ಬಾಗೇಪಲ್ಲಿ: ಕುಂದು ಕೊರತೆಗಳ ಸಭೆಯಲ್ಲಿ ಪುರಸಭೆ ಸದಸ್ಯ-ಶಾಸಕರ ನಡುವೆ ವಾಕ್ಸಮರ

Update: 2018-12-01 13:51 GMT

ಬಾಗೇಪಲ್ಲಿ,ಡಿ.1: ಪುರಸಭೆ ಸದಸ್ಯರು ಹಾಗೂ ಶಾಸಕರ ನಡುವೆ ಮಾತಿನ ಚಕಮಕಿ ನಡೆದು ಸ್ವಲ್ಪ ಕಾಲ ಸಭೆಯಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾದ ಘಟನೆ ಶನಿವಾರ ಪುರಸಭೆ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷೆ ಮಮತ ನಾಗರಾಜರೆಡ್ಡಿ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಕುಂದು ಕೊರತೆಗಳ ಸಭೆ ಪ್ರಾರಂಭವಾಗುತ್ತಿದ್ದಂತೆ ಪುರಸಭೆ ಸದಸ್ಯ ಮುಹಮದ್ ಅಕ್ರಂ ಮಾತನಾಡಿ, ನಗರೋತ್ಥಾನ ಕಾರ್ಯಕ್ರಮದಲ್ಲಿ ಪಟ್ಟಣದ ಅನೇಕ ವಾರ್ಡ್‍ಗಳಲ್ಲಿ ರಸ್ತೆ ನಿರ್ಮಾಣ ಮಾಡಲು ಜಲ್ಲಿ ಹಾಕಿ ಸುಮಾರು 4 ತಿಂಗಳು ಕಳೆದಿದೆ. ಆದರೆ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಸಾರ್ವಜನಿಕರು ಓಡಾಡಲು ತುಂಬ ತೊಂದರೆಯಾಗುತ್ತಿದೆ ಎಂದರು. ಇದಕ್ಕೆ ಶಾಸಕರು ಉತ್ತರಿಸಿ, ಗುತ್ತಿಗೆದಾರನೊಂದಿಗೆ ಮಾತನಾಡಿದ್ದೇನೆ. 2 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಹಮದ್ ಅಕ್ರಂ, ಪ್ರತಿ ಸಭೆಯಲ್ಲಿ ಈ ವಿಷಯದಲ್ಲಿ ಗಲಾಟೆ ಮಾಡಲಾಗುತ್ತಿದೆ. ಆದರೆ ಪ್ರಯೋಜನವಾಗಿಲ್ಲ ಎಂದರು. ಇದಕ್ಕೆ ಶಾಸಕರು ಮದ್ಯಪ್ರವೇಶ ಮಾಡಿ ಮಾತನಾಡಿ, ನಾನು ಖಾತೆ ಬದಲಾವಣೆ ವಿಷಯ ಚರ್ಚೆ ಮಾಡಲು ಸಭೆ ಕರೆದಿದ್ದೇನೆ. ಪಟ್ಟಣದ ಕಾಮಗಾರಿಗಳ ವಿಷಯದಲ್ಲಿ ನನ್ನನ್ನು ಕೇಳಲು ನಿಮಗೆ ಅಧಿಕಾರವಿಲ್ಲ ಎಂದರು. ಈ ಸಂದರ್ಭ ಸದಸ್ಯ ಮುಹಮದ್ ಅಕ್ರಂ, ಆದರೆ ನೀವು ಏಕೆ ಈ ಸಭೆಗೆ ಬಂದಿದ್ದೀರಿ ಎಂದು ಕೇಳಿದರು. ಇದರಿಂದ ಕುಪಿತರಾದ ಸದಸ್ಯರಾದ ಎ.ನಂಜುಂಡ, ಮದುಸೂದನರೆಡ್ಡಿ, ಅ.ನಾ.ಮೂರ್ತಿ, ಚೆನ್ನಮ್ಮ ಅವರು ಮಹಮದ್ ಅಕ್ರಂರ ಮಾತನ್ನು ಖಂಡಿಸಿ, ಹೇಳಿಕೆ ವಾಪಸ್ ಪಡೆಯಿರಿ ಎಂದು ಆಗ್ರಹಿಸಿದರು.

ಇದಕ್ಕೆ ಶಾಸಕರು ಉತ್ತರಿಸಿ ನಾನು ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಚರ್ಚೆ ಮಾಡಲು ಬಂದಿದ್ದೇನೆ. ಪುರಸಭೆ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇನೆ. ಅನಗತ್ಯವಾಗಿ ಸದಸ್ಯರು ಹೇಳಿಕೆಗಳನ್ನು ನೀಡಬಾರದು ಎಂದರು. ಈ ವೇಳೆ ಇಬ್ಬರ ನಡುವೆ ಪರಸ್ಪರ ವಾಕ್ಸಮರ ನಡೆಯಿತು.

ಪಟ್ಟಣದಲ್ಲಿ ಪಾರ್ಕಿಂಗ್ ವ್ಯವಸ್ಥೆ, ಆಟೋಗಳ ನಿಲ್ದಾಣ, ರಸ್ತೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಪಂಕಜಾರೆಡ್ಡಿ, ಪೋಲೀಸ್ ವೃತ್ತ ನಿರೀಕ್ಷಕ ನಯಾಜ್ ಬೇಗ್, ಉಪಾಧ್ಯಕ್ಷೆ ಹುಸೇನ್ ಬೀ, ಸ್ಥಾಯಿ ಸಮಿತಿ ಅಧ್ಯಕ್ಷ ಆಶೋಕರೆಡ್ಡಿ, ಸದಸ್ಯರಾದ ನಂಜುಂಡಪ್ಪ, ವನಜ ರವಿ, ಜಬೀವುಲ್ಲಾ, ವೇಣು, ಬಾಸ್ಕರ್, ರಾಧಮ್ಮ, ಅಕಲ ರವಿ, ಶಬಾನ, ಮರಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News