ಮಂದಿರ ನಿರ್ಮಾಣಕ್ಕಿಂತ ಆದ್ಯತೆಯ ವಿಚಾರ ಯಾವುದೆಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಲಿ : ಜಗದೀಶ್ ಶೆಟ್ಟರ್

Update: 2018-12-03 12:58 GMT

ಗದಗ, ಡಿ. 3: ಮಂದಿರ ನಿರ್ಮಾಣ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ರಾಮ ಮಂದಿರ ನಿರ್ಮಾಣಕ್ಕಿಂತ ಬೇರೆ ಆದ್ಯತೆ ವಿಚಾರಗಳಿವೆ ಎಂದಿದೆ. ಆದರೆ, ಕೋರ್ಟ್‌ಗೆ ಬೇರೆ ಯಾವ ವಿಚಾರ ಆದ್ಯತೆ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರಶ್ನಿಸಿದ್ದಾರೆ.

ಸೋಮವಾರ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮದಲ್ಲಿ ಬರ ಅಧ್ಯಯನಕ್ಕೆ ತೆರಳಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು, ಲೋಕಸಭಾ ಅಧಿವೇಶನದಲ್ಲಿ ರಾಮ ಮಂದಿರ ನಿರ್ಮಾಣ ಸಂಬಂಧ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು.

ದೇಶದಲ್ಲಿನ ಹಿಂದೂಗಳ ಬಗ್ಗೆ ಇಷ್ಟು ದಿನ ಇಲ್ಲದ ಕಾಳಜಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಇದೀಗ ಬಂದಿದೆ. ಹೀಗಾಗಿ ನಾನು ಬ್ರಾಹ್ಮಣ, ದತ್ರಾತ್ರೇಯ ಗೋತ್ರ ಎಂದು ಹೇಳಿಕೊಂಡಿದ್ದಾರೆ. ಆದರೆ, ಬಿಜೆಪಿಯವರ ಬಗ್ಗೆ ಮಾತನಾಡುವ ನೈತಿಕತೆ ಅವರಿಗೆ ಇಲ್ಲ ಎಂದು ಟೀಕಿಸಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕೋ, ಬೇಡವೋ.. ಎಂಬ ಬಗ್ಗೆ ರಾಹುಲ್ ಗಾಂಧಿ ತನ್ನ ನಿಲುವನ್ನು ಸ್ಪಷ್ಟಪಡಿಸಲಿ. ಮಂದಿರ ಆಗಲಿ ಎಂದರೆ ಅವರನ್ನು ಹಿಂದೂ ಎಂದು ಒಪ್ಪಿಕೊಳ್ಳುತ್ತೇವೆ ಎಂದ ಶೆಟ್ಟರ್, ಮೋದಿಯವರನ್ನು ಪ್ರಶ್ನಿಸುವ ರಾಹುಲ್ ಗಾಂಧಿಗೆ ಹಿಂದೂ ಧರ್ಮದ ಬಗ್ಗೆ ಏನು ಗೊತ್ತು ಹೇಳಲಿ ಎಂದು ಸವಾಲು ಹಾಕಿದರು.

ಸಂಪುಟ ವಿಸ್ತರಣೆಯಾದರೆ ಮೈತ್ರಿ ಸರಕಾರ ಬೀಳಲಿದೆ. ಲೋಕಸಭೆ ಚುನಾವಣೆ ಮುಗಿಯುವವರೆಗೂ ಸಂಪುಟ ವಿಸ್ತರಣೆ ಆಗುವುದು ಸುಳ್ಳು. ಒಂದು ವೇಳೆ ಸಂಪುಟ ವಿಸ್ತರಣೆಯಾದರೂ ಮೈತ್ರಿ ಸರಕಾರ ಬೀಳುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಶೆಟ್ಟರ್ ಭವಿಷ್ಯ ನುಡಿದರು.

ಆರೋಪ ಸಾಬೀತು ಮಾಡಲಿ: ಕಾಂಗ್ರೆಸ್ ಹಾಗೂ ಜೆಡಿಎಸ್‌ನವರು ಕೇವಲ ಊಹಾಪೋಹಗಳನ್ನು ಪ್ರಚಾರ ಮಾಡಿಕೊಂಡು ತಿರುಗಾಡುತ್ತಿದ್ದಾರೆ. ಆದರೆ, ಬಿಜೆಪಿ ಆಪರೇಷನ್ ಕಮಲದ ಬಗ್ಗೆ ಸಾಬೀತು ಮಾಡಲಿ. ಬಿಜೆಪಿ ವಿರುದ್ಧದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ತಳ್ಳಿಹಾಕಿದರು.
ರಾಜ್ಯದ ನೂರಕ್ಕೂ ಹೆಚ್ಚು ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದೆ. ಆದರೆ, ಈವರೆಗೂ ಯಾವೊಬ್ಬ ಸಚಿವ-ಅಧಿಕಾರಿಗೂ ರೈತರು ಹಾಗೂ ಜನರ ಸಮಸ್ಯೆಗಳನ್ನು ಆಲಿಸುವ ಗೋಜಿಗೆ ಹೋಗಿಲ್ಲ ಎಂದು ಟೀಕಿಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರೇ ಇಲ್ಲ ಎಂದರೆ ಅಧಿಕಾರಿಗಳನ್ನು ಕೇಳುವವರ್ಯಾರು ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News