ಮೇರಿ ಭಾರತ್ ಮಹಾನ್!

Update: 2018-12-01 18:40 GMT

ತನ್ನೆಲ್ಲ ಕಷ್ಟಗಳನ್ನು ಬದಿಗಿಟ್ಟ ಮೇರಿ ಕೋಮ್ ಒಲಿಂಪಿಕ್ಸ್‌ನಲ್ಲಿ ಕಂಚು, ಏಶ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಐದು ಚಿನ್ನ, ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನ, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಆರು ಚಿನ್ನ, ಏಶ್ಯನ್ ಇಂಡೋರ್‌ನಲ್ಲಿ ಚಿನ್ನ, ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಚಿನ್ನ ಹೀಗೆ ಜಾಗತಿಕ ಮಟ್ಟದ ಪ್ರತಿಯೊಂದು ಕ್ರೀಡಾಕೂಟದಲ್ಲಿ ಚಿನ್ನ ಗೆದ್ದು, ಅಂತರ್‌ರಾಷ್ಟ್ರೀಯ ಬಾಕ್ಸಿಂಗ್ ಫೆಡರೇಷನ್‌ನಿಂದಲೇ ಮ್ಯಾಗ್ನಿಫಿಸೆಂಟ್ ಮೇರಿ ಎಂದು ಗೌರವದಿಂದ ಕರೆಯಲ್ಪಟ್ಟರು. ‘‘ನನ್ನ ಪ್ರತಿಯೊಂದು ಪದಕದ ಹಿಂದೆ ಕಷ್ಟದ ಕತೆ ಇದೆ, ಹೋರಾಟ ಇದೆ’’ ಎಂದು ಮೇರಿ ಹೇಳುವ ಮಾತಿನಲ್ಲಿ ಸತ್ಯವಿದೆ.

ನೀವೆಷ್ಟೋ ಸಾಧಕರ ಕತೆಗಳನ್ನು ಕೇಳಿರಬಹುದು, ಅಥವಾ ಅದೆಷ್ಟೋ ಸಾಧಕರ ಬದುಕಿನ ಕುರಿತ ಕೃತಿಗಳನ್ನು ಓದಿರಬಹುದು, ಆದರೆ ವಿಶ್ವಚಾಂಪಿಯನ್‌ಷಿಪ್‌ನಲ್ಲಿ ಆರು ಚಿನ್ನದ ಪದಕಗಳನ್ನು ಗೆದ್ದಿರುವ ಬಾಕ್ಸರ್ ಮ್ಯಾಗ್ನಿಫಿಸೆಂಟ್ ಮೇರಿ ಕೋಮ್ ಅವರ ಬದುಕಿನ ಕುರಿತ ಕೃತಿಯನ್ನು ಓದದೇ ಇದ್ದರೆ ನಿಮ್ಮ ಓದು ಅಪೂರ್ಣವೇ. ‘ಅನ್‌ಬ್ರೇಕೆಬಲ್’ ಹೆಸರಿನ ಈ ಕೃತಿ ಮೇರಿ ಕೋಮ್ ಅವರ ಬದುಕಿನ ಸಂಪೂರ್ಣ ಚಿತ್ರಣವನ್ನು ನೀಡುತ್ತದೆ. ಸರಿಯಾಗಿ ಹೊತ್ತಿಗೆ ಊಟ ಇಲ್ಲದೆ, ಧರಿಸಲು ಉತ್ತಮ ಬಟ್ಟೆ ಇಲ್ಲದೆ, ತಂದೆ ತಾಯಿಗೆ ಮನೆ ಕೆಲಸದಲ್ಲಿ ನೆರವಾಗಿ, ಕಾಡಿನಿಂದ ಕಟ್ಟಿಗೆ ತಂದು ಬದುಕನ್ನು ರೂಪಿಸಿಕೊಂಡ ಮೇರಿ ಕೋಮ್ ಬದುಕು ನಿಜವಾಗಿಯೂ ನಮ್ಮಲ್ಲಿ ಸ್ಫೂರ್ತಿಯನ್ನುಂಟು ಮಾಡುತ್ತದೆ. ಕಷ್ಟಗಳನ್ನು ದೂರ ಸರಿಸಿ ನಮಗೆ ಬದುಕಿನ ಹಾದಿಯನ್ನು ತೋರಿಸುತ್ತದೆ. ಇತ್ತೀಚಿಗೆ ದಿಲ್ಲಿಯಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮೂರು ಮಕ್ಕಳ ತಾಯಿ ಮೇರಿ ಕೋಮ್ ಆರನೇ ಚಿನ್ನದ ಪದಕ ಸೇರಿ ಒಟ್ಟು ಏಳು ಪದಕಗಳನ್ನು ಗೆದ್ದಿರುವುದು ಭಾರತದ ಕ್ರೀಡಾ ಇತಿಹಾಸದಲ್ಲಿ ಎಂದೂ ಮರೆಯದ ಹೊಸ ಕ್ಷಣ.

