ಮಕ್ಕಳ ಬಾಲ್ಯ, ಮಕ್ಕಳ ಹಕ್ಕು

Update: 2018-12-02 18:32 GMT

ಒಂದು ಕಾಲದಲ್ಲಿ ಪುಟಾಣಿ ಮಕ್ಕಳನ್ನು ಏಳು ವರ್ಷವಲ್ಲದೆ ಶಾಲೆಗೆ ಸೇರಿಸುವ ಸಂಪ್ರದಾಯವಿರಲಿಲ್ಲ. ಕನಿಷ್ಠ ತಮ್ಮ ಬಾಲ್ಯದ ಏಳು ವರ್ಷವನ್ನಾದರೂ ಮನೆಯಲ್ಲಿ ತಮ್ಮ ಪಾಲಕರ ಜೊತೆಗೆ ಪೂರ್ಣವಾಗಿ ಕಳೆಯಲು ಅವರಿಗೆ ಅವಕಾಶವಿತ್ತು. ಈ ಕಾರಣಕ್ಕೇ ‘ಮನೆಯೇ ಮೊದಲ ಪಾಠ ಶಾಲೆ’ ಎನ್ನುವ ಮಾತು ಹುಟ್ಟಿಕೊಂಡಿತು. ಮಕ್ಕಳ ಮೆದುವಾದ ಮನಸ್ಸಿನ ಮೇಲೆ ಮನೆಯೇ ತನ್ನ ಮೊದಲ ಬೀಜವನ್ನು ಬಿತ್ತುತ್ತದೆ. ಮನೆಯ ವಾತಾವರಣದಿಂದ ಕಲಿತ ಕಲಿಕೆ, ಶಾಲೆಯಲ್ಲಿ ಮುಂದುವರಿಯುತ್ತದೆ. ಮಕ್ಕಳು ತಮ್ಮ ಮಾತೃಭಾಷೆಯನ್ನು ಕಲಿಯುವುದು ತಾಯಿಯ ಮೂಲಕ. ಯಾವುದೇ ‘ಬಳಪ’ ಇಲ್ಲದೆಯೇ ತನ್ನ ಭಾಷೆಯನ್ನು ಮಗುವಿಗೆ ಕಲಿಸುವ ಮಹಾ ಶಿಕ್ಷಕಿ ತಾಯಿ. ಆಕೆಯೆಂದೂ ಭಾಷೆಯ ವ್ಯಾಕರಣವನ್ನು ಮಗುವಿಗೆ ಬೋಧಿಸುವುದಿಲ್ಲ ಅಥವಾ ಭಾಷೆಯನ್ನು ಯಾವುದೇ ನೋಟ್‌ಬುಕ್‌ನಲ್ಲಿ ಬರೆಸುವುದೂ ಇಲ್ಲ. ತಾನು ಒಂದು ಭಾಷೆಯನ್ನು ಕಲಿಯುತ್ತಿದ್ದೇನೆ ಎನ್ನುವ ಅರಿವೇ ಮಗುವಿಗಿರುವುದಿಲ್ಲ. ತಾಯಿಯ ಜೊತೆಗೆ ಆಡುತ್ತಾ, ಆಕೆಯ ಮಮತೆಯ ಮಾತುಗಳನ್ನು ಕೇಳುತ್ತಾ ಮಗು ಮಾತನಾಡಲಾರಂಭಿಸುತ್ತದೆ. ಮಗು ಮಾತನಾಡುವುದು ಎಂದರೆ ತನ್ನ ತಾಯಿಯ ಭಾಷೆಯನ್ನು ಕಲಿಯುವುದೆಂದೇ ಅರ್ಥ. ಹಾಗೆಯೇ ತಾಯಿ, ತಂದೆಯರ ವರ್ತನೆಗಳಿಂದಲೂ ಮಗು ನಿಧಾನಕ್ಕೆ ಪ್ರಭಾವಕ್ಕೊಳಗಾಗುತ್ತಾ ಸಮಾಜದ ಭಾಗವಾಗುತ್ತಾ ಹೋಗುತ್ತದೆ.

