ಕೆಪಿಎಎಸ್‍ಸಿಯಲ್ಲಿನ ದಲಿತ ವಿರೋಧಿ ಆದೇಶದ ಹಿಂದೆ ಐಎಎಸ್ ಅಧಿಕಾರಿಗಳ ಕೈವಾಡ: ಕೆ.ಎಸ್.ಶಿವರಾಮು

Update: 2018-12-02 17:23 GMT

ಮೈಸೂರು,ಡಿ.3: ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿಯಲ್ಲಿ ಎಸ್ಸಿ,ಎಸ್ಟಿ ಮತ್ತು ಹಿಂದುಳಿದ ವರ್ಗಗಳ ಮೆರಿಟ್ ಆಧಾರದಲ್ಲಿ ಸಾಮಾನ್ಯ ವರ್ಗಕ್ಕೆ ಪರಿಗಣನೆ ಮಾಡದಂತೆ ಹೊರಡಿಸಿರುವ ಆದೇಶ ದುರುದ್ದೇಶದಿಂದ ಕೂಡಿದ್ದು, ಇದರ ಹಿಂದೆ ಇತರೆ ವರ್ಗಗಳ ಐಎಎಸ್ ಅಧಿಕಾರಿಗಳ ಕೈವಾಡವಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಗಂಭೀರ ಆರೋಪ ಮಾಡಿದರು.

ನಗರದ ಪತ್ರಕರ್ತರ ಭವನದಲ್ಲಿ ರವಿವಾರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ವೇದಿಕೆ, ಮೈಸೂರು-ಚಾಮರಾಜನಗರ ಜಿಲ್ಲಾ ಉಪ್ಪಾರರ ಸಂಘ, ಜಿಲ್ಲಾ ವಿಶ್ವಕರ್ಮ ಮಹಾಮಂಡಳ, ಜಿಲ್ಲಾ ಸವಿತಾ ಸಂಘರ್ಷ ಸಮಿತಿ, ಅರಸು ಮಹಾಸಭಾ, ಜಿಲ್ಲಾ ಕುಂಬಾರರ ಸಂಘದ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಪಿಎಸ್‍ಸಿ ಹೊರಡಿಸಿರುವ ಆದೇಶ ದಲಿತರ ಸಮಾಧಿ ಕಟ್ಟುವಂತಿದ್ದು, ಇದೊಂದು ಉದ್ದೇಶ ಪೂರ್ವಕವಾಗಿ ನಡೆದಿರುವ ಅಂಶ. ದಲಿತರು ಹಿಂದುಳಿದವರು ಎಷ್ಟೇ ಮೆರಿಟ್ ಪಡೆದರೂ ಅವರವರ ಜಾತಿಗಳಲ್ಲೆ ಹೊಡೆದಾಡಬೇಕು. ಸಾಮನ್ಯ ವರ್ಗಗಳಿಗೆ ಹೋದರೆ ಅಲ್ಲಿರುವವರಿಗೆ ತೊಂದರೆಯಗುತ್ತದೆ ಎಂದು ಭಾವಿಸಿ ದಲಿತರು, ಹಿಂದುಳಿದವರನ್ನು ತುಳಿಯುವ ಪ್ರಯತ್ನವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಮಾಡಿದ್ದು, ಈತ ಒಬ್ಬ ದಲಿತ ವಿರೋಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕಾಂಗದ ಗಮನಕ್ಕೂ ಬರದೆ ಏಕಾಏಕಿ ಮುಖ್ಯ ಕಾರ್ಯದರ್ಶಿ ಆದೇಶದಂತೆ ಈ ನಿರ್ಧಾವನ್ನು ಕೆಪಿಎಸ್‍ಸಿ ತೆಗೆದುಕೊಂಡಿದ್ದು, ಇದರ ಹಿಂದೆ ಅಡಗಿರುವ ಅಧಿಕಾರಿಗಳನ್ನು ಕೂಡಲೇ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಈ ಆದೇಶದ ವಿರುದ್ಧ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ, ಹಿಂದುಳದ ವರ್ಗಗಳ ಸಚಿವ ಪುಟ್ಟರಂಗಶೆಟ್ಟಿ ಕ್ಯಾಬಿನೆಟ್‍ನಲ್ಲಿ ಪ್ರಸ್ತಾಪಿಸಿದ್ದು, ಮುಖ್ಯಮಂತ್ರಿಗಳು ಇದು ನನ್ನ ಗಮನಕ್ಕೆ ಬಾರದೆ ನಡೆದಿದ್ದು, ಇದನ್ನು ಸರಿಪಡಿಸುವುದಾಗಿ ಹೇಳಿದ್ದರು. ಜೊತೆಗೆ ನಮ್ಮ ವೇದಿಕೆ ವತಿಯಿಂದಲೂ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡಲಾಗಿತ್ತು. ಕೂಡಲೇ ಸರಿಪಡಿಸುವುದಾಗಿ ಹೇಳಿದ್ದ ಮುಖ್ಯಮಂತ್ರಿಗಳು ಮೊನ್ನೆ ಕಾನೂನು ಸಲಹೆಗೆ ಕಳುಹಿಸಿರುವುದಾಗಿ ಹೇಳುತ್ತಿದ್ದಾರೆ. ಹಾಗಾದರೆ ಈ ಹಿಂದೆ 1998,1999,2004 ರ ಬ್ಯಾಚ್‍ನ ಕೆಎಎಸ್ ನಿಂದ ಐಎಎಸ್ ಮುಂಬಡ್ತಿ ಪಡೆದಿರುವವರನ್ನು ವಾಪಸ್ ಕಳಹಿಸುವಂತೆ ಆದೇಶಿಸಿದೆ. ಅದನ್ನೇಕೆ ಸರ್ಕಾರ ಮಾಡಿಲ್ಲ ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರ ಒಂದು ಕಡೆ ಕೋರ್ಟಿನ ಅದೇಶವನ್ನು ಪಾಲಿಸಲು ಹೇಳುತ್ತದೆ. ಮತ್ತೊಂದು ಕಡೆ ಕೋರ್ಟಿನ ಆದೇಶದ ವಿರುದ್ಧ ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸುತ್ತದೆ. ಮತ್ತೊಂದು ಕಡೆ ಲೋಕಸೇವಾ ಆಯೋಗಕ್ಕೆ ಪತ್ರ ಬರೆದು ನ್ಯಾಯಾಲಯವು ನೀಡಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸುತ್ತದೆ. ಅಂದರೆ 1998,1999,2004 ಬ್ಯಾಚ್ ನಲ್ಲಿ ಅಕ್ರಮಗಳ ಮೂಲಕ ಕೆಎಎಸ್ ಉನ್ನತ ಹುದ್ದಗೆ ಅಯ್ಕೆಯಾಗಿ ಐಎಎಸ್, ಐಪಿಎಸ್ ಹುದ್ದೆಗಳಿಗೆ ಮುಂಬಡ್ತಿ ಪಡೆದು ಆಯಕಟ್ಟಿನ ಸ್ಥಳದಲ್ಲಿ ಕುಳಿತಿರುವ ಅಧಿಕಾರಿಗಳನ್ನು ರಕ್ಷಿಸಲು ಈ ತೀರ್ಮಾನ ಕೈಗೊಂಡಿದೆ ಎಂದು ಆರೋಪಿಸಿದರು.

