ಸಿದ್ದಾಪುರ: ವಿರೋಧದ ನಡುವೆಯೂ ಜನವಸತಿ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ: ಗ್ರಾಮ ಪಂ. ವಿರುದ್ಧ ಆಕ್ರೋಶ

Update: 2018-12-01 18:06 GMT

ಸಿದ್ದಾಪುರ,ಡಿ.1: ಸ್ಥಳೀಯ ಗ್ರಾ.ಪಂ ವ್ಯಾಪ್ತಿಯ ಜನವಸತಿ ಪ್ರದೇಶವಾಗಿರುವ ಕರಡಿಗೋಡು ರಸ್ತೆಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಿರುವ ಗ್ರಾ.ಪಂ ಯ ಕ್ರಮದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರಡಿಗೋಡು ರಸ್ತೆಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುವ ಕುರಿತು ಕಳೆದ ತಿಂಗಳ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದಿರುವ ಹಿನ್ನೆಲೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಗ್ರಾ.ಪಂ ಗೆ ಲಿಖಿತ ಮನವಿಯನ್ನು ನೀಡಲಾಗಿತ್ತು. ಮೊನ್ನೆ ನಡೆದ ಸಾಮಾನ್ಯ ಸಭೆಯಲ್ಲಿ ವಾರ್ಡಿನ ಸದಸ್ಯರುಗಳು ವಿರೋಧ ವ್ಯಕ್ತಪಡಿಸಿದ ಪರಿಣಾಮ ಕಾಮಗಾರಿಯನ್ನು ಕೈ ಬಿಡಲಾಗಿತ್ತು. ಆದರೆ ಗುರುವಾರ ಬೆಳಗ್ಗಿನ ಜಾವ ಖಾಸಗಿ ಆಸ್ಪತ್ರೆ ಹಾಗೂ ಕ್ಲೀನಿಕ್ ಪಕ್ಕದಲ್ಲಿರುವ ಜನವಸತಿ ಪ್ರದೇಶವಾಗಿರುವ ಕಂದಾಯ ಇಲಾಖೆಗೆ ಸೇರಿದ ಕರಡಿಗೋಡು ರಸ್ತೆಯಲ್ಲಿರುವ ಜಾಗದಲ್ಲಿ ಜೆಸಿಬಿ ಮೂಲಕ ಗುಂಡಿ ತೆಗೆದು ಕೊಳೆತ ತ್ಯಾಜ್ಯವನ್ನು ಸುರಿಯಲಾಗಿದೆ. ಪರಿಸರದಲ್ಲಿ ದುರ್ನಾತ ಬೀರುತ್ತಿದ್ದು, ಸ್ಥಳೀಯರು ಗ್ರಾ.ಪಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಕೊಳೆತು ನಾರುತ್ತಿರುವ ತ್ಯಾಜ್ಯವನ್ನು ಇಲ್ಲಿಂದ ತೆರವುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. 

ಪಿ.ಡಿ.ಓ ಮತ್ತು ಅಧ್ಯಕ್ಷರಿಗೆ ಮಾಹಿತಿ ಇಲ್ಲ: ಈ ಬಗ್ಗೆ ಗ್ರಾ.ಪಂ ಪಿ.ಡಿ.ಓ ವಿಶ್ವನಾಥ್ ಅವರನ್ನು ಸಂಪರ್ಕಿಸಿದಾಗ ಕರಡಿಗೋಡು ರಸ್ತೆಯಲ್ಲಿರುವ ಜಾಗದಲ್ಲಿ ತ್ಯಾಜ್ಯ ಸುರಿಯುತ್ತಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲವೆಂದು ತಿಳಿಸಿದ್ದಾರೆ. 

ಕರಡಿಗೋಡು ರಸ್ತೆಯಲ್ಲಿರುವ ಹಳೆಯ ದೊಡ್ಡಿಯನ್ನು ಸ್ವಚ್ಛಗೊಳಿಸಲು ಹೇಳಲಾಗಿದೆ. ಅಲ್ಲದೆ ಗುಂಡಿ ತೆಗೆದು ತ್ಯಜ್ಯ ವಿಲೇವಾರಿ ಮಾಡಲು ತಿಳಿಸಿಲ್ಲ ಎಂದು ಗ್ರಾ.ಪಂ ಅಧ್ಯಕ್ಷ ಎಂ.ಕೆ ಮಣಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ವಾರ್ಡಿನ ಸದಸ್ಯರುಗಳಿಗೂ ಯಾವುದೇ ಮಾಹಿತಿ ಇಲ್ಲವೆಂದು ಸದಸ್ಯರುಗಳು ಸ್ಪಷ್ಟಪಡಿಸಿದ್ದಾರೆ. ಇದರ ಬಗ್ಗೆ ಲಿಖಿತ ದೂರು ನೀಡಿದರೆ, ತಹಶೀಲ್ದಾರ್ ನೀಡುವ ಸೂಚನೆಯನ್ನು ಪಾಲಿಸುವುದಾಗಿ ಕಂದಾಯ ಅಧಿಕಾರಿ ವಿನು ತಿಳಿಸಿದ್ದಾರೆ.

ಗುಂಡಿ ತೋಡಿ ತ್ಯಾಜ್ಯ ಸುರಿದಿರುವ ಬಗ್ಗೆ ಗ್ರಾ.ಪಂ ಯಲ್ಲಿ ಯಾರಿಗೂ ಮಾಹಿತಿ ಇಲ್ಲವೆಂದರೆ ಗ್ರಾ.ಪಂ ಯನ್ನು ನಿಯಂತ್ರಿಸುತ್ತಿರುವುದು ಯಾರು? ಹೊರಗಿನ ವ್ಯಕ್ತಿಗಳ ಒತ್ತಡಕ್ಕೆ ಗ್ರಾ.ಪಂ ಅಧ್ಯಕ್ಷರು ಬಲಿಯಾಗಿದ್ದಾರಾ? ಸಮೀಪದಲ್ಲೇ ಆಸ್ಪತ್ರೆ ಹಾಗೂ ಕ್ಲೀನಿಕ್ ಇದ್ದು, ಜನವಸತಿ ಪ್ರದೇಶವಾಗಿದೆ. ಶಾಲಾ ವಿದ್ಯಾರ್ಥಿಗಳು ಓಡಾಡುವ ಜಾಗವಾಗಿರುವುದರಿಂದ ಬೀದಿ ನಾಯಿಗಳ ಹಾವಳಿಯೂ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೆ ಕೊಳೆತ ತ್ಯಾಜ್ಯದಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿದೆ. ಕೂಡಲೇ ಸಂಬಂಧಪಟ್ಟವರು ಕ್ರಮ ಕೈಗೊಳ್ಳದಿದ್ದರೆ ತೀವ್ರ ರೀತಿಯ ಹೋರಾಟ ರೂಪಿಸುವುದಾಗಿ ಸಾರ್ವಜನಿಕರು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News