ಮಣಿಪುರದ ಚರ್ಚಂದನ್‌ಪುರ ಜಿಲ್ಲೆಯ ಕಾಂಗಾತೆಲ್ ಗ್ರಾಮದ ತೊನ್ಪಾ ಕೋಮ್ ಹಾಗೂ ಅಖಾಮ್ ಕೋಮ್ ದಂಪತಿಯ ಮಗಳು ಮೇರಿ ಕೋಮ್. ಅತ್ಯಂತ ಬಡ ಕಟುಂಬ. ಕೃಷಿ ಕೆಲಸ ಮಾಡಿಕೊಂಡು ಬದುಕುತ್ತಿದ್ದ ಕುಟುಂಬಕ್ಕೆ ಜಾಗತಿಕ ಮಟ್ಟದಲ್ಲಿ ಕೀರ್ತಿ ತಂದವರು ಮೇರಿ ಕೋಮ್. ಧರಿಸಲು ಶೂ ಇಲ್ಲದೆ ಬಾಕ್ಸಿಂಗ್ ರಿಂಗ್‌ನಲ್ಲಿ ಕಾಣಿಸಿಕೊಂಡ ಬಾಲಕಿ ನಂತರ ಜಾಗತಿಕ ಮಟ್ಟದಲ್ಲಿ ಮಿಂಚಿದ್ದು ಈಗ ಇತಿಹಾಸ. ಕಾಲೇಜು ಶಿಕ್ಷಣ ಪಡೆಯಲು ಕಷ್ಟವಾದ ಕಾರಣ ಮೇರಿ ಓಪನ್ ಸ್ಕೂಲ್‌ನಲ್ಲಿ ಪದವಿ ಗಳಿಸುತ್ತಾರೆ. ಮೀನು ಹಿಡಿಯುವುದು, ಗದ್ದೆಯಲ್ಲಿ ದುಡಿಯುವುದು, ಕಟ್ಟಿಗೆ ಸಂಗ್ರಹಿಸುವುದರ ಮೂಲಕ ಮನೆಯ ಹಿರಿಯರ ಜವಾಬ್ದಾರಿ ಮೇರಿಯ ಮೇಲಿತ್ತು. ಸಹೋದರಿಯರು ಹಾಗೂ ಸಹೋದರನ ಆರೈಕೆ ಮಾಡುವುದು ಕೂಡ ಆಕೆಯ ಜವಾಬ್ದಾರಿಯಾಗಿತ್ತು. ತನ್ನೆಲ್ಲ ಕಷ್ಟಗಳನ್ನು ಬದಿಗಿಟ್ಟ ಮೇರಿ ಕೋಮ್ ಒಲಿಂಪಿಕ್ಸ್ ನಲ್ಲಿ ಕಂಚು, ಏಶ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಐದು ಚಿನ್ನ, ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನ, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಆರು ಚಿನ್ನ, ಏಶ್ಯನ್ ಇಂಡೋರ್‌ನಲ್ಲಿ ಚಿನ್ನ, ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಚಿನ್ನ ಹೀಗೆ ಜಾಗತಿಕ ಮಟ್ಟದ ಪ್ರತಿಯೊಂದು ಕ್ರೀಡಾಕೂಟದಲ್ಲಿ ಚಿನ್ನ ಗೆದ್ದು, ಅಂತಾರಾಷ್ಟ್ರೀಯ ಬಾಕ್ಸಿಂಗ್ ಫೆಡರೇಷನ್‌ನಿಂದಲೇ ಮ್ಯಾಗ್ನಿಫಿಸೆಂಟ್ ಮೇರಿ ಎಂದು ಗೌರವದಿಂದ ಕರೆಯಲ್ಪಟ್ಟರು. ‘‘ನನ್ನ ಪ್ರತಿಯೊಂದು ಪದಕದ ಹಿಂದೆ ಕಷ್ಟದ ಕತೆ ಇದೆ, ಹೋರಾಟ ಇದೆ’’ ಎಂದು ಮೇರಿ ಹೇಳುವ ಮಾತಿನಲ್ಲಿ ಸತ್ಯವಿದೆ. ಸಂಸದೆಯಾಗಿ, ಮೂರು ಮಕ್ಕಳ ತಾಯಿಯಾಗಿ, ಅಭ್ಯಾಸ ಹಾಗೂ ಜವಾಬ್ದಾರಿ ಇವೆರಡನ್ನೂ ಹೊಂದಾಣಿಕೆ ಮಾಡಿಕೊಂಡು, ಪತಿ ಒನ್ಲಾರ್ ಕೋಮ್ ಅವರನ್ನೇ ತರಬೇತುದಾರರನ್ನಾಗಿ ಮಾಡಿಕೊಂಡು ಬಾಕ್ಸಿಂಗ್ ಲೋಕದ ರಾಣಿ ಎನಿಸಿದರು.