ಮನೆಯೆಂಬ ಶಾಲೆಯ ಕಲಿಕೆ ಪೂರ್ತಿಯಾದ ಬಳಿಕ, ಹೊರಗಿನ ಶಾಲೆಯ ಬಾಗಿಲು ಮಕ್ಕಳಿಗೆ ತೆರೆದುಕೊಳ್ಳಬೇಕು. ಆದರೆ ಕಳೆದ ಎರಡು ದಶಕಗಳಿಂದ ಪರಿಸ್ಥಿತಿ ಬದಲಾಗಿದೆ. ಮಗು ಹುಟ್ಟಿದಾಕ್ಷಣ ಕಾನ್ವೆಂಟ್ ಶಾಲೆಗಳಲ್ಲಿ ಮಗುವಿನ ಹೆಸರು ನೋಂದಾಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೇನು ತೊದಲು ಹೆಜ್ಜೆ ಇಟ್ಟಿತು ಎನ್ನುವಾಗ ಮಗುವನ್ನು ಮನೆಯಿಂದ ನರ್ಸರಿ, ಎಲ್‌ಕೆಜಿ, ಯುಕೆಜಿಗೆ ಪಾಲಕರು ದಾಟಿಸಲು ಯತ್ನಿಸುತ್ತಾರೆ. ಅಂದರೆ ಮೂರನೇ ವರ್ಷದಲ್ಲೇ ಮಗು ತನ್ನ ಮನೆಯೆಂಬ ಶಾಲೆಯನ್ನು ತೊರೆಯಬೇಕಾಗುತ್ತದೆ. ತಾಯಿಯೆನ್ನುವ ಮಹಾಶಿಕ್ಷಕಿಯ ಪಾಠ ಪೂರ್ತಿಯಾಗುವ ಮೊದಲೇ ಆಕೆಯ ಕೈಯಿಂದ ಮಗುವನ್ನು ಕಿತ್ತು ಚೀಲ, ಪುಸ್ತಕಗಳ ಜೊತೆಗೆ ಎಲ್‌ಕೆಜಿಗೆ ಸೇರಿಸಲಾಗುತ್ತದೆ. ತಾಯಿ-ಮಗುವಿನ ನಡುವಿನ ಬಾಂಧವ್ಯ ಗಟ್ಟಿಯಾಗುವ ಮೊದಲೇ ಮಗು ಪುಸ್ತಕದ ಬದನೆಕಾಯಿಯನ್ನು ಕಲಿಯಬೇಕಾಗುತ್ತದೆ. ಮಕ್ಕಳಲ್ಲಿ ಪಾಲಕರ ಜೊತೆಗೆ ಕಂಡು ಬರುವ ಅಂತರಗಳಿಗೆ ಇದು ಬಹುಮುಖ್ಯ ಕಾರಣವಾಗಿದೆ. ಬುದ್ಧಿ ಕಣ್ಣು ಬಿಡುವ ಮೊದಲೇ ತಾಯಿಯ ಕೈಯಿಂದ ಕಿತ್ತು ಶಾಲೆಗೆ ಸೇರಿಸುವುದರಿಂದ, ಮಕ್ಕಳು ತಾಯಿಯ ಮಮತೆಯನ್ನು ಕಳೆದುಕೊಳ್ಳಬೇಕಾಗುತ್ತದೆ.

ಶಾಲೆಯಲ್ಲಾದರೂ ಶಿಕ್ಷಕಿಯರು ತಾಯಿಯ ವಾತ್ಸಲ್ಯವನ್ನು, ಮಮತೆಯನ್ನು ಎಷ್ಟರ ಮಟ್ಟಿಗೆ ತುಂಬ ಬಲ್ಲರು? ತಮ್ಮ ಮೂರನೇ ವರ್ಷಕ್ಕೇ ಅಪರಿಚಿತ ಮುಖಗಳಿಗೆ ಅಂಜುತ್ತಾ, ಪಠ್ಯ ಪುಸ್ತಕಗಳ ಹೊರೆಯನ್ನು ಹೊರಬೇಕಾಗುತ್ತದೆ. ಭವಿಷ್ಯದಲ್ಲಿ ಮಕ್ಕಳೊಳಗೆ ಆತ್ಮವಿಶ್ವಾಸದ ಕೊರತೆಗೆ ಇದೂ ಕಾರಣವಾಗಿ ಬಿಡುತ್ತದೆ. ಒಂದನೇ ತರಗತಿಯಿಂದ ಮಕ್ಕಳು ಪುಸ್ತಕಗಳನ್ನು ಹೊರುವುದಕ್ಕೆ ಆರಂಭಿಸುತ್ತಾರೆ. ಜೊತೆಗೆ ಹೋಮ್‌ವರ್ಕ್‌ಗಳು ಅವರ ನಿದ್ದೆ ಗೆಡಿಸುತ್ತವೆ. ಶಾಲೆಯಿಂದ ಬಂದೂ ಮಕ್ಕಳು ತಮ್ಮ ಪಾಲಕರ ಜೊತೆಗೆ ಆತ್ಮೀಯವಾಗಿ ಬೆರೆಯುವ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ತಾಯಂದಿರು ಮಕ್ಕಳೊಂದಿಗೆ ಪ್ರೀತಿ ವಿಶ್ವಾಸದಿಂದ ಮಾತನಾಡುವುದನ್ನು ಬಿಟ್ಟು, ಬೆತ್ತ ಹಿಡಿದು ಹೋಮ್‌ವರ್ಕ್ ಗಳನ್ನು ಮುಗಿಸುವುದಕ್ಕೆ ಆದೇಶ ನೀಡಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ತಮ್ಮ ಬಾಲ್ಯವನ್ನು ಅನುಭವಿಸುವುದೇ ಅಸಾಧ್ಯ ಎಂಬಂತಾಗಿದೆ.