ಕೂಡಲೇ ತನ್ನ ಆದೇಶವನ್ನು ಸರ್ಕಾರ ಹಿಂಪಡೆಯದಿದ್ದರೆ ಡಿ.5 ರಂದು ಊಟಿ ರಸ್ತೆಯಲ್ಲಿರುವ ಮೀಸಲಾತಿ ಪಿತಾಮಹ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಮಾಧಿಗೆ ಮಾಲಾರ್ಪಣೆ ಮಾಡಿ ಮೌನ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು. ಇದಕ್ಕೆ ಬಗ್ಗದಿದ್ದರೆ ಮುಂದಿನ ದಿನಗಳಲ್ಲಿ ದಲಿತ ಹಿಂದುಳಿದ  ಅಲ್ಪಸಂಖ್ಯಾತ ಸಂಘಟನೆಗಳ ಜೊತೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪ್ಪಾರ ಸಮಾಜದ ಕೆ.ಸೋಮಶೇಖರ್, ವಿಶ್ವಕರ್ಮ ಮಹಾಮಂಡಳದ ಸಿ.ಟಿ.ಆಚಾರ್ಯ, ಝಾಕೀರ್ ಹುಸೇನ್, ನಂದೀಶ್ ಅರಸ್, ಜಿಲ್ಲಾ ಸವಿತಾ ಸಂಘರ್ಷ ಸಮಿತಿ ಅಧ್ಯಕ್ಷ ವಿ.ಮಂಜುನಾಥ್, ವಿದ್ಯಾರ್ಥಿ ಮುಖಂಡ ಕೆ.ಪಿ.ಚಿಕ್ಕಸ್ವಾಮಿ, ಎಚ್.ಎಸ್.ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News