ಕೊಡಗು ಪ್ರಕೃತಿ ವಿಕೋಪದ ಪರಿಹಾರ ಕಾರ್ಯ ವಿಳಂಬ: ನೆರೆ ಸಂತ್ರಸ್ತರ ಸಮಿತಿಯ ವಿಶೇಷ ಸಭೆ

Update: 2018-12-01 18:23 GMT

ಮಡಿಕೇರಿ, ಡಿ.1: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಕೃತಿ ವಿಕೋಪದ ನಂತರದ ಪರಿಹಾರ ಕಾರ್ಯಗಳು ನಿಂತ ನೀರಾಗಿರುವ ಬಗ್ಗೆ ಕೊಡಗು ಪ್ರಕೃತಿ ವಿಕೋಪ ಮತ್ತು ನೆರೆ ಸಂತ್ರಸ್ತರ ಸಮಿತಿಯ ವಿಶೇಷ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಡಿ.8ರಂದು ಕೊಡಗು ಜಿಲ್ಲೆಗೆ ಆಗಮಿಸುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪರಿಹಾರ ಕಾರ್ಯ ಚುರುಕುಗೊಳಿಸುವಂತೆ ಮನದಟ್ಟು ಮಾಡಿಕೊಡಲಾಗುವುದು, ನಿಗದಿತ ದಿನಾಂಕದ ಒಳಗೆ ಸೂಕ್ತ ಸ್ಪಂದನ ದೊರಕದೆ ಇದ್ದಲ್ಲಿ ಹೋರಾಟವನ್ನು ರೂಪಿಸಲು ಸಭೆ ನಿರ್ಧಾರ ಕೈಗೊಂಡಿದೆ.
ಸಮಿತಿಯ ಅಧ್ಯಕ್ಷ ಮನು ಮೇದಪ್ಪ ಅಧ್ಯಕ್ಷತೆಯಲ್ಲಿ ನಗರದ ಸುದರ್ಶನ ಅತಿಥಿ ಗೃಹ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಾಸಕರು, ವಿವಿಧ ಸಮಾಜ ಮತ್ತು ಸಂಘ ಸಂಸ್ಥೆಗಳ ಪ್ರಮುಖರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ಸರಕಾರದ ಮೇಲೆ ಒತ್ತಡ ಹೇರುವ ಕುರಿತು ಡಿ.3ರಂದು ಮತ್ತೊಂದು ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಪ್ರಮುಖರ ಅಭಿಪ್ರಾಯ ಆಲಿಸಿದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಂತ್ರಸ್ತರ ಪರವಾಗಿ ಪ್ರಮುಖ 17 ಬೇಡಿಕೆಗಳ ಮನವಿ ನೀಡಲಾಗಿತ್ತು. ಸೂಕ್ತ ಭರವಸೆ ನೀಡಿದ್ದ ಮುಖ್ಯಮಂತ್ರಿ ಜಿಲ್ಲೆಯಿಂದ ತೆರಳಿದ ನಂತರ ಯಾವುದೇ ಪ್ರಕ್ರಿಯೆಗಳು ಚುರುಕುಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ತೋಟ ಮತ್ತು ಜಾಗವನ್ನು ಕಳೆದುಕೊಂಡವರಿಗೆ ಪರ್ಯಾಯ ಭೂಮಿ ಒದಗಿಸುವ ಕುರಿತು ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅತಿವೃಷ್ಟಿಯಲ್ಲಿ ಮನೆ ಸಾಮಗ್ರಿ ಕಳೆದುಕೊಂಡವರಿಗೆ ತಲಾ 50 ಸಾವಿರ ರೂ. ನೀಡುವುದಾಗಿ ಭರವಸೆ ಕೊಡಲಾಗಿತ್ತು, ಮುಖ್ಯಮಂತ್ರಿ ಸಮ್ಮುಖದಲ್ಲಿ ಬೆರಳೆಣಿಕೆಯಷ್ಟು ಮಂದಿಗೆ ಚೆಕ್ ವಿತರಿಸಿದ್ದು, ಬಿಟ್ಟರೆ ಇಲ್ಲಿಯವರೆಗೆ ಯಾರಿಗೂ ಈ ಮೊತ್ತದ ಪರಿಹಾರವನ್ನು ವಿತರಿಸಿಲ್ಲ. ಒಟ್ಟಿನಲ್ಲಿ ಪರಿಹಾರ ಕಾರ್ಯ ಸಂಪೂರ್ಣವಾಗಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಸರ್ಕಾರದ ಮೇಲೆ ಒತ್ತಡ ಹೇರುವ ಅನಿವಾರ್ಯತೆ ಇದೆ. ಆದ್ದರಿಂದ ಡಿ.8ರಂದು ಮುಖ್ಯಮಂತ್ರಿ ಜಿಲ್ಲೆಗೆ ಆಗಮಿಸುತ್ತಿರುವುದರಿಂದ ಅವರ ಗಮನ ಸೆಳೆಯುವ ಹಿನ್ನೆಲೆಯಲ್ಲಿ ಡಿ.7ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳೋಣ ಎಂದು ಸಭೆಯ ಗಮನ ಸೆಳೆೆದರು.
ಆದರೆ, ಸಭೆಯಲ್ಲಿ ಬಹುತೇಕರು ಪ್ರತಿಭಟನೆಗೆ ಬದಲು ಕೊನೆಯದಾಗಿ ಮುಖ್ಯಮಂತ್ರಿಗೆ ಯಾವುದೇ ಪರಿಹಾರ ಕಾರ್ಯ ಸಮರ್ಪಕವಾಗಿ ನಡೆಯದಿರುವ ಬಗ್ಗೆ ಮನವರಿಕೆ ಮಾಡಿಕೊಟ್ಟು ಅಂತಿಮ ಗಡುವು ನೀಡೋಣ ವೆಂದು ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆ ಶಾಸಕ ಅಪ್ಪಚ್ಚು ರಂಜನ್ ಸೇರಿದಂತೆ ಸಭೆ ಇದಕ್ಕೆ ಸಮ್ಮತಿ ಸೂಚಿಸಿತು.

