×
Ad

ಮಂಡ್ಯ: ನಾಲೆಗೆ ಸ್ಕೂಟರ್ ಬಿದ್ದು ಒಂದೇ ಕುಟುಂಬದ ಮೂವರು ಮೃತ್ಯು

Update: 2018-12-03 19:59 IST

ಮಂಡ್ಯ, ಡಿ.3: ಜಿಲ್ಲೆಯ ಕನಗನಮರಡಿ ಬಳಿ ನಾಲೆಗೆ ಬಸ್ ಉರುಳಿ 30 ಮಂದಿ ಸಾವನ್ನಪ್ಪಿದ ಸುದ್ದಿ ಹಸಿಯಾಗಿರುವಾಗಲೇ, ನಾಲೆಗೆ ಸ್ಕೂಟರ್ ಉರುಳಿ ಬಾಲಕಿ ಸೇರಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಘಟನೆ ರವಿವಾರ ಸಂಜೆ ನಡೆದಿದೆ.

ತಾಲೂಕಿನ ಲೋಕಸರ ಗ್ರಾಮದ ಬಳಿ ಸ್ಕೂಟರ್ ನಿಂದ ಅಯತಪ್ಪಿ ನಾಲೆಗೆ ಬಿದ್ದ ತಾಯಿ, ಮಗಳು, ಮೊಮ್ಮಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಲೋಕಸರ ಗ್ರಾಮದ ತಾಯಿ ನಾಗಮ್ಮ(50), ಪುತ್ರಿ ಅಂಬಿಕಾ(33) ಹಾಗೂ ಅಂಬಿಕಾ ಪುತ್ರಿ ಮಗಳು ಮಾನ್ಯತಾ(7) ಸಾವನ್ನಪ್ಪಿದವರು. ಇವರು ಊರಿನ ಪಕ್ಕದ ದೇವಾಲಯಕ್ಕೆ ಹೋಗಿ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಸ್ಕೂಟರ್ ನಿಂದ ಅಯತಪ್ಪಿ ನಾಲೆಗೆ ಬಿದ್ದ ಮೂವರನ್ನು ರಕ್ಷಿಸಲು ತಕ್ಷಣ ಮುಂದಾದ ಗ್ರಾಮಸ್ಥರು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದರು. ಆದರೆ, ಮಗು ಮಾನ್ಯತಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಳು.

ಜಿಲ್ಲಾಸ್ಪತ್ರೆಗೆ ಸಾಗಿಸುತ್ತಿದ್ದ ನಾಗಮ್ಮ ಹಾಗೂ ಅಂಬಿಕಾ ಅವರೂ ಮಾರ್ಗಮಧ್ಯೆ ಸಾವನ್ನಪ್ಪಿದರು. ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ ಮೃತ ದೇಹಗಳ ಶವ ಪರೀಕ್ಷೆ ನಡೆಸಲಾಯಿತು. ಶವಾಗಾರದ ಎದುರು ಕುಟುಂಬದವರ ರೋದನ ಮುಗಿಲುಮುಟ್ಟಿತ್ತು.

ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಸ್ತುವಾರಿ ಸಚಿವರ ಸಾಂತ್ವನ:

ಸೋಮವಾರ ಬೆಳಗ್ಗೆ ಜಿಲ್ಲಾಸ್ಪತ್ರೆ ಶವಾಗಾರದ ಬಳಿ ತೆರಳಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹಾಗೂ ಶಾಸಕ ರವೀಂದ್ರ ಶ್ರೀಕಂಠಯ್ಯ  ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿ ಪರಿಹಾರ ಕೊಡಿಸುವ ಭವರಸೆ ನೀಡಿದರು.

'ಇದು ನೋವಿನ ವಿಚಾರ ಖಾಸಗಿ ಬಸ್ ನಾಲೆಗೆ ಉರುಳಿ 30 ಸಾವನ್ನಪ್ಪಿದ ಕೆಲವೇ ದಿನಗಳಲ್ಲಿ ಸ್ಕೂಟರ್‍ನಿಂದ ಅಯತಪ್ಪಿ ನಾಲೆಗೆ ಬಿದ್ದು ಮೂವರು ಸಾವನ್ನಪ್ಪಿದ್ದಾರೆ. ನಾಲೆಗಳಿಗೆ ತಡೆಗೋಡೆ ನಿರ್ಮಿಸಲು ಸಿಎಂ ಈಗಾಗಲೇ ಆದೇಶಿಸಿದ್ದಾರೆ' ಎಂದು ಪುಟ್ಟರಾಜು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News