ಇಂತಹ ಹೊತ್ತಿನಲ್ಲಿ ಕೇಂದ್ರ ಸರಕಾರ ಮಕ್ಕಳ ಕುರಿತಂತೆ ಒಂದಿಷ್ಟು ತಲೆಕೆಡಿಸಿಕೊಂಡಿರುವುದು ಸಮಾಧಾನ ತರುವ ವಿಷಯವಾಗಿದೆ. ಒಂದು ಮತ್ತು ಎರಡನೇ ತರಗತಿಗಳ ಮಕ್ಕಳಿಗೆ ಇನ್ನು ಮುಂದೆ ಮನೆಗೆಲಸದ ಹೊರೆಯನ್ನು ನೀಡಬಾರದು ಎಂದು ಆದೇಶಿಸಿರುವ ಸರಕಾರ, ಶಾಲಾ ಬ್ಯಾಗ್‌ಗಳ ಭಾರಕ್ಕೂ ಮಿತಿ ಹೇರಿದೆ. ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಭಾಷೆ ಮತ್ತು ಗಣಿತ ವಿಷಯ ಹೊರತು ಪಡಿಸಿ ಉಳಿದ ಯಾವುದೇ ವಿಷಯಗಳನ್ನು ಬೋಧಿಸುವಂತಿಲ್ಲ. ಹಾಗೆಯೇ ಮೂರರಿಂದ ಐದನೇ ತರಗತಿ ವಿದ್ಯಾರ್ಥಿಗಳಿಗೆ ಎನ್‌ಸಿಇಆರ್‌ಟಿ ಸಲಹೆಯಂತೆ ಗಣಿತ ಹಾಗೂ ಇವಿಎಸ್ ವಿಷಯವಷ್ಟೇ ಬೋಧಿಸಬಹುದು. ಈ ಆದೇಶ ಪರಿಣಾಮಕಾರಿಯಾಗಿ ಜಾರಿಯಾದದ್ದೇ ಆದರೆ, ಒಂದು ಮತ್ತು ಎರಡನೇ ವರ್ಷದ ಮಕ್ಕಳು ಒಂದಿಷ್ಟು ನಿರಾಳವಾಗಬಹುದು.

