×
Ad

ಗುಣಮಟ್ಟದ ಶಿಕ್ಷಣಕ್ಕೆ ಸರ್ಕಾರ ನೀಡುವ ಸೌಲಭ್ಯಗಳನ್ನು ಬಳಸಿಕೊಳ್ಳಿ: ರಾಜ್ಯಪಾಲ ವಜೂಭಾಯಿ ವಾಲಾ

Update: 2018-12-01 23:13 IST

ಮೈಸೂರು,ಡಿ.1: ಗುಣಮಟ್ಟದ ಶಿಕ್ಷಣ ನೀಡಲು ಬೇಕಾದ ಸೌಲಭ್ಯ ನೀಡಲು ಸರ್ಕಾರ ಮುಂದಾಗಿರುವುದು ಸಂತೋಷದಾಯಕವಾಗಿದ್ದು, ಈ ಸದುಪಯೋಗವನ್ನು ಎಲ್ಲರೂ ಬಳಸಿಕೊಳ್ಳಬೇಕು ಎಂದು ರಾಜ್ಯಪಾಲ ವಜೂಭಾಯಿ ರೂಢಾಭಾಯಿ ವಾಲಾ ತಿಳಿಸಿದರು.

ಕೆಎಸ್‍ಓಯು ಆವರಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಸುಸಜ್ಜಿತ ಘಟಿಕೋತ್ಸವ ಭವನವನ್ನು ಉದ್ಘಾಟಿಸಿ ಬಳಿಕ ಮಾತನಾಡಿದರು. ಈ ಹಿಂದಿನ ಕುಲಪತಿಗಳಿಂದ ಮಾನ್ಯತೆ ಸಮಸ್ಯೆ ಎದುರಾಗಿತ್ತು. ಇದರಿಂದಾಗಿ ನಾಲ್ಕು ವರ್ಷಗಳ ಕಾಲ ಯುನಿವರ್ಸಿಟಿ ಮುಚ್ಚಬೇಕಾದ ಸ್ಥಿತಿ ಬಂತು. ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಕುಲಪತಿಗಳು ಒಂದು ಪತ್ರವನ್ನೂ ಕೂಡ ಬರೆಯಲಿಲ್ಲ. ಆದರೆ ಪ್ರಸ್ತುತ ಕುಲಪತಿಗಳು ಹೆಚ್ಚಿನ ಗಮನ ವಹಿಸಿ ಕೆಎಸ್‍ಒಯುನಲ್ಲಿರುವ ಸಮಸ್ಯೆಗಳ ಬಗ್ಗೆ ಜವಾಬ್ದಾರಿ ಹೊತ್ತು ಯುಜಿಸಿಗೆ ಮನವರಿಕೆ ಮಾಡುವುದರ ಜೊತೆಗೆ ಅತಿ ವೇಗವಾಗಿ ಸಮಸ್ಯೆ ಪರಿಹಾರವಾಗುವಂಗತೆ ಮಾಡಿದರು. ಮತ್ತೆ ಯುಜಿಸಿಯಿಂದ ಮಾನ್ಯತೆ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದೀಗ ಯುನಿವರ್ಸಿಟಿಯಲ್ಲಿದ್ದ 75 ಭಾಗ ಸಮಸ್ಯೆ ನಿವಾರಣೆಯಾಗಿದೆ. ಇನ್ನುಳಿದ 25 ಭಾಗ ಸಮಸ್ಯೆ ಸದ್ಯದಲ್ಲೇ ನಿವಾರಣೆಯಾಗಲಿದೆ. ವಿದ್ಯಾರ್ಥಿಗಳು ಚಿಂತಿಸುವ ಅಗತ್ಯವಿಲ್ಲ. ಪ್ರಸ್ತುತ ಕುಲಪತಿಗಳು ನಮ್ಮ ಕಚೇರಿಗೆ ಆಗಾಗ ಭೇಟಿ ನೀಡುವುದರ ಮೂಲಕ ಕೆಎಸ್‍ಒಯುನಲ್ಲಿದ್ದ ಸಮಸ್ಯೆಗಳ ಬಗ್ಗೆ ನಮ್ಮೊಟ್ಟಿಗೆ ಚರ್ಚೆ ಮಾಡಿದ್ದಾರೆ. ಈ ಎಲ್ಲಾ ಕೆಲಸಗಳಿಂದಾಗಿ ಇರುವ ಸಮಸ್ಯೆಗಳು ಬಗೆಹರಿದಿವೆ ಎಂದು ಪ್ರಸ್ತುತ ಕುಲಪತಿ ಡಾ. ಶಿವಲಿಂಗಯ್ಯರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈಗಿನ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದೆ. ಮುಖ್ಯಮಂತ್ರಿಗಳು ಎಲ್ಲರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಪ್ರಯತ್ನ ಪಡುತ್ತಿದ್ದಾರೆ. ಇದೇ ಉದ್ದೇಶದಿಂದ ಮೊನ್ನೆಮೊನ್ನೆಯಷ್ಟೇ ರಾಜ್ಯದ ಎಲ್ಲಾ ಯುನಿವರ್ಸಿಟಿಯ ಕುಲಪತಿಗಳೊಟ್ಟಿಗೆ ಸಂವಾದ ಕಾರ್ಯಕ್ರಮ ಮಾಡಿದ್ದಾರೆ. ಗುಣಮಟ್ಟದ ಶಿಕ್ಷಣ ನೀಡಲು ಬೇಕಾದ ಸೌಲಭ್ಯ ನೀಡಲು ಸರ್ಕಾರ ಮುಂದಾಗಿರುವುದು ಸಂತಸದಾಯಕವಾದ ಸಂಗತಿಯಾಗಿದ್ದು, ಈ ಸದುಪಯೋಗವನ್ನು ಎಲ್ಲರೂ ಬಳಸಿಕೊಳ್ಳಬೇಕು ಎಂದರು.