ಶಾಸಕ ಕೆ.ಜಿ. ಬೋಪಯ್ಯ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಹೋರಾಟ ಸಮಿತಿಯ ಕೆಲವರು ಇಂದಿನ ಸಭೆಯಲ್ಲಿ ಪಾಲ್ಗೊಳ್ಳದೆ ಇದ್ದ ಕಾರಣ ಡಿ.3ರಂದು ಮತ್ತೊಂದು ಸಭೆ ಆಯೋಜಿಸಿ ಅಂತಿಮ ನಿರ್ಧಾರ ಕೈಗೊಳ್ಳಲು ಸಭೆ ಸಮ್ಮತಿಸಿತು.

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಸಂತ್ರಸ್ತರ ಪರಿಹಾರಕ್ಕಾಗಿ ಜಿಲ್ಲೆಯಲ್ಲಿ ಪ್ರತ್ಯೇಕ ಸಮಿತಿಗಳು ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ಸಮಿತಿಗಳು ಒಂದೇ ವೇದಿಕೆಯಡಿ ಕಾರ್ಯನಿರ್ವಹಿಸಿದಾಗ ಮಾತ್ರ ಫಲ ದೊರೆಯಲು ಸಾಧ್ಯ. ಮುಖ್ಯಮಂತ್ರಿ ಡಿ.8ರಂದು ಆಗಮಿಸುತ್ತಿರುವುದರಿಂದ ಪ್ರತಿಭಟನೆಯ ಬದಲಿಗೆ ಆಗಿರುವ ಲೋಪಗಳನ್ನು ಮನವರಿಕೆ ಮಾಡಿಕೊಡೋಣ ಎಂದು ವೀಣಾ ಅಚ್ಚಯ್ಯ ಸಲಹೆ ನೀಡಿದರು.

