ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪಿಸಲು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಒತ್ತಾಯ
ಮೈಸೂರು,ಡಿ.2: ಕ್ರಿಶ್ಚಿಯನ್ ಸಮುದಾಯ ಏಳಿಗೆಗೆ ಸರ್ಕಾರ ಮುಂದಾಗಬೇಕಿದ್ದು ಅದಕ್ಕಾಗಿ ಪ್ರತ್ಯೇಕ ಕ್ರೈಸ್ತ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ರವಿವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಚುನಾವಣಾ ಪ್ರಣಾಳಿಕೆಯಲ್ಲಿ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪಿಸುತ್ತೇವೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಹೇಳಿತ್ತು. ಅದರಂತೆ ಈಗ ಕ್ರೈಸ್ತ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು ಎಂದು ಹೇಳಿದರು.
ಕಳೆದ ಬಾರಿ ನಡೆದ ಬಜೆಟ್ ಅಧಿವೇಶನದ ಚರ್ಚೆಯಲ್ಲಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಗಮನವನ್ನು ನಾನು ಸೆಳೆದಿದ್ದು, ಮುಂದಿನ ಬಜೆಟ್‍ನಲ್ಲಿ ಘೊಷಿಸುವುದಾಗಿ ಹೇಳಿದ್ದಾರೆ. ಬರುವ ಬೆಳಗಾವಿ ಅಧಿವೇಶನದಲ್ಲೂ ಮುಖ್ಯಮಂತ್ರಿಗಳ ಗಮನ ಸೆಳೆಯುವುದಾಗಿ ಹೇಳಿದರು.
ಕ್ರೈಸ್ತ ಸಮುದಾಯ ಸಮಾಜದಲ್ಲಿ ತೀರಾ ಹಿಂದುಳಿದಿದೆ. ಅಲ್ಪಸಂಖ್ಯಾಯತರ ಅಭಿವೃದ್ಧಿ ನಿಗಮದಡಿಯಲ್ಲಿ ಸೌಲಭ್ಯ ನೀಡಲಾಗುತ್ತಿದೆಯಾದರೂ ಸರಿಯಾಗಿ ಬಳಕೆಯಾಗುತ್ತಿಲ್ಲ. ನಮ್ಮದೇ ಆದ ಅಭಿವೃದ್ಧಿ ನಿಗಮ ಇದ್ದರೆ ಮಕ್ಕಳ ವಿದ್ಯಾಭ್ಯಾಸ, ಕೌಶಲಾಭಿವೃದ್ಧಿ ಸೇರಿದಂತೆ ಇನ್ನಿತರ ಅನುಕೂಲಗಳನ್ನು ಸಲೀಸಾಗಿ ಮಾಡಿಕೊಳ್ಳಬಹುದು ಎಂದು ಹೇಳಿದರು.
ಬಹಳಷ್ಟು ಕ್ರೈಸ್ತ ಸಮುದಾಯಕ್ಕೆ ಸೇರಿದವರು ವಿದೇಶದಲ್ಲಿ ಕೆಲಸ ಮಾಡುತ್ತಿದ್ದು, ಇತೀಚಿನ ದಿನಗಳಲ್ಲಿ ಅಲ್ಲಿ ಕೆಲಸದ ಭದ್ರತೆ ಇಲ್ಲದೆ ವಾಪಸ್ ಸ್ವದೇಶಕ್ಕೆ ಬರುತ್ತಿದ್ದಾರೆ. ಅಂತವರು ಸ್ವ ಉದ್ಯೋಗ ಪಡೆದುಕೊಳ್ಳಲು ಕೇರಳ ಮಾದರಿಯಂತೆ 10 ಲಕ್ಷ ರೂ. ನೀಡಬೇಕು, ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ 500 ಕೋಟಿ ರೂ. ಹಣ ಮೀಸಲಿಡಬೇಕು ಎಂದು ಆಗ್ರಹಿಸಿದರು.
ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಕ್ರೈಸ್ತ ಸಮುದಾಯದ ಏಳಿಗೆಗೆ ಸಾಕಷ್ಟು ಹಣ ನೀಡಿದ್ದರು. ಅಲ್ಪಸಂಖ್ಯಾತರ ಇಲಾಖೆಗೆ 300 ಕೋಟಿ.ರೂ. ನೀಡಿದ್ದರು. ಹಾಗಾಗಿ ಮೈಸೂರಿನ ಚರ್ಚ್ ಅಭಿವೃದ್ಧಿಗೆ 18 ಕೋಟಿ.ರೂ ಹಣ ನೀಡಲಾಯಿತು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಫಾದರ್ ಥಾಮಸ್ ಕವಾಸ್, ರಾಫಿಲ್, ರಾಜು, ಪುಟ್ಟರಾಜು, ಐರಿಸ್. ಶಾಂತರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.