 ರಾಜೀವ್ ಗಾಂಧಿ ಖೇಲ್ ರತ್ನ, ಅರ್ಜುನ, ಪದ್ಮಶ್ರೀ, ಪದ್ಮಭೂಷಣ ಹಾಗೂ ಅಂತರ್‌ರಾಷ್ಟ್ರೀಯ ಬಾಕ್ಸಿಂಗ್ ಫೆಡರೇಷನ್‌ನ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿರುವ ಮೇರಿ ಕೋಮ್ ರಾಜ್ಯಸಭಾ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಡಿಂಕೋ ಸಿಂಗ್ ಏಶ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ಸ್ಫೂರ್ತಿಯೇ ಮೇರಿ ಕೋಮ್ ಅವರು ಬಾಕ್ಸಿಂಗ್ ರಿಂಗ್ ಏರುವಂತೆ ಮಾಡಿತು. ಶಾಲಾ ದಿನಗಳಲ್ಲಿ ಅಥ್ಲೆಟಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದ ಮೇರಿ ಈ ಕ್ಷೇತ್ರದಲ್ಲೇ ಮುಂದುವರಿಯಬೇಕೆಂದು ನಿರ್ಧರಿಸಿದ್ದರು. ಆದರೆ ಡಿಂಕೋ ಸಿಂಗ್ ಅವರ ಭೇಟಿ ಆಕೆಯ ಭವಿಷ್ಯವನ್ನೇ ತೀರ್ಮಾನಿಸಿತು. ಡಿಂಕೋ ಸಿಂಗ್ ಗೆದ್ದ ಏಶ್ಯನ್ ಗೇಮ್ಸ್‌ನ ಚಿನ್ನದ ಪದಕ ಈಶಾನ್ಯ ರಾಜ್ಯದಲ್ಲಿ ಕ್ರಾಂತಿಯನ್ನೇ ಉಂಟು ಮಾಡಿತು. ಅನೇಕ ಯುವಕರು ಬಾಕ್ಸಿಂಗ್‌ನಲ್ಲಿ ತರಬೇತಿ ಪಡೆಯಲು ಮುಂದಾದರು. ಅವರಲ್ಲಿ ಮೇರಿ ಕೋಮ್ ಕೂಡ ಒಬ್ಬರು. ಕ್ರೀಡೆಯ ಮೂಲಕ ಕುಟುಂಬಕ್ಕೆ ಏನಾದರೂ ಆರ್ಥಿಕ ಪ್ರಯೋಜನ ಆಗಬಹುದು ಎಂದು ಮೇರಿ ಕೋಮ್ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಮಣಿಪುರದಲ್ಲಿ ನಡೆದ ರಾಷ್ಟ್ರೀಯ. ಕ್ರೀಡಾಕೂಟದಲ್ಲಿ ಮಹಿಳಾ ಬಾಕ್ಸಿಂಗ್ ಕ್ರೀಡೆಯ ಪ್ರಾತ್ಯಕ್ಷಿಕೆ ನಡೆಯಿತು. ಅಲ್ಲಿ ಮೇರಿ ಪಾಲ್ಗೊಂಡಿದ್ದರು. ಡಿಂಕೋ ಸಿಂಗ್ ಕೂಡ ಅಲ್ಲಿ ಚಿನ್ನ ಗೆದ್ದಿದ್ದರು. ತಾನೇಕೆ ಈ ಕ್ರೀಡೆಯಲ್ಲಿ ಪಾಲ್ಗೊಳ್ಳಬಾರದು ಎಂದು ಮೇರಿಗೆ ಅನಿಸಿತು, ಮನಸ್ಸನ್ನು ಗಟ್ಟಿಮಾಡಿಕೊಂಡು ಡಿಂಕೋ ಅವರಲ್ಲಿ ಮನವಿ ಮಾಡಿದರು. ಮನವಿಗೆ ಪುರಸ್ಕಾರವೂ ಸಿಕ್ಕಿತು. ಭಾರತದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಅಲ್ಲಿಂದಲೇ ಆರಂಭಗೊಂಡಿತು.
