧವಿದೆ. ಆದರೆ ಎರಡೂ ದೇಶಗಳ ರಾಜಕಾರಣಿಗಳ ತಪ್ಪಿನಿಂದ ಸಮಸ್ಯೆ ಉಲ್ಬಣಿಸುತ್ತಿದೆ. ಎರಡೂ ದೇಶಗಳ ನಡುವಿನ ಸಂಘರ್ಷದಿಂದ ಮೂರನೆಯವರಿಗೆ ಲಾಭವಾಗುತ್ತಿದೆ. ಶಾಂತಿ, ಸಹಬಾಳ್ವೆ ಇದ್ದಲ್ಲಿ ನೆಮ್ಮದಿ, ಅಭಿವೃದ್ಧಿ ಇರುತ್ತದೆ. ಕಲಹ ವಿನಾಶಕ್ಕೆ ನಾಂದಿಯಾಗುತ್ತದೆ. ಉಭಯ ದೇಶಗಳ ನಡುವಿನ ಸಂಬಂಧ ಸುಧಾರಣೆಗೆ ಆಗಾಗ ಮಾತುಕತೆಗಳು ನಡೆಯುತ್ತಲೇ ಇವೆ. ಆದರೆ ಯಶಸ್ವಿಯಾಗಿಲ್ಲ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಲಾಹೋರ್‌ಗೆ ಸಂಜೋತಾ ಎಕ್ಸ್‌ಪ್ರೆಸ್ ರೈಲು ಸಂಪರ್ಕ ಕಲ್ಪಿಸಲಾಯಿತು. ಇದಕ್ಕೆ ಬಿಜೆಪಿಯೊಳಗೆ ಅಪಸ್ವರ ಕೇಳಿಬಂದಿತ್ತು, ಈಗ ಕರ್ತಾರ್‌ಪುರ್ ಕಾರಿಡಾರ್ ನಿರ್ಮಾಣ ಯೋಜನೆಯಿಂದ ಉಭಯ ದೇಶಗಳ ಸಂಬಂಧ ಸುಧಾರಣೆಯ ಬಗ್ಗೆ ಹೊಸ ಭರವಸೆ ಮೂಡಿದಂತಾಗಿದೆ. ಸಿಖ್ಖರ ಪುಣ್ಯಕ್ಷೇತ್ರ ಕರ್ತಾರ್‌ಪುರ್ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಕಾರಿಡಾರ್ ನಿರ್ಮಿಸುವ ಯೋಜನೆ ಇಂಥ ಭರವಸೆಗೆ ಕಾರಣ. ಸಿಖ್ ಧರ್ಮ ಸಂಸ್ಥಾಪಕ ಗುರು ನಾನಕ್‌ದೇವ್ ತಮ್ಮ ಕೊನೆಯ 18 ವರ್ಷಗಳನ್ನು ಕರ್ತಾರ್‌ಪುರದಲ್ಲೇ ಕಳೆದಿದ್ದರು. ಧರ್ಮ ಸ್ಥಾಪನೆಗಾಗಿ ಅವರು ಸಿಖ್ಖರನ್ನು ಒಗ್ಗೂಡಿಸಿದ ಕ್ಷೇತ್ರ ಇದು.

