×
Ad

ಶಿಕ್ಷಕರ ಸಮಸ್ಯೆಗೆ ಸಿಎಂ ಸ್ಪಂದಿಸುತ್ತಿದ್ದಾರೆ: ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ

Update: 2018-12-02 23:04 IST

ಮಂಡ್ಯ, ಡಿ.2: ಹಿಂದೆ 20 ತಿಂಗಳ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಶಿಕ್ಷಣ ಇಲಾಖೆಯಲ್ಲಿ ಅಭೂತಪೂರ್ವ ಕೆಲಸ ಮಾಡಿ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದರು. ಪ್ರಸ್ತುತ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಅವರು ಶಿಕ್ಷಣ ಇಲಾಖೆಯ ಸಮಸ್ಯೆಗಳು, ಶಿಕ್ಷಕರ ಬೇಡಿಕೆಗೆ ಸ್ಪಂದಿಸುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹೇಳಿದ್ದಾರೆ.

ನಗರದ ರೈತ ಸಭಾಂಗಣದಲ್ಲಿ ರಾಜ್ಯ ಭಡ್ತಿ ಸರಕಾರಿ ಪ್ರೌಢಶಾಲಾ ಶಿಕ್ಷಕರ ಸಂಘ ಏರ್ಪಡಿಸಿದ್ದ ಭಡ್ತಿ ಪ್ರೌಢಶಾಲಾ ಶಿಕ್ಷಕರ ಸಮಾವೇಶದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಸಚಿವ ಸಿ.ಎಸ್.ಪುಟ್ಟರಾಜು ಅವರಿಗೆ ಮುಂದಿನ ದಿನಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸ್ಥಾನ ಲಭಿಸಿ ಶಿಕ್ಷಕರ ಸಮಸ್ಯೆಗಳು ಬರೆಹರಿಯುವಂತಾಗಲಿ ಎಂದರು.

ಸಮಾವೇಶ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ನಾವು ಏನೇ ಕಲಿಯಬೇಕಾದರೂ ಗುರುಗಳಿಂದ ಮಾತ್ರ ಸಾಧ್ಯ. ಮುಂದಿನ ದಿನಗಳಲ್ಲಿ ಯಾವುದೇ ರಾಜಕಾರಣಿಯ ಮನೆ ಬಾಗಿಲಿಗೆ ಶಿಕ್ಷಕರು ಹೋಗದ ರೀತಿ, ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾಡುತ್ತಾರೆ ಎಂದು ಭರವಸೆ ನೀಡಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‍ಗೌಡ ಅಭಿನಂದನಾ ಭಾಷಣ ಮಾಡಿ, ಹೋರಾಟದ ಮನೋಭಾವ ಹಸಿವಾದಾಗ ಗೊತ್ತಾಗುತ್ತದೆ. ಕೆ.ಟಿ.ಶ್ರೀಕಂಠೇಗೌಡರು ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ಖಾಸಗಿ ಶಾಲೆಯನ್ನು ಅನುದಾನಕ್ಕೆ ಒಳಪಡಿಸಲು ಬಹಳಷ್ಟು ಹೋರಾಟ ಮಾಡಿದ್ದಾರೆ ಎಂದರು.

ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ನಾಗೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರವಿಶಂಕರ್, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ದೇವರಾಜು, ಭಡ್ತಿ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜೆ.ಪಿ.ಗಜೇಂದ್ರಗೌಡ, ಪ್ರಧಾನ ಕಾರ್ಯದರ್ಶಿ ಜಯರಾಮು, ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News