ಸುಮಾರು 20 ವರ್ಷಗಳ ಹಿಂದೆ ಬಾಕ್ಸಿಂಗ್ ರಿಂಗ್‌ಗೆ ಕಾಲಿಟ್ಟ ಮೇರಿ, ಆರಂಭದಲ್ಲಿ ಹುಡುಗರೊಂದಿಗೆ ಅಭ್ಯಾಸ ಮಾಡುತ್ತಿದ್ದರು. ಎರಡೇ ವಾರಗಳಲ್ಲಿ ಬಾಕ್ಸಿಂಗ್‌ನ ನಿಯಮಗಳನ್ನು ಅರಿತು ಸೈ ಎನಿಸಿಕೊಂಡರು. ಆದರೆ ಬಾಕ್ಸಿಂಗ್ ಕಲಿಯುತ್ತಿರುವ ವಿಷಯ ಮನೆಯವರಿಗೆ ತಿಳಿಸಲೇ ಇಲ್ಲ. ಅಭ್ಯಾಸವನ್ನು ಕದ್ದುಮುಚ್ಚಿ ಮಾಡುತ್ತಿದ್ದರು. ಅಥ್ಲೆಟಿಕ್ಸ್‌ನಲ್ಲಿ ಮುಂದುವರಿ ಎಂದು ತಂದೆ ಹೇಳುತ್ತಿದ್ದರು. ಆದರೆ ರಾಜ್ಯ ಮಟ್ಟದ ಬಾಕ್ಸಿಂಗ್‌ನಲ್ಲಿ ಪಾಲ್ಗೊಂಡ ಮೇರಿ ಚಿನ್ನ ಗೆದ್ದರು. ಅದು ಸ್ಥಳೀಯ ಪತ್ರಿಕೆಯಲ್ಲಿ ಚಿತ್ರ ಸಹಿತ ವರದಿ ಪ್ರಕಟಗೊಂಡಿತ್ತು. ಮಗಳ ಚಿತ್ರವನ್ನು ನೋಡಿ ತಂದೆ, ಮೇರಿಗೆ ಮನೆಗೆ ಕರೆಸಿ ಬೈದಿದ್ದನ್ನು ಚಾಂಪಿಯನ್ ಬಾಕ್ಸರ್ ಈಗಲೂ ಸ್ಮರಿಸುತ್ತಾರೆ. ಒಂದು ವೇಳೆ ತಂದೆಯ ಮಾತಿಗೆ ಓಗೊಟ್ಟು ಇತರ ಕ್ರೀಡೆಗಳಲ್ಲಿ ಮೇರಿ ಪಾಲ್ಗೊಂಡಿರುತ್ತಿದ್ದರೆ ಭಾರತಕ್ಕೆ ಇಂದು ಜಾಗತಿಕ ಬಾಕ್ಸಿಂಗ್‌ನಲ್ಲಿ ಈ ರೀತಿಯ ಖ್ಯಾತಿ ಬರುತ್ತಿರಲಿಲ್ಲ.
