ಪ್ರವಾಹ-ಬರಪೀಡಿತ ಪ್ರದೇಶಗಳ ಅಧ್ಯಯನಕ್ಕೆ ಸಚಿವ ಸಂಪುಟ ಉಪ ಸಮಿತಿಗಳ ರಚನೆ

Update: 2018-12-01 14:02 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ.1: ರಾಜ್ಯದ ಪ್ರವಾಹ ಹಾಗೂ ಬರಪೀಡಿತ ಪ್ರದೇಶಗಳ ಅಧ್ಯಯನ, ಪ್ರವಾಹ ಪರಿಹಾರ ಹಾಗೂ ಬರ ನಿರ್ವಹಣೆಯ ಹಿನ್ನೆಲೆಯಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಯನ್ನು ಜಿಲ್ಲಾವಾರು ಭೇಟಿ ನೀಡಿ, ಅವಶ್ಯವಿರುವ ಪ್ರದೇಶಗಳಲ್ಲಿ ಸ್ಥಳ ಪರಿಶೀಲನೆ ಮಾಡಿ, ಜನತೆ ಹಾಗೂ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ ವಸ್ತುಸ್ಥಿತಿ ವರದಿಯನ್ನು ಸರಕಾರಕ್ಕೆ ನೀಡಲು ಕಂದಾಯ ವಿಭಾಗವಾರು ಸಚಿವ ಸಂಪುಟದ ಉಪ ಸಮಿತಿಗಳನ್ನು ರಚಿಸಲಾಗಿದೆ.

ಬೆಳಗಾವಿ ವಿಭಾಗ: ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅಧ್ಯಕ್ಷತೆಯಲ್ಲಿ ಸಚಿವರಾದ ರಮೇಶ್‌ ಜಾರಕಿಹೊಳಿ, ಶಿವಾನಂದಪಾಟೀಲ್, ಝಮೀರ್‌ ಅಹ್ಮದ್ ಖಾನ್, ಎಂ.ಸಿ.ಮನಗೂಳಿ ಸದಸ್ಯರಾಗಿರುವ ಸಮಿತಿ ರಚಿಸಲಾಗಿದ್ದು, ಸಮನ್ವಯ ಅಧಿಕಾರಿಯಾಗಿ ಕಂದಾಯ ಇಲಾಖೆ(ವಿಪತ್ತು ನಿರ್ವಹಣೆ, ಭೂಮಿ ಹಾಗೂ ಯುಪಿಓಆರ್)ಯ ಸರಕಾರದ ಪ್ರಧಾನ ಕಾರ್ಯದರ್ಶಿಯನ್ನು ನೇಮಕ ಮಾಡಲಾಗಿದೆ.

ಕಲಬುರಗಿ ವಿಭಾಗ: ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಅಧ್ಯಕ್ಷತೆಯಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ರಾಜಶೇಖರ್‌ ಪಾಟೀಲ್ ಹುಮ್ನಾಬಾದ್, ಆರ್.ಶಂಕರ್, ವೆಂಕಟರಾವ್ ನಾಡಗೌಡ ಸದಸ್ಯರಿರುವ ಸಮಿತಿಯನ್ನು ರಚಿಸಲಾಗಿದ್ದು, ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನು ಸಮನ್ವಯ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.

ಬೆಂಗಳೂರು ವಿಭಾಗ: ಕೃಷಿ ಸಚಿವ ಶಿವಶಂಕರರೆಡ್ಡಿ ಅಧ್ಯಕ್ಷತೆಯಲ್ಲಿ ಸಚಿವರಾದ ಡಿ.ಕೆ.ಶಿವಕುಮಾರ್, ವೆಂಕಟರಮಣಪ್ಪ, ಎಸ್.ಆರ್.ಶ್ರೀನಿವಾಸ್, ಡಿ.ಸಿ.ತಮ್ಮಣ್ಣ ಸದಸ್ಯರಿರುವ ಸಮಿತಿಯನ್ನು ರಚಿಸಲಾಗಿದ್ದು, ಕೃಷಿ ಇಲಾಖೆಯ ಕಾರ್ಯದರ್ಶಿಯನ್ನು ಸಮನ್ವಯ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.

ಮೈಸೂರು ವಿಭಾಗ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೃಷ್ಣಭೈರೇಗೌಡ ಅಧ್ಯಕ್ಷತೆಯಲ್ಲಿ ಸಚಿವರಾದ ಎಚ್.ಡಿ.ರೇವಣ್ಣ, ಕೆ.ಜೆ.ಜಾರ್ಜ್, ಯು.ಟಿ.ಖಾದರ್, ಜಿ.ಟಿ.ದೇವೇಗೌಡ, ಸಿ.ಎಸ್.ಪುಟ್ಟರಾಜು, ಸಾ.ರಾ.ಮಹೇಶ್, ಡಾ.ಜಯಮಾಲಾ, ಸಿ.ಪುಟ್ಟರಂಗಶೆಟ್ಟಿ ಸದಸ್ಯರಿರುವ ಸಮಿತಿಯನ್ನು ರಚಿಸಲಾಗಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನು ಸಮನ್ವಯ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.

ಆಯಾ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳು ಸಮನ್ವಯ ಅಧಿಕಾರಿಯಾಗಿ ನೇಮಕಗೊಂಡ ಸರಕಾರದ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳೊಂದಿಗೆ ಸತತ ಸಂಪರ್ಕವಿಟ್ಟುಕೊಂಡು ಸಚಿವ ಸಂಪುಟದ ಉಪ ಸಮಿತಿಯ ಸಭೆಯನ್ನು ನಡೆಸುವ ನಿಟ್ಟಿನಲ್ಲಿ ಅಗತ್ಯ ನೆರವು ನೀಡುವುದು ಹಾಗೂ ಸಮಿತಿ ಬಯಸುವ ಎಲ್ಲ ಮಾಹಿತಿಗಳನ್ನು ಒದಗಿಸಬೇಕು.

ಈ ಸಭೆಗಳಲ್ಲಿ ವಿಭಾಗಮಟ್ಟದ ಹಾಗೂ ಎಲ್ಲ ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳು ಹಾಜರಿದ್ದು, ಉಪ ಸಮಿತಿಗೆ ಬೇಕಾಗುವ ಮಾಹಿತಿಯನ್ನು ಒದಗಿಸುವಂತೆ ನೋಡಿಕೊಳ್ಳುವ ಜವಾಬ್ದಾರಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ ಎಂದು ಕಂದಾಯ ಇಲಾಖೆ(ವಿಪತ್ತು ನಿರ್ವಹಣೆ, ನೋಂದಣಿ ಮತ್ತು ಮುದ್ರಾಂಕ)ಯ ಸರಕಾರದ ಉಪ ಕಾರ್ಯದರ್ಶಿ ಟಿ.ನಾರಾಯಣಪ್ಪ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News