ಈ ಧಾರ್ಮಿಕ ಕಾರಿಡಾರ್ ಸ್ಥಾಪನೆಯಿಂದ ಉಭಯ ದೇಶಗಳ ಸಂಬಂಧ ಸುಧಾರಣೆಯಾಗುತ್ತದೆ ಎಂದು ಗಡಿ ಭಾಗದ ಜನರು ಅಭಿಪ್ರಾಯ ಪಡುತ್ತಾರೆ. ಆದರೆ ಇದಿಷ್ಟರಿಂದಲೇ ಸಂಬಂಧ ಒಮ್ಮಿಂದೊಮ್ಮೆಲೇ ಸುಧಾರಣೆಯಾಗುವುದಿಲ್ಲ. ಕರ್ತಾರ್‌ಪುರ್ ಕಾರಿಡಾರ್ ನಿರ್ಮಾಣವನ್ನು ಜರ್ಮನ್ ಗೋಡೆ ಉರುಳಿ ಬಿದ್ದುದಕ್ಕೆ ಪ್ರಧಾನಿ ಮೋದಿ ಹೋಲಿಸಿದ್ದು ಅತಿಯಾದ ನಿರೀಕ್ಷೆಯಾಗುತ್ತದೆ. ಅಂತಲೇ ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಾಗಿ ಸಾಗುವುದು ಸಾಧ್ಯವಿಲ್ಲ ಎಂದು ವಿದೇಶಾಂಗ ವ್ಯವಹಾರ ಸಚಿವೆ ಸುಶ್ಮಾ ಸ್ವರಾಜ್ ಹೇಳಿದ್ದು ಗಮನಾರ್ಹವಾಗಿದೆ.ಸಾರ್ಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ನೀಡಿದ ಆಹ್ವಾನವನ್ನು ಭಾರತ ತಿರಸ್ಕರಿಸಿದೆ. ಇಂಥ ಸನ್ನಿವೇಶದಲ್ಲಿ ಕರ್ತಾರ್‌ಪುರ್ ಕಾರಿಡಾರ್ ನಿರ್ಮಾಣದ ಶ್ರೇಯಸ್ಸು ತಮಗೆ ಸಿಗಬೇಕೆಂದು ಎರಡೂ ರಾಷ್ಟ್ರಗಳ ಸರಕಾರಗಳು ಹೇಳಿಕೊಳ್ಳುತ್ತಿವೆ. ಅದೇನೇ ಇರಲಿ, ಭಾರತ ಮತ್ತು ಪಾಕಿಸ್ತಾನದ ಸಂಬಂಧ ಸುಧಾರಣೆ ಎರಡೂ ದೇಶಗಳ ಹಿತದೃಷ್ಟಿಯಿಂದ ಕ್ಷೇಮ.

ಈ ಕಾರಿಡಾರ್ ಬಗ್ಗೆ ಕೆಲ ವಿಷಯಗಳು ಸ್ಪಷ್ಟವಾಗಬೇಕಾಗಿದೆ. ಈ ಪುಣ್ಯಕ್ಷೇತ್ರಕ್ಕೆ ವಿಶೇಷ ಸಂದರ್ಭದಲ್ಲಿ ಮಾತ್ರ ಭೇಟಿಗೆ ಅವಕಾಶ ಇರುತ್ತದೆಯೇ? ಅಥವಾ ವರ್ಷಪೂರ್ತಿ ಎಲ್ಲ ದಿನಗಳಲ್ಲಿ ಯಾತ್ರಾರ್ಥಿಗಳಿಗೆ ಅವಕಾಶ ನೀಡಲಾಗುತ್ತದೆಯೇ? ಯಾತ್ರಾರ್ಥಿಗಳು ಗುಂಪಾಗಿ ಹೋಗಬೇಕೇ? ಇಲ್ಲ ಒಂಟಿಯಾಗಿ ಹೋದರೆ ನಡೆಯುತ್ತದೆಯೇ? ಅಲ್ಲಿ ಎಷ್ಟು ದಿನ ತಂಗಬಹುದು? ಇದರ ಬಗ್ಗೆ ಗೊಂದಲ ನಿವಾರಣೆಯಾಗಬೇಕಾಗಿದೆ. ಕರ್ತಾರ್‌ಪುರ್ ಕಾರಿಡಾರ್‌ನಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧ ಒಮ್ಮಿಂದೊಮ್ಮೆಲೆ ಸುಧಾರಣೆಯಾಗದಿದ್ದರೂ ಸಂಬಂಧ ಸುಧಾರಣೆಯ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಮುಂದಿನ ವರ್ಷ ನಡೆಯಲಿರುವ ಗುರುನಾನಕ್‌ರ 550ನೇ ಜನ್ಮದಿನೋತ್ಸವದ ನಿಮಿತ್ತ ಕೈಗೊಳ್ಳಲಾದ ಈ ಯೋಜನೆ ಎರಡೂ ದೇಶಗಳ ಸಂಬಂಧ ಸುಧಾರಣೆಗೆ ನಾಂದಿಯಾಗಲಿ.

