ನಮ್ಮ ಸರಕಾರದಲ್ಲಿ ವಸೂಲಿ