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ಕರ್ನಾಟಕ ರಾಜ್ಯ ಮುಕ್ತವಿಶ್ವವಿದ್ಯಾನಿಲಯದ ಪುನರ್ ನಿರ್ಮಾಣಕ್ಕೆ ಕುಲಪತಿ ಪ್ರೊ.ಡಿ.ಶಿವಲಿಂಯ್ಯನವರ ಕ್ರಿಯಾಶೀಲತೆಯೇ ಕಾರಣ ಎಂದು ತಿಳಿಸಿದರು. ಪ್ರೊ.ಶಿವಲಿಂಗಯ್ಯ ಕುಲಪತಿಗಳಾದಾಗ ಸಾಕಷ್ಟು ಸಮಸ್ಯೆ ಗಳನ್ನು ಎದುರಿಸಿ ಮತ್ತೆ ಮುಕ್ತ ವಿವಿ ತೆರವಿಗೆ ಶ್ರಮಿಸಿದ್ದಾರೆ. ಉನ್ನತ ಶಿಕ್ಷಣದ ಅವಕಾಶ ವಂಚಿತ ವಿದ್ಯಾರ್ಥಿಗಳಿಗೆ ಕರಾಮುವಿ ಶ್ರೇಷ್ಠ ಮಟ್ಟದ ಶಿಕ್ಷಣ ನೀಡುತ್ತದೆ. ಯುವಕರು ದೇಶದ ಆಸ್ತಿ ಅವರಿಗೆ ಉತ್ತಮ ಶಿಕ್ಷಣ ನೀಡುವುದು ನಮ್ಮ ಕರ್ತವ್ಯ. ವಿದ್ಯಾರ್ಥಿಗಳು ಮುಕ್ತ ವಿವಿಯ ಅವಕಾಶಗಳನ್ನು ಬಳಸಿಕೊಂಡು ನಾಡಿಗೆ ಕೀರ್ತಿ ತರಬೇಕು. ಈ ಮೂಲಕ ಉತ್ತಮ ನಾಯಕತ್ವದ ಗುಣ ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.

ಎರಡು ವರ್ಷಗಳ ಕಾಲ ಮೈಸೂರು ವಿವಿ ಗೆ ಕುಲಪತಿಗಳು ಇರಲಿಲ್ಲ. ಕೇಂದ್ರದ ಯುಜಿಸಿ ಜೊತೆ ಮಾತನಾಡಿ ಇಂದು ಕರ್ನಾಟಕ ಮುಕ್ತ ವಿವಿ ಉಳಿಸಿದ್ದು ನಮ್ಮ ರಾಜ್ಯಪಾಲರು. ಈ ವಿಚಾರವಾಗಿ ಅತಿ ವೇಗವಾಗಿ ಕುಲಪತಿಯನ್ನು ನೇಮಿಸಲು ಮುಂದಾದರು ಎಂದು ರಾಜ್ಯಪಾಲರನ್ನು ಪ್ರಶಂಸಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶಿಕ್ಷಣಕ್ಕೆ ಅಡಿಪಾಯ ಹಾಕಿದವರು. ರಾಜ್ಯದಲ್ಲಿ ಮೊಟ್ಟ ಮೊದಲು ವಿಶ್ವವಿದ್ಯಾಲಯ ಪ್ರಾರಂಭ ಮಾಡಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಗೆ ಸಲ್ಲುತ್ತದೆ ಎಂದರು.

ಈ ಸಂದರ್ಭ ಶಾಸಕ ಎಲ್. ನಾಗೇಂದ್ರ ಹಾಗೂ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್, ಕರಾಮುವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ, ರಿಜಿಸ್ಟ್ರಾರ್ ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News