ಮಳವಳ್ಳಿ: ಭೀಕರ ರಸ್ತೆ ಅಪಘಾತಕ್ಕೆ ಇಬ್ಬರು ಬಲಿ; ಆರು ಮಂದಿಯ ಸ್ಥಿತಿ ಗಂಭೀರ

Update: 2018-12-01 16:50 GMT

ಮಳವಳ್ಳಿ,ಡಿ.1: ಅತೀ ವೇಗವಾಗಿ ಸಾಗುತ್ತಿದ್ದ ಕಾರೊಂದು ಅಪಘಾತಕ್ಕೀಡಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದು, ಆರು ಮಂದಿ ತೀವ್ರವಾಗಿ ಗಾಯಗೊಂಡ ದುರ್ಘಟನೆ ತಾಲೂಕಿನ ಮಳವಳ್ಳಿ-ಮೈಸೂರು ಮುಖ್ಯ ರಸ್ತೆಯ ಕಿರುಗಾವಲು ಸಮೀಪದ ಬುಳ್ಳಿಕೆಂಪನದೊಡ್ಡಿ ಗ್ರಾಮದ ಬಳಿ ನಡೆದಿದೆ. 

ಕೇರಳದ ಪಾಲ್‍ಕಾಡು ವಾಸಿಗಳಾದ ಹಸನ್ (21) ಹಾಗೂ ವಿಶಾಕ್ (20) ಎಂಬ ಯುವತಿಯೇ ಮೃತಪಟ್ಟವರು. ಇದೇ ಕಾರಿನಲ್ಲಿದ್ದ ನಝೀರ್, ಬೃಂದಾ, ನಿತ್ಯ, ಸಬೀನಾ, ವಿವೇಕ್ ಸೇರಿದಂತೆ ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಗಂಭೀರ ಸ್ಥಿತಿಯಲ್ಲಿರುವ ಇವರನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ಸಾಗಿಸಲಾಗಿದೆ. 

ಚಾಲಕ ಸೇರಿ ಒಟ್ಟು 8 ಮಂದಿ ಈ ಕಾರಿನಲ್ಲಿದ್ದು, ಕೇರಳ ಮೂಲದವರಾದ ಇವರೆಲ್ಲರೂ ಮೈಸೂರಿನ ಇನ್‍ಫೋಸಿಸ್ ಕಂಪೆನಿಯಲ್ಲಿ ತರಬೇತಿ ಪಡೆಯುತ್ತಿದ್ದರು ಎಂದು ಗೊತ್ತಾಗಿದೆ. ವಾರದ ರಜೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಮಳವಳ್ಳಿ ಭಾಗದ ಪ್ರೇಕ್ಷಣೀಯ ಸ್ಥಳಗಳಾದ ಗಗನಚುಕ್ಕಿ, ಭರಚಿಕ್ಕಿ ಜಲಪಾತ, ತಲಕಾಡು, ಮತ್ತಿತರ ಸ್ಥಳಗಳಲ್ಲಿ ಸುತ್ತಾಡಿ ವಾಪಾಸ್ ಮಳವಳ್ಳಿ ಕಡೆಯಿಂದ ಮೈಸೂರಿಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಸಂಜೆ 5.30ರ ಸಮಯದಲ್ಲಿ ಕಿರುಗಾವಲು ಸಮೀಪದ ಬುಳ್ಳಿಕೆಂಪನದೊಡ್ಡಿ ಗ್ರಾಮದ ಬಳಿ ಹೋಗುತ್ತಿದ್ದ ಕಾರು ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯಿಂದಾಗಿ ರಸ್ತೆ ಬದಿಯ ಮರವೊಂದಕ್ಕೆ ಢಿಕ್ಕಿ ಹೊಡೆದು ನಂತರ ರಸ್ತೆ ಬದಿಯ ತೋಪಿಗೆ ನುಗ್ಗಿ ಪಲ್ಟಿ ಹೊಡೆದಿದೆ ಎಂದು ವರದಿಯಾಗಿದೆ. 

ಅಪಘಾತದಲ್ಲಿ ಹಸನ್ ಹಾಗೂ ವಿಶಾಕ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಕಿರುಗಾವಲು ಪೊಲೀಸರು ಶವಗಳನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ಸಾಗಿಸಿ, ಗಾಯಾಳುಗಳನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಯಿತು. ಕಿರುಗಾವಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಗ್ರಾಮಸ್ಥರ ಪ್ರತಿಭಟನೆ: ಅಪಘಾತದಿಂದ ರೊಚ್ಚಿಗೆದ್ದ ಬುಳ್ಳಿಕೆಂಪನದೊಡ್ಡಿ ಗ್ರಾಮಸ್ಥರು ಸರಣಿ ಅಪಘಾತಗಳು ನಡೆಯುತ್ತಿರುವ ಗ್ರಾಮದ ಈ ರಸ್ತೆಯಲ್ಲಿ ರಸ್ತೆದಿಬ್ಬ ನಿರ್ಮಿಸುವಂತೆ ಆಗ್ರಹಿಸಿ ಕೆಲಕಾಲ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಗ್ರಾಮಸ್ಥರನ್ನು ಸಮಾಧಾನಪಡಿಸಿದ ಪೊಲೀಸ್ ಅಧಿಕಾರಿಗಳು ಮೇಲಾಧಿಕಾರಿಗಳ ಗಮನಕ್ಕೆ ತಂದು ರಸ್ತೆದಿಬ್ಬ ನಿರ್ಮಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News