ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ಮಡಿಕೇರಿಯಲ್ಲಿ ಶೋಭಾಯಾತ್ರೆ

Update: 2018-12-01 13:41 GMT

ಮಡಿಕೇರಿ, ಡಿ.1: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಮಾಡಲು ಕೇಂದ್ರ ಸರಕಾರ ಸಂಸತ್ತಿನಲ್ಲಿ ಮಸೂದೆ ಮಂಡಿಸುವಂತೆ ಒತ್ತಾಯಿಸಿ ವಿಶ್ವಹಿಂದೂ ಪರಿಷದ್ ಹಾಗೂ ಬಜರಂಗದಳದ ವತಿಯಿಂದ ಶನಿವಾರ ನಗರದಲ್ಲಿ ಆಯೋಜಿಸಿದ್ದ ಜನಾಗ್ರಹ ಸಭೆಯ ಅಂಗವಾಗಿ ಅಪರಾಹ್ನ ನಗರದ ಬನ್ನಿಮಂಟಪದ ಬಳಿಯಿಂದ ಶೋಭಾಯಾತ್ರೆ ನಡೆಯಿತು.

ಶೋಭಾಯಾತ್ರೆಯ ಮುಂಚೂಣಿಯಲ್ಲಿ ಮಹಿಳೆಯರು ಪೂರ್ಣಕುಂಭ ಕಳಶ ಹಿಡಿದು ಮುನ್ನಡೆದರು. ಕೇರಳದ ಚೆಂಡೆ ವಾದ್ಯ ಮೇಳ, ರಾಮನ ಸ್ತಬ್ಧಚಿತ್ರ ಹೊತ್ತ ವಾಹನ, ಅದಾದ ನಂತರ ನಗರದ ವಿವಿಧ ದೇವಾಲಯಗಳು ಹಾಗೂ ಜಿಲ್ಲೆಯ ವಿವಿಧೆಡೆಗಳಿಂದ ದೇವಾನುದೇವತೆಗಳ ಕಲಾಕೃತಿಗಳನ್ನು ಹೊಂದಿದ 15ಕ್ಕೂ ಅಧಿಕ ಸ್ಥಬ್ಧಚಿತ್ರಗಳು ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಶೋಭಾಯಾತ್ರೆಗೆ ಮೆರಗು ನೀಡಿದವು.

ಆಯಾ ಸ್ತಬ್ಧಚಿತ್ರಗಳ ಜೊತೆಗೆ ಸಹಸ್ರಾರು ಮಂದಿ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು. ಶೋಭಾಯಾತ್ರೆಯಲ್ಲಿ ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ, ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಸೇರಿದಂತೆ ಹಲವು ಮಂದಿ ಜನಪ್ರತಿನಿಧಿಗಳು, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್, ಪ್ರಧಾನ ಕಾರ್ಯದರ್ಶಿಗಳಾದ ರವಿಕುಶಾಲಪ್ಪ, ರಾಬಿನ್ ದೇವಯ್ಯ, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಯಮುನಾ ಚೆಂಗಪ್ಪ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ವಿಶ್ವಹಿಂದೂ ಪರಿಷದ್, ಬಜರಂಗದಳದ ಪ್ರಮುಖರು ಮುಂಚೂಣಿಯಲ್ಲಿದ್ದರು.

ಬಿಗಿ ಪೊಲೀಸ್ ಬಂದೋ ಬಸ್ತ್
ಶೋಭಾಯಾತ್ರೆ ಸಾಗುವ ಮಾರ್ಗದುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೇಕರ್, ಡಿವೈಎಸ್‍ಪಿ ಸುಂದರರಾಜ್ ಅವರ ನೇತೃತ್ವದಲ್ಲಿ ಕೊಡಗು, ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳ ಸುಮಾರು ಒಂದು ಸಾವಿರ ಪೊಲೀಸರನ್ನು ಬಂದೋಬಸ್ತ್ ಗಾಗಿ ನಿಯೋಜಿಸಲಾಗಿತ್ತು.

ಮಡಿಕೇರಿ ಮಾರುಕಟ್ಟೆ ಸಮೀಪದ ಮಸೀದಿ ಬಳಿ ವೀರಾಜಪೇಟೆ ಡಿವೈಎಸ್‍ಪಿ ನಾಗಪ್ಪ ಅವರ ನೇತೃತ್ವದಲ್ಲಿ ಕೆಎಸ್‍ಆರ್‍ಪಿ ತುಕಡಿ ಹಾಗೂ ಸಿವಿಲ್ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು. ಮಸೀದಿ ಬಳಿ ಸ್ವತಃ ಸುಮನ್ ಪನ್ನೇಕರ್ ಹಾಜರಿದ್ದು ಮೆರವಣಿಗೆಯನ್ನು ನಿಯಂತ್ರಿಸಿದರು.
ನಗರದ ಇಂದಿರಾಗಾಂಧಿ ವೃತ್ತ, ಖಾಸಗಿ ಬಸ್ ನಿಲ್ದಾಣದ ಮೂಲಕ ಮುಖ್ಯ ರಸ್ತೆಯಲ್ಲಿ ಜನರಲ್ ತಿಮ್ಮಯ್ಯ ವೃತ್ತದ ಮೂಲಕ ಸಂಜೆ 5 ಗಂಟೆ ಸುಮಾರಿಗೆ ಶೋಭಾಯಾತ್ರೆ ನಗರದ ಗಾಂಧಿ ಮೈದಾನ ಪ್ರವೇಶಿಸುವ ಮೂಲಕ ಸಮಾಪನಗೊಂಡಿತು. ಗಾಂಧಿ ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News