×
Ad

ಕೇರಳದ ಯುವಕ ಚಿಕ್ಕಮಗಳೂರಿನಲ್ಲಿ ನಾಪತ್ತೆ ಪ್ರಕರಣ: ವಾರ ಕಳೆದರೂ ಸಿಗದ ಸಂದೀಪ್ ಸುಳಿವು

Update: 2018-12-02 22:40 IST

ಚಿಕ್ಕಮಗಳೂರು, ಡಿ.2: ಕೇರಳದಿಂದ ರಾಜ್ಯ ಪ್ರವಾಸಕ್ಕೆಂದು ಬಂದಿದ್ದ ಎಸ್. ಸಂದೀಪ್ ಎಂಬ ಯುವಕ ಶೃಂಗೇರಿ, ಕೊಪ್ಪ ಭಾಗದಲ್ಲಿ ನಾಪತ್ತೆಯಾಗಿ ವಾರ ಕಳೆದರೂ ಇದುವರೆಗೂ ಪೊಲೀಸರಿಗೆ ಯಾವುದೇ ಸುಳಿವು ಲಭ್ಯವಾಗದೆ, ನಾಪತ್ತೆ ಪ್ರಕರಣ ಕಗ್ಗಂಟಾಗಿ ಪರಿಣಮಿಸಿದೆ.

ವಾರದ ಹಿಂದೆ ಕೇರಳ ಮೂಲದ ಸಂದೀಪ್ ರಾಜ್ಯದ ಪ್ರವಾಸಕ್ಕೆ ತಮ್ಮ ಬೈಕ್‍ನಲ್ಲಿ ಏಕಾಂಗಿಯಾಗಿ ಆಗಮಿಸಿದ್ದರು. ಹೀಗೆ ಬಂದ ಸಂದೀಪ್ ಶೃಂಗೇರಿ ಸಮೀಪದ ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ರವಿವಾರ ನಾಪತ್ತೆಯಾಗಿದ್ದರು. ಇದರಿಂದ ಆತಂಕಕ್ಕೀಡಾದ ಸಂದೀಪ್ ಪೋಷಕರು ಕೇರಳದಲ್ಲಿ ನಾಪತ್ತೆ ಪ್ರಕರಣ ದಾಖಲಿಸಿ, ಜಿಲ್ಲಾ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರ ಬೆನ್ನು ಹತ್ತಿದ್ದ ಪೊಲೀಸರಿಗೆ ಸಂದೀಪ್ ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಬಳಿಕ ಸಂದೀಪ್ ಬೈಕ್ ನಾಗಲಾಪುರ ಗ್ರಾಮದ ತುಂಗಾ ನದಿ ಬಳಿ ಪತ್ತೆಯಾಗಿತ್ತು. ಇದರಿಂದ ಸಂದೀಪ್ ಈಜಲು ಹೋಗಿ ನೀರು ಪಾಲಾಗಿದ್ದಾರೆಂದು ಶಂಕಿಸಿದ್ದ ಪೊಲೀಸರು ಮುಳುಗು ತಜ್ಞರಿಂದ ಶೋಧ ಮುಂದುವರಿಸಿದ್ದರು. 