ಸಮಿತಿಯ ಅಧ್ಯಕ್ಷ ಮನು ಮೇದಪ್ಪ ಮಾತನಾಡಿ, ಕೇಂದ್ರ ಸರಕಾರ ರಾಜ್ಯಕ್ಕೆ ಬಿಡುಗಡೆ ಮಾಡಿರುವ 546 ಕೋಟಿ ರೂ. ಪರಿಹಾರ ಧನದಲ್ಲಿ 300 ಕೋಟಿ ರೂ. ಕೊಡಗು ಜಿಲ್ಲೆಗೆ ಬಿಡುಗಡೆ ಮಾಡಬೇಕು. ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರವನ್ನು ತಕ್ಷಣ ರಚನೆ ಮಾಡಬೇಕು ಎಂದು ಒತ್ತಾಯಿಸಿದರು. ವಿಧಾನ ಪರಿತ್ ಸದಸ್ಯ ಸುನೀಲ್ ಸುಬ್ರಮಣಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ನಂದಾ ಬೆಳ್ಯಪ್ಪ, ಒಕ್ಕೂಟದ ವಕ್ತಾರ ಕೆ.ಕೆ. ವಿಶ್ವನಾಥ್, ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಜಿಪಂ ಸದಸ್ಯೆ ಕೆ.ಪಿ. ಚಂದ್ರಕಲಾ, ಒಕ್ಕಲಿಗರ ಸಂಘದ ಉಪಾಧ್ಯಕ್ಷ ವಿ.ಪಿ. ಸುರೇಶ್, ಪತ್ರಕರ್ತರಾದ ಚಿ.ನಾ. ಸೋಮೇಶ್, ಎಚ್.ಟಿ. ಅನಿಲ್, ಮಾಜಿ ಎಮ್ಮೆಲ್ಸಿ ಎಸ್.ಜಿ. ಮೇದಪ್ಪ ಮಾತನಾಡಿದರು.

ಸಮಿತಿಯ ಪದಾಧಿಕಾರಿಗಳಾದ ಕುಕ್ಕೇರ ಜಯಾ ಚಿಣ್ಣಪ್ಪ, ಶಿವು ಮಾದಪ, ಲೀಲಾ ಶೇಷಮ್ಮ, ಪೇರಿಯನ ಜಯಾನಂದ ಇತರರು ಸಭೆಯಲ್ಲಿದ್ದರು.

ಸಭೆಗೆ ಬೋಪಯ್ಯ, ದೇವಯ್ಯ, ಹರೀಶ್, ಭಾರತೀಶ್ ಗೈರು

ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಪರಿಹಾರವನ್ನು ಶೀಘ್ರ ದೊರಕಿಸಿ ಕೊಡಬೇಕೆನ್ನುವ ಉದ್ದೇಶದಿಂದ ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಕೊಡಗು ಪ್ರಕೃತಿ ವಿಕೋಪ ಮತ್ತು ನೆರೆ ಸಂತ್ರಸ್ತರ ಸಮಿತಿ ವಿಶೇಷ ಸಭೆಯನ್ನು ಆಯೋಜಿಸಿತ್ತು. ಈ ಸಭೆಗೆ ಎಲ್ಲಾ ಜನಪ್ರತಿನಿಧಿಗಳನ್ನು ಹಾಗೂ ಸಂತ್ರಸ್ತರ ಹೋರಾಟ ಸಮಿತಿಯ ಪ್ರಮುಖರನ್ನು ಆಹ್ವಾನಿಸಲಾಗಿತ್ತು. ಆದರೆ ಶಾಸಕ ಕೆ.ಜಿ.ಬೋಪಯ್ಯ, ಜಿಪಂ ಅಧ್ಯಕ್ಷ ಬಿ.ಎ.ಹರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್ ಹಾಗೂ ಸಂತ್ರಸ್ತರ ಹೋರಾಟ ಸಮಿತಿಯ ಪ್ರಮುಖ ಎಂ.ಬಿ.ದೇವಯ್ಯ ಸಭೆಗೆ ಗೈರಾಗುವ ಮೂಲಕ ಚರ್ಚೆಗೆ ಗ್ರಾಸವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News