ಬಾಕ್ಸಿಂಗ್ ರಿಂಗ್ ಏರಿ ಒಂದು ವರ್ಷ ಮುಗಿಯುತ್ತಿದ್ದಂತೆ ಮೇರಿ ಜಾಗತಿಕ ಬಾಕ್ಸಿಂಗ್‌ನಲ್ಲಿ ಕಾಣಿಸಿಕೊಂಡರು. ಅಮೆರಿಕದಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಾಗ ಮೇರಿಗೆ ಕೇವಲ 18 ವರ್ಷ. 46 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಮೇರಿ ಬೆಳ್ಳಿಯ ಪದಕ ಗೆದ್ದು ಅಚ್ಚರಿ ಮೂಡಿಸಿದ್ದರು. ಮುಂದಿನ ವರ್ಷವೇ ಚಿನ್ನದ ಪದಕ ಗೆದ್ದು ಇತಿಹಾಸ ಬರೆದರು.


ಎರಡು ಮಕ್ಕಳ ತಾಯಿಯಾಗಿಯೂ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕನೇ ಚಿನ್ನ ಗೆಲ್ಲುವ ಮೂಲಕ ಮೇರಿ ಕೋಮ್, ಮ್ಯಾಗ್ನಿಫಿಸೆಂಟ್ ಮೇರಿ ಎಂದು ಕರೆಯಲ್ಪಟ್ಟರು. ಮೇರಿ ಕೋಮ್ ಅವರ ಕ್ರೀಡಾ ಸ್ಫೂರ್ತಿಗೆ ಇನ್ನೊಂದು ಉತ್ತಮ ನಿದರ್ಶನ ಚೀನಾದಲ್ಲಿ ನಡೆದ ಏಶ್ಯನ್ ಕಪ್ ಮಹಿಳಾ ಬಾಕ್ಸಿಂಗ್‌ನಲ್ಲಿ ಚಿನ್ನ ಗೆದ್ದಿರುವುದು. ಮಗ ಖುಪ್‌ನೈವಾರ್‌ಗೆ ಹೃದಯದಲ್ಲಿ ಸಮಸ್ಯೆ ಇರುವುದು ವೈದ್ಯರಿಂದ ತಿಳಿದಿತ್ತು. ಮಗನನ್ನು ಚಂಡಿಗಡದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗನ ಜವಾಬ್ದಾರಿಯನ್ನು ಪತಿಗೆ ವಹಿಸಿ ಮೇರಿ ಏಶ್ಯಾ ಕಪ್ ಬಾಕ್ಸಿಂಗ್‌ನಲ್ಲಿ ಸ್ಪರ್ಧಿಸಲು ತೀರ್ಮಾನಿಸಿದರು. ಮಗನಿಗೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಯುತ್ತಿರುವಾಗಲೇ ಮೇರಿ ಫೈನಲ್‌ನಲ್ಲಿ ಹೋರಾಟ ನಡೆಸುತ್ತಿದ್ದುದು ಕಾಕತಾಳೀಯವಾಗಿತ್ತು. ಮಗನ ಶಸ್ತ್ರಚಿಕಿತ್ಸೆಯೂ ಯಶಸ್ಸು, ತಾಯಿಗೆ ಫೈನಲ್ ಹೋರಾಟದಲ್ಲಿ ಚಿನ್ನ.
ಮೇರಿ ಕೋಮ್ ಈ ಭೂಮಿಗೆ ದೇವರು ನೀಡಿದ ಕೊಡುಗೆ. ಏಕೆಂದರೆ ಎಲ್ಲ ಕಷ್ಟಗಳನ್ನು ಗೆದ್ದು, ಮೂರು ಮಕ್ಕಳ ತಾಯಿಯಾಗಿ ಜಾಗತಿಕ ಮಟ್ಟದಲ್ಲಿ ಚಿನ್ನ ಗೆಲ್ಲುವುದು ಅದು ಸಾಮಾನ್ಯರಿಂದ ಅಸಾಧ್ಯವಾದುದು. ‘‘ನಾನು ಮೂರು ಮಕ್ಕಳ ತಾಯಿ, ಈಗಲೂ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿರುವೆ, ಮುಂದಿನ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ಗುರಿ, ನಿಮ್ಮಿಂದಲೂ ಇದು ಸಾಧ್ಯವಿಲ್ಲವೇ?, ಸಾಧ್ಯವಿದೆ, ಛಲ ಅಗತ್ಯ’’ ಎಂದು ಹೇಳುವ ಮೇರಿಯ ಮಾತು ಭಾರತೀಯ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News