ಆದರೆ ಸಂದೀಪ್ ನಾಪತ್ತೆಯಾಗಿ ವಾರಕಳೆದಿದ್ದರೂ ಪೊಲೀಸರಿಗೆ ಇದುವರೆಗೂ ಆತನ ಬಗ್ಗೆ ಒಂದೇ ಒಂದು ಸುಳಿವು ಸಿಕ್ಕಿಲ್ಲ ಎಂದು ತಿಳಿದು ಬಂದಿದೆ. ರವಿವಾರ ಹರಿಹರಪುರದ ತುಂಗಾನದಿಯಲ್ಲಿ ಮುಳುಗು ತಜ್ಞರಾದ ಬಾಳೆಹೊಳೆ ಭಾಸ್ಕರ್ ಮತ್ತು ಹರಿಹರಪುರದ ಝಲೀಲ್ ನಾಗಲಾಪುರ ಸೇತುವೆಯಿಂದ ತೂಗುಸೇತುವೆ ವರೆಗೆ ಸುಮಾರು 3 ಕಿ.ಮೀ. ದೂರದವರೆಗೆ ನದಿಯಲ್ಲಿ ಹುಡುಕಾಟ ನಡೆಸಿದರೂ ಸಂದೀಪ್ ಬಗ್ಗೆ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕೇರಳದ ದೇವರಕುಟ್ಟಿತೋಡು ಪೋವಂಗಲ್‍ನ ಮುಕೇರಿ ನಿವಾಸಿ ಕೃಷಿಕ ಸತ್ಯನಾಥ್ ಮತ್ತು ನಿವೃತ್ತ ಶಿಕ್ಷಕಿ ಸುಮಾರವರ ಏಕೈಕ ಪುತ್ರನಾಗಿರುವ ಸಂದೀಪ್ ಬಿಇ ಪದವೀಧರನಾಗಿದ್ದು, ಜಾಹೀರಾತು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈತ ಶಿಜಿ ಎಂಬವರನ್ನು ಮದುವೆಯಾಗಿದ್ದಾನೆ. ಪ್ರವಾಸಿ ತಾಣಗಳಿಗೆ ಏಕಾಂಗಿಯಾಗಿ ಭೇಟಿ ನೀಡುವ ಹವ್ಯಾಸ ಇಟ್ಟುಕೊಂಡಿದ್ದ ಸಂದೀಪ್ ನ.24ರಂದು ಬೆಳಗ್ಗೆ 3ಕ್ಕೆ ತನ್ನ ಕಮಾಂಡೋ ಬೈಕ್‍ನಲ್ಲಿ ಪ್ರವಾಸ ಹೊರಟಿದ್ದ ಎನ್ನಲಾಗಿದೆ. ಈ ಸಂದರ್ಭ ತನ್ನ ಮನೆಯವರು ಹಾಗೂ ಸ್ನೇಹಿತ ರೊಬೇಶ್ ಎಂಬವನ ಬಳಿ ಚಿಕ್ಕಮಗಳೂರು, ಮುಳ್ಳಯ್ಯನಗಿರಿ ಮುಂತಾದೆಡೆ ಪ್ರವಾಸ ಹೋಗಿಬರುವುದಾಗಿ ತಿಳಿಸಿದ್ದಾನೆಂದು ತಿಳಿದು ಬಂದಿದೆ.

ಅದರಂತೆ ನ.25ರಂದು ಚಿಕ್ಕಮಗಳೂರಿಗೆ ಬಂದು ಅಲ್ಲಿನ ಕ್ರಿಸ್ಟಿಲಿನಾ ಲಾಡ್ಜ್ ನಲ್ಲಿ ತಂಗಿದ್ದಾನೆ. ನ.26ರಂದು ಚಿಕ್ಕಮಗಳೂರಿನಿಂದ ಬಾಳೆಹೊನ್ನೂರು, ಜಯಪುರ ಮೂಲಕ ಶೃಂಗೇರಿ, ಸಿರಿಮನೆ ಫಾಲ್ಸ್‍ಗೆ ಭೇಟಿ ನೀಡಿದ್ದಾನೆ. ನಂತರ ಕೊಪ್ಪಕ್ಕೆ ಬಂದು ಪುನಃ ಶೃಂಗೇರಿಗೆ ಹೋಗಿದ್ದಾನೆ. ಶೃಂಗೇರಿಯಿಂದ ಹರಿಹರಪುರಕ್ಕೆ ಬಂದ ಬಳಿಕ ಸಂದೀಪ್ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