ಪುಸ್ತಕಗಳ ಹೆಣಭಾರವನ್ನು ಹೊರುವುದರಿಂದ ಪಾರಾಗುವುದು ಮಾತ್ರವಲ್ಲ, ಶಾಲೆಯಿಂದ ಮನೆಗೆ ಬಂದ ಮಕ್ಕಳು ತಮ್ಮ ಪಾಲಕರ ಜೊತೆಗೆ ಬೆರೆಯುವುದಕ್ಕೆ, ಅವರಿಂದ ಕಲಿಯುವುದಕ್ಕೆ ಅವಕಾಶವಾಗಬಹುದು. ಮಕ್ಕಳ ಬಾಲ್ಯ ಮಕ್ಕಳ ಹಕ್ಕು. ಪಾಲಕರಾಗಲಿ, ಶಿಕ್ಷಣ ಸಂಸ್ಥೆಗಳಾಗಲಿ ತಮ್ಮ ತಮ್ಮ ಪ್ರತಿಷ್ಠೆಗಾಗಿ, ಸ್ವಾರ್ಥಕ್ಕಾಗಿ ಅದನ್ನು ಬಲಿ ಪಡೆಯುವ ಯಾವ ಅಧಿಕಾರವೂ ಅವರಿಗಿಲ್ಲ. ತನ್ನ ತಾಯಿ, ತಂದೆ ಮತ್ತು ಪರಿಸರದ ಜೊತೆಗಿನ ಸಹಜ ಕಲಿಕೆಯನ್ನು ಸಂಪೂರ್ಣಗೊಳಿಸಿದ ಬಳಿಕ, ಮಕ್ಕಳು ಅಧಿಕೃತವಾಗಿ ಶಾಲೆಗೆ ಕಾಲಿಡಬೇಕು. ಸಣ್ಣ ಮಕ್ಕಳು ಶಾಲೆಗೆ ತೆರಳಿ ಅಂಕಗಳನ್ನು ಸಂಪಾದಿಸಿ ತರಬೇಕು ಎಂದು ಪಾಲಕರು ಬಯಸಿದರೆ ಅದೂ ಬಾಲಕಾರ್ಮಿಕ ದುಡಿಮೆಯ ಇನ್ನೊಂದು ಮುಖವೇ ಆಗಿದೆ. ಮಕ್ಕಳು ಶಾಲೆಗೆ ಹೋಗುವುದು ಅಂಕಗಳನ್ನು ಸಂಪಾದಿಸುವುದಕ್ಕಲ್ಲ. ಹೊಸತನ್ನು ಕಲಿಯುವುದಕ್ಕೆ. ಅವರ ಕಲಿಕೆಯನ್ನು ಒಂದು ಸಂತೋಷದ, ಖುಷಿಯ ಪ್ರಕ್ರಿಯೆಯಾಗಿಸುವುದು ಶಾಲೆಗಳ ಜವಾಬ್ದಾರಿ.

 ಈ ನಿಟ್ಟಿನಲ್ಲಿ ಆದೇಶ ಹೊರಡಿಸುವುದರಿಂದಷ್ಟೇ ತನ್ನ ಹೊಣೆಗಾರಿಕೆ ಮುಗಿಯಿತು ಎಂದು ಕೇಂದ್ರ ಸರಕಾರ ಭಾವಿಸಬಾರದು. ಆ ಆದೇಶವನ್ನು ಶಾಲೆಗಳು ಎಷ್ಟರಮಟ್ಟಿಗೆ ಅನುಷ್ಠಾನಕ್ಕೆ ತರುತ್ತವೆ ಎನ್ನುವುದರ ಬಗ್ಗೆಯೂ ತನಿಖೆ ನಡೆಸಬೇಕು. ಇದೇ ಸಂದರ್ಭದಲ್ಲಿ ಶಾಲೆಗಳು ಆದೇಶವನ್ನು ಪಾಲಿಸದೇ ಇದ್ದರೆ, ಪಾಲಕರು ಆ ಬಗ್ಗೆ ಪ್ರಶ್ನೆ ಎತ್ತುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಶಾಲೆಗಳು ತಮ್ಮ ಮಕ್ಕಳಿಗೆ ಹೋಮ್‌ವರ್ಕ್‌ಗಳನ್ನು ಕೊಟ್ಟಷ್ಟೂ ಸಂತೋಷಪಡುವ ಪಾಲಕರಿದ್ದಾರೆ. ಆದರೆ, ತಮ್ಮ ಮಕ್ಕಳು ಶಿಕ್ಷಣ ಸಂಸ್ಥೆಗಳ ವ್ಯಾಪಾರದ ಸರಕುಗಳಾಗದಂತೆ ನೋಡಿಕೊಳ್ಳುವುದು ಪಾಲಕರ ಜವಾಬ್ದಾರಿಯೂ ಹೌದು. ಶಿಕ್ಷಣ ಸಂಸ್ಥೆ, ಪಾಲಕರು ಮತ್ತು ಸಮಾಜ ಸಹಕರಿಸಿದರೆ ಖಂಡಿತವಾಗಿಯೂ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರಬಹುದು. ಯಾವುದೇ ಸ್ವಾರ್ಥಗಳಿಗೆ ಬಲಿಯಾಗದೆ ಮಕ್ಕಳ ಬಾಲ್ಯ ಸೃಜನಶೀಲವಾಗಿ ಅರಳಿದರೆ ಮಾತ್ರ, ಅವರ ಭವಿಷ್ಯ ಸಮೃದ್ಧವಾಗಬಹುದು ಎನ್ನುವುದನ್ನು ಇನ್ನಾದರೂ ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News