ಮೇಲುಕೋಟೆ ಅಭಿವೃದ್ಧಿಗೆ ಇನ್ಫೋಸಿಸ್ ಸಾಥ್: ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಪರಿಶೀಲನೆ

Update: 2018-12-02 17:27 GMT

ಮಂಡ್ಯ, ಡಿ.2: ನಾಡಿನ ಪ್ರಸಿದ್ಧ ಪ್ರವಾಸಿತಾಣ ಹಾಗೂ ಐತಿಹಾಸಿಕ-ಧಾರ್ಮಿಕ ಕೇಂದ್ರ ಮೇಲುಕೋಟೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಸರಕಾರದ ಜತೆ ಇನ್ಫೋಸಿಸ್ ಫೌಂಡೇಷನ್ ಕೈಜೋಡಿಸಿದೆ.

ಈ ಸಂಬಂಧ ರವಿವಾರ ಮೇಲುಕೋಟೆಗೆ ಭೇಟಿ ನೀಡಿ ಮಾಹಿತಿ ಪಡೆದ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ, ಮೇಲುಕೋಟೆಯಲ್ಲಿ ಹೊಯ್ಸಳರು ಮತ್ತು ಮೈಸೂರು ರಾಜರ ಕಾಲದ ಕುರುಹುಗಳಿವೆ. ನೂರಕ್ಕೂ ಹೆಚ್ಚು ಕೊಳಗಳು ಹಾಗೂ ಮಂಟಪಗಳಿವೆ. ಇನ್ಫೋಸಿಸ್ ಫೌಂಡೇಷನ್ ಸರಕಾರದ ಸಹಯೋಗದೊಂದಿಗೆ ಅಭಿವೃದ್ದಿಪಡಿಸುತ್ತದೆ ಎಂದರು. ಸಾವಿರ ವರ್ಷಗಳ ಹಿಂದೆ ಹಿರಿಯರು ಕಷ್ಟಪಟ್ಟು ಈ ಪಾರಂಪರಿಕ ತಾಣಗಳಾದ ಕೊಳಗಳು, ಮಂಟಪಗಳು ಹಾಗೂ ದೇವಸ್ಥಾನವನ್ನು ನಿರ್ಮಿಸಿ ಬಳುವಳಿಯಾಗಿ  ನೀಡಿದ್ದು, ಇದರ ಸಂರಕ್ಷಣೆ ಹಾಗೂ ಅಭಿವೃದ್ಧಿ ನಮ್ಮ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.

ಈ ಪಾರಂಪರಿಕ ಕಟ್ಟಡಗಳಿಗೆ ಯಾವುದೇ ಧಕ್ಕೆಯಾಗದ ಹಾಗೇ ಮೇಲುಕೋಟೆ ಅಭಿವೃದ್ಧಿ ಮಾಡಲಾಗುವುದು. ಆದಷ್ಟು ಬೇಗ ಈ ಯೋಜನೆಯನ್ನು ಕಾರ್ಯರೂಪಗೊಳ್ಳಲಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಸ್ಥಳಿಯರ ಸಹಕಾರ ಅಗತ್ಯವಾಗಿದೆ ಎಂದು ಅವರು ಹೇಳಿದರು.

ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಮೇಲುಕೋಟೆ ಸಮಗ್ರ ಅಭಿವೃದ್ಧಿಗೆ ಇನ್ಫೋಸಿಸ್ ಸಂಸ್ಥೆ ಮುಂದಾಗಿರುವುದು ತುಂಬಾ ಸಂತೋಷದ ವಿಷಯ. ಮೇಲುಕೋಟೆಯಲ್ಲಿ 108 ಕೊಳಗಳಿದ್ದು, ಪುರಾತತ್ವ ಇಲಾಖೆಯಿಂದ ಎಲ್ಲಾ ಕೊಳಗಳನ್ನು ಪುನರುಜ್ಜೀವನಗೊಳಿಸುವ ಸಿದ್ಧತೆ ನಡೆದಿದೆ. ಸಣ್ಣ ನೀರಾವರಿ ಇಲಾಖೆಯಿಂದ 30 ಕೋಟಿ ರೂ. ಅನುದಾನ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಅಗತ್ಯವಿರುವ ಹಣ ಬಿಡುಗಡೆಯಾಗಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಸರಕಾರ ಹಾಗೂ ಇನ್ಫೋಸಿಸ್ ಸಂಸ್ಥೆ ಜತೆಯಾಗಿ ಮೇಲುಕೋಟೆ ಅಭಿವೃದ್ಧಿಗೆ ಮುಂದಾಗಿವೆ. ಇನ್ಫೋಸಿಸ್ ಸಂಸ್ಥೆಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು. 

ಮೇಲುಕೋಟೆ ವ್ಯಾಪ್ತಿಯಲ್ಲಿರುವ ಕಲ್ಯಾಣಿಗಳು ನಿರ್ವಹಣೆ ಇಲ್ಲದೇ ಶಿಥಿಲಗೊಂಡಿದ್ದು ಆ ಕಲ್ಯಾಣಿಗಳನ್ನು ದುರಸ್ತಿಗೊಳಿಸಿ ಪುನರುಜ್ಜೀವನಗೊಳಿಸಲು ಯೋಜನಾ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದ್ದು, ಈ ಯೋಜನೆಯ ವರದಿಯ ಅಂದಾಜು ಮೊತ್ತ 32 ಕೋಟಿ ರೂ.ಗಳಾಗಿದೆ ಎಂದು ಅವರು ವಿವರಿಸಿದರು.

ಜಿಲ್ಲಾಧಿಕಾರಿ ಎನ್.ಮಂಜುಶ್ರೀ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಕೆ.ಯಾಲಕ್ಕಿಗೌಡ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು  ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News