ಭಾರತ-ಪಾಕಿಸ್ತಾನ ಎರಡೂ ಬೇರೆ ಬೇರೆ ದೇಶಗಳಾಗಿರಬಹುದು. 1947ಕ್ಕೆ ಮೊದಲು ಪಾಕಿಸ್ತಾನ ಭಾರತದ ಭಾಗವಾಗಿತ್ತು. ದೇಶ ಎರಡಾದ ನಂತರ ಯಾತ್ರಾಸ್ಥಳಗಳೂ ಎರಡೂ ಕಡೆ ಹಂಚಿ ಹೋದವು. ಹಾಗಾಗಿ ಭಾರತದ ಜನರ ಶ್ರದ್ಧಾತಾಣಗಳು ಪಾಕಿಸ್ತಾನದಲ್ಲಿರುವಂತೆ ಪಾಕಿಸ್ತಾನದ ಜನರ ಯಾತ್ರಾಸ್ಥಳಗಳು ಭಾರತದಲ್ಲಿವೆ. ಅಂತಲೇ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಭಾರತ-ಪಾಕಿಸ್ತಾನಗಳು 1974ರಲ್ಲಿ ಒಪ್ಪಂದವೊಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದದ ಪ್ರಕಾರ ಎರಡೂ ದೇಶಗಳಲ್ಲಿರುವ ಮಂದಿರ, ದರ್ಗಾಗಳ ಭೇಟಿಗಾಗಿ ಎರಡೂ ದೇಶಗಳು ಸಂದರ್ಶಕ ವೀಸಾ ನೀಡುತ್ತವೆ. ಆದರೆ ಈಗಿನ ಕಾರಿಡಾರ್‌ವೀಸಾ ಮುಕ್ತ ಕಾರಿಡಾರ್ ಆಗಿದೆ. ಇದರಿಂದ ಭಾರತೀಯರಿಗೆ ಅನುಕೂಲವಾಗಿದೆ.

ಯಾತ್ರಾಸ್ಥಳಗಳ ಭೇಟಿ ಕುರಿತು ಇಮ್ರಾನ್ ಖಾನ್ ಉದಾರ ನೀತಿ ತಾಳಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇರುವ ಶಾರದಾಪೀಠ ಸೇರಿದಂತೆ ಹಿಂದೂ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಲು ಭಾರತೀಯರಿಗೆ ಅವಕಾಶ ಕಲ್ಪಿಸುವ ಬಗ್ಗೆ ಪರಿಶೀಲಿಸುವುದಾಗಿ ಅವರು ಹೇಳಿದ್ದಾರೆ. ಶಾರದಾ ಸರ್ವಜ್ಞ ಪೀಠಕ್ಕೆ ಹೋಗಿ ಬರಲು ಅವಕಾಶ ಮಾಡಿಕೊಡಬೇಕೆಂದು ಶೃಂಗೇರಿ ಮಠದ ಆಡಳಿತಾಧಿಕಾರಿಗಳು ಆಗ್ರಹಿಸಿದ್ದನ್ನು ಇಲ್ಲಿ ಗಮನಿಸಬಹುದು. ಜನಸಾಮಾನ್ಯರ ಭಾವನೆಗಳಿಗೆ ಸಂಬಂಧಿಸಿದ ಇಂಥ ವಿಷಯಗಳ ಬಗ್ಗೆ ಎರಡೂ ದೇಶಗಳ ಸರಕಾರಗಳು ಸಕಾರಾತ್ಮಕವಾಗಿ ವರ್ತಿಸಬೇಕು. ಜನ ಸಾಮಾನ್ಯರು ಪರಸ್ಪರ ಬೆರೆಯಲು ಇಷ್ಟಪಡುತ್ತಿರುವಾಗ ಸರಕಾರಗಳ ನಡುವೆ ಇರುವ ಕಿರಿ ಕಿರಿ ಅಡ್ಡಿಯಾಗಬಾರದು. ಎರಡೂ ರಾಷ್ಟ್ರಗಳು ಪೂರಕವಾಗಿ ಸ್ಪಂದಿಸಬೇಕು. ಜನರು ಒಂದಾಗಿ ಬೆಸೆಯಲು ಅವಕಾಶ ನೀಡಿದರೆ ಎರಡೂ ದೇಶಗಳ ನಡುವಿನ ವೈಷಮ್ಯ ತನ್ನಿಂದ ತಾನೆ ನಿವಾರಣೆಯಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News