ಸಂದೀಪ್ ನಾಪತ್ತೆಗೂ ಮುನ್ನ ತಾನು ಹೋದ ಕಡೆಯಲ್ಲೆಲ್ಲಾ ತನ್ನ ಮೊಬೈಲ್‍ನಲ್ಲಿ ಫೋಟೋ ತೆಗೆದು ಸ್ನೇಹಿತರ ಮೊಬೈಲ್‍ಗೆ ರವಾನೆ ಮಾಡಿದ್ದಾನೆ. ಅದೇ ರೀತಿ ಭೇಟಿ ನೀಡಿದ ಸ್ಥಳಗಳ ಬಗ್ಗೆ ಕರೆ ಮಾಡಿಯೂ ತಿಳಿಸಿದ್ದಾನೆ. ನ.26ರಂದು ಮಧ್ಯಾಹ್ನ ಇದ್ದಕ್ಕಿದ್ದಂತೆ ಸಂದೀಪ್‍ನ ಮೊಬೈಲ್ ಸಂಪರ್ಕ ಕಡಿತವಾಗಿದೆ. ಗಾಬರಿಗೊಂಡ ಮನೆಯವರು ಅದೇ ದಿನ ಕೇರಳದ ನಲ್ಲಾಲಂ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಾರೆ. ಸಂದೀಪ್ ಪತ್ನಿ ಶಿಜಿ ನೀಡಿದ ದೂರಿನ ಆಧಾರದಲ್ಲಿ ಅಲ್ಲಿನ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.

ಅದೇ ದಿನ ಹರಿಹರಪುರ ಸಮೀಪದ ನಾಗಲಾರಪುರ ಸೇತುವೆ ಬಳಿ ಬೈಕೊಂದು ಕಾಣಿಸಿಕೊಂಡಿದೆ. ನ.27ರಂದು ಮಧ್ಯಾಹ್ನದವರೆಗೂ ಆ ಬೈಕ್ ನಿಲ್ಲಿಸಿದ ಜಾಗದಲ್ಲೇ ಇದ್ದ ಕಾರಣ ಸ್ಥಳೀಯರು ಹರಿಹರಪುರ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಬಂದು ಪರಿಶೀಲನೆ ನಡೆಸಿದಾಗ ಬೈಕ್‍ನಲ್ಲಿ ಒಂದು ಬ್ಯಾಗ್ ಸಿಕ್ಕಿದೆ. ಅದರಲ್ಲಿ ಎರಡು ಜೊತೆ ಬಟ್ಟೆ ಮತ್ತು ಒಂದು ಐಡಿ ಕಾರ್ಡ್ ಸಿಕ್ಕಿದ್ದು, ಐಡಿ ಕಾರ್ಡ್ ಕೇರಳದಲ್ಲಿ ನಾಪತ್ತೆಯಾದ ಯುವಕನದ್ದೇ ಎಂದು ತಿಳಿದುಬಂದಿದೆ. 

ಕೇರಳದಿಂದ ನಲ್ಲಾಲಂ ಪೊಲೀಸ್ ಠಾಣೆಯ ಎಎಸ್ಸೈ ಸುರೇಶ್‍ಬಾಬು ಹಾಗೂ ಸಿಬ್ಬಂದಿ ತಹಸೀಮ್ ಎಂಬವರು ಜಿಲ್ಲೆಗೆ ಆಗಮಿಸಿ ಆಗಮಿಸಿ ಹರಿಹರಪುರ ಪೊಲೀಸರಿಂದ ಈ ಬಗ್ಗೆ ಮಾಹಿತಿ ಪಡೆದು ಹಿಂದಿರುಗಿದ್ದಾರೆ. ಅಲ್ಲದೇ ಸಂದೀಪ್ ಸ್ನೇಹಿತರು ಮತ್ತು ಬಂಧುಗಳು ಒಳಗೊಂಡಂತೆ ಹತ್ತು ಮಂದಿ ಹರಿಹರಪುರಕ್ಕೆ ಆಗಮಿಸಿದ್ದು, ಅವರಿಗೆ ಹರಿಹರಪುರ ಶ್ರೀಮಠದಲ್ಲಿ ಊಟ ಮತ್ತು ವಸತಿ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News