ಸಂಪುಟ ವಿಸ್ತರಣೆಗೆ ಕಾಂಗ್ರೆಸ್‌ನಲ್ಲಿ ಹೆಚ್ಚಿದ ಲಾಬಿ

Update: 2018-12-01 14:32 GMT

ಬೆಂಗಳೂರು, ಡಿ.1: ಸಚಿವ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಪಕ್ಷದಲ್ಲಿ ಲಾಬಿ ತೀವ್ರಗೊಂಡಿದ್ದು, ಶಾಸಕರು, ವಿಧಾನಪರಿಷತ್ ಸದಸ್ಯರು ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಮೇಲೆ ಒತ್ತಡ ಹೇರುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಆರ್.ಬಿ.ತಿಮ್ಮಾಪುರ್, ದಿನೇಶ್‌ ಗುಂಡೂರಾವ್‌ರನ್ನು ಭೇಟಿ ಮಾಡಿ ದಲಿತ ಎಡಗೈ ಕೋಟಾದಡಿಯಲ್ಲಿ ತಮಗೆ ಸಚಿವ ಸ್ಥಾನ ಕಲ್ಪಿಸಬೇಕು. ಈ ಸಂಬಂಧ ಹೈಕಮಾಂಡ್ ಜೊತೆ ಚರ್ಚೆ ಮಾಡುವಂತೆ ಒತ್ತಡ ಹೇರಿದ್ದಾರೆ ಎಂದು ತಿಳಿದು ಬಂದಿದೆ.

ಸಚಿವ ಸ್ಥಾನ ಆಕಾಂಕ್ಷಿಗಳ ಪೈಕಿ ಕೆಲವರು ಡಿಸೆಂಬರ್ 5ರಂದು ಹೊಸದಿಲ್ಲಿಗೆ ತೆರಳುತ್ತಿದ್ದಾರೆ ಎಂಬ ಮಾಹಿತಿಯ ನಡುವೆಯೇ ಆರ್.ಬಿ.ತಿಮ್ಮಾಪುರ್, ದಿನೇಶ್ ಗುಂಡೂರಾವ್‌ರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಜಯನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಬಳಿಕ ಹೆಚ್ಚಾಗಿ ಎಲ್ಲಿಯೂ ಕಾಣಿಸಿಕೊಳ್ಳದ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಶನಿವಾರ ಏಕಾಏಕಿ ಕೆಪಿಸಿಸಿ ಕಚೇರಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದರು. ಸಚಿವ ಸಂಪುಟ ಸೇರ್ಪಡೆಗೆ ಆಸಕ್ತಿಹೊಂದಿರುವ ಅವರು ಕೆಲಕಾಲ ದಿನೇಶ್‌ ಗುಂಡೂರಾವ್ ಜೊತೆ ಚರ್ಚಿಸಿದರು.

ತೆಲಂಗಾಣ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಅಲ್ಪಸಂಖ್ಯಾತರನ್ನು ಓಲೈಸಲಾಗಿದೆ ಎಂದು ಬಿಜೆಪಿ ಮಾಡುತ್ತಿರುವ ಆರೋಪಗಳ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ಒಬ್ಬರನ್ನೇ ಓಲೈಕೆ ಮಾಡುವಂತಹದು ಏನು ಇಲ್ಲ. ಅಧಿಕಾರಕ್ಕೆ ಬಂದರೆ ಎಲ್ಲರಿಗೂ ಅವಕಾಶ ನೀಡುತ್ತೇವೆ ಎಂದರು.

ಅಲ್ಲಿನ ಸ್ಥಳೀಯ ಆದ್ಯತೆ ಗಮನಿಸಿ, ಕಾರ್ಯಕ್ರಮಗಳನ್ನು ಘೋಷಣೆ ಮಾಡಿಕೊಂಡಿರುತ್ತಾರೆ. ಮಸೀದಿಗಳು, ದೇವಸ್ಥಾನಗಳು ಎಲ್ಲದಕ್ಕೂ ಅನುದಾನ ಕೊಡುತ್ತೇವೆ. ಬಿಜೆಪಿಯವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷ ಆಯಿತು. ಇಲ್ಲಿಯವರೆಗೆ ಅವರು ಮಾಡಿದ್ದೇನು ಎಂದು ರಾಮಲಿಂಗಾರೆಡ್ಡಿ ಪ್ರಶ್ನಿಸಿದರು. ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿ ಮಾಡಿದ್ರಾ? ಪ್ರತಿಯೊಬ್ಬ ಪ್ರಜೆಯ ಬ್ಯಾಂಕ್ ಖಾತೆಗಳಿಗೆ 15 ಲಕ್ಷ ರೂ.ಗಳನ್ನು ಹಾಕುವುದಾಗಿ ಹೇಳಿದ್ದರು. ಆ ಹಣ ಬಂತಾ? ಎಂದು ರಾಮಲಿಂಗಾರೆಡ್ಡಿ ಪ್ರಶ್ನಿಸಿದರು.

ಮಾಜಿ ಸಚಿವ ಆರ್.ಬಿ.ತಿಮ್ಮಾಪುರ್ ಮಾತನಾಡಿ, ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶವಿದೆ. ಹಿಂದುಳಿದವರನ್ನು ಮೇಲಕ್ಕೆತ್ತಲು ಅವಕಾಶವಿದೆ. ಮೊಸರಿನಲ್ಲಿ ಕಲ್ಲು ಹುಡುಕುವವರಿಗೆ ಏನು ಹೇಳಬೇಕು. ಜನರನ್ನು ತಪ್ಪು ದಾರಿಗೆಳೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಜಾತಿಗಳನ್ನು ಒಡೆದು ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಎಸ್ಸಿ-ಎಸ್ಟಿ ಮುಂಭಡ್ತಿ ವಿಧೇಯಕ ಜಾರಿ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಾಗಿಯೇ ರಾಜ್ಯ ಸರಕಾರ ಇನ್ನೂ ಅದನ್ನು ಜಾರಿ ಮಾಡಿಲ್ಲ. ಈ ಬಗ್ಗೆ ಗಮನ ಹರಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡುತ್ತೇನೆ ಎಂದರು.

ತೆಲಂಗಾಣ ವಿಧಾನಸಭೆ ಚುನಾವಣೆಯ ಪ್ರಣಾಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಏನೋ ಸ್ವಲ್ಪ ಹೆಚ್ಚಿನ ಅನುದಾನ ನೀಡುವುದಾಗಿ ಹೇಳಿರಬಹುದು. ಅದರ ಅರ್ಥ ಯಾವುದೋ ಒಂದು ಜಾತಿಯನ್ನು ನಾವು ಓಲೈಕೆ ಮಾಡಲು ಮುಂದಾಗಿದ್ದೇವೆ ಅಂತಲ್ಲ ಎಂದರು.

ಜಾತಿ, ಧರ್ಮದ ನಡುವೆ ವಿಷ ಬೀಜ ಬಿತ್ತುವ ಕುತಂತ್ರವನ್ನ ತಡೆಯಬೇಕಿದೆ. ಶೋಷಿತ ಸಮುದಾಯಕ್ಕೆ ಅವಕಾಶ ಕೊಡಬೇಕೆಂಬುದು ನಮ್ಮ ಧ್ಯೇಯ. ಹೀಗಾಗಿಯೇ ಅಲ್ಲಿನ ಹೆಚ್ಚಿನ ಒತ್ತು ನೀಡಲಾಗಿದೆ. ತಳ ಸಮುದಾಯಗಳಿಗೆ ವಿಶೇಷ ಒತ್ತು ನೀಡಿದರೆ ತಪ್ಪೇನು? ಹಿಂದುಳಿದಿರುವವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಈ ಪ್ರಯತ್ನ ಮಾಡಿರಬಹುದು ಎಂದು ಅವರು ಹೇಳಿದರು.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯನ್ನು ಪ್ರಧಾನಿ ಮಾಡಬೇಕು. ನರೇಂದ್ರಮೋದಿಯನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಬೇಕು. ದೇಶದ ನಿರುದ್ಯೋಗಿ ಯುವ ಜನತೆಗೆ 2 ಕೋಟಿ ಉದ್ಯೋಗ ಕೊಡುವುದಾಗಿ ಭರವಸೆ ನೀಡಿ, ಈಗ ಪಕೋಡ ಮಾರಿ ಎಂದು ಹೇಳುತ್ತಾರೆ. ಎಲ್ಲರೂ ಪಕೋಡ ಮಾರಿದರೆ ಅದನ್ನು ಕೊಳ್ಳುವವರು ಯಾರೂ ಎಂದು ಆಂಜನೇಯ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News