ಅಬಕಾರಿ ಅಧಿಕಾರಿಗೆ ಶಾಸಕ ಸುರೇಶ್‍ಗೌಡ ತರಾಟೆ: ಅಕ್ರಮ ಮದ್ಯ ಮಾರಾಟ ಕಡಿವಾಣ ಹಾಕಲು ತಾಕೀತು

Update: 2018-12-01 17:31 GMT

ನಾಗಮಂಗಲ, ಡಿ.1: ತಾಲೂಕಿನ ಹಳ್ಳಿಹಳ್ಳಿಗಳಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿರುವ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಸಂಬಂಧಿಸಿದ ಅಧಿಕಾರಿಗಳನ್ನು ಶಾಸಕ ಕೆ.ಸುರೇಶ್‍ಗೌಡ ತರಾಟೆಗೆ ತೆಗೆದುಕೊಂಡಿದ್ದಾರೆ.

ಪಾಲಗ್ರಹಾರ ಗ್ರಾಪಂ ವ್ಯಾಪ್ತಿಯ ಪ್ರವಾಸಿತಾಣ ಕೋಟೆಬೆಟ್ಟದಲ್ಲಿ ಶನಿವಾರ ನಡೆದ ಗ್ರಾಮ ದರ್ಶನ ಸಭೆಯಲ್ಲಿ ಗ್ರಾಮಗಳ ಅಂಗಡಿಗಳಲ್ಲಿ ಅಕ್ರಮ ಮದ್ಯಕ್ಕೆ ಕಡಿವಾಣ ಹಾಕುವಂತೆ ಶಾಸಕರಿಗೆ ಮನವಿ ಮಾಡಿದರು.

ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಕೋಟೆ ಬೆಟ್ಟದ ಅಂಗಡಿ ಮುಂಗಟ್ಟುಗಳಲ್ಲಿ ಮದ್ಯ ಮಾರಾಟ ಮಿತಿಮೀರಿದ್ದು ಪ್ರವಾಸಿಗರಿಗೆ ಕಿರಿಕಿರಿಯಾಗುತ್ತಿದೆ. ಕೂಡಲೇ ಕಡಿವಾಣ ಹಾಕಬೇಕು ಎಂದು ಜನರು ಒತ್ತಾಯಿಸಿದರು.

ಪಾಂಡವಪುರ ಅಬಕಾರಿ ಉಪವಿಭಾಗದ ಡಿವೈಎಸ್ಪಿ ದಿವಾಕರ್‍ಗೆ ದೂರವಾಣಿ ಕರೆಮಾಡಿದ ಶಾಸಕ ಸುರೇಶ್‍ಗೌಡ, ಯಾವ ಹಳ್ಳಿಗೆ ಹೋದರೂ ಅಕ್ರಮ ಮದ್ಯ ಮಾರಾಟದ ದೂರು ಬರುತ್ತಿವೆ ಎಂದು ತರಾಟೆಗೆ ತೆಗೆದುಕೊಂಡರು. ಶೀಘ್ರದಲ್ಲೆ ಹಳ್ಳಿಹಳ್ಳಿಗಳಲ್ಲಿ ಮಾರಾಟವಾಗುತ್ತಿರುವ ಅಕ್ರಮ ಮದ್ಯ ಮಾರಾಟ ಬಂದ್ ಆಗಬೇಕು. ಹಳ್ಳಿಗಳಿಗೆ ಮದ್ಯ ಸರಬರಾಜು ನೀಡುತ್ತಿರುವ ಬಾರ್‍ಗಳ ಮೇಲೆ ಹಾಗೂ ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ತಾಕೀತು ಮಾಡಿದರು.

ಶಾಸಕರು ಕೋಟೆಬೆಟ್ಟ ಧಾರ್ಮಿಕ ಪ್ರವಾಸಿತಾಣ ಕ್ಷೇತ್ರವಾಗಿದ್ದು, ಅಕ್ರಮ ಮದ್ಯ ಮಾರಾಟದಿಂದ ಕೆಟ್ಟ ಹೆಸರು ಬರಲಿದೆ. ಪ್ರಕರಣ ದಾಖಲಾದರೆ ನೀವು ಗಳಿಸಿದ ಆದಾಯವೆಲ್ಲ ಅದಕ್ಕೆ ಖರ್ಚು ಮಾಡಬೇಕಾಗುತ್ತದೆ. ದಯಮಾಡಿ ಈ ಮದ್ಯ ಮಾರಾಟ ಬಿಟ್ಟು ಬೇರೊಂದು ಉದ್ಯೋಗದಲ್ಲಿ ತೊಡಗಿಸಿಕೊಳ್ಳಿ ಎಂದು ಸ್ಥಳೀಯರಿಗೆ ಶಾಸಕರು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮಗಳಲ್ಲಿ ಹದಗೆಟ್ಟ ರಸ್ತೆ, ಬಸ್ ಸಂಚಾರ ಅವ್ಯವಸ್ಥೆ, ಪಿಂಚಣಿ ಸಮಸ್ಯೆ, ಜಮೀನು ಖಾತೆ, ವಸತಿ, ವಿದ್ಯುತ್ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಪಾಲಗ್ರಹಾರ ನಲ್ಕುಂದಿ, ದೊಂದೆಮಾದಹಳ್ಳಿ ರಸ್ತೆ ಅಭಿವೃದ್ದಿಗೆ 1.75 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಕೋಟೆಬೆಟ್ಟ ಕ್ಷೇತ್ರ ಅಭಿವೃದ್ದಿಗೆ ಅನುದಾನ ನೀಡಲಾಗುವುದು ಎಂದು ಸುರೇಶ್‍ಗೌಡ ಭರವಸೆ ಇತ್ತರು.

ಸಭೆಯಲ್ಲಿ ತಹಶೀಲ್ದಾರ್ ನಂಜುಂಡಯ್ಯ, ತಾಪಂ ಇಓ ಅನಂತರಾಜು, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಶಾಂತ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರಕಾಶ್‍ಬಾಬು, ಪಿಡಿಓ ಸುರೇಶ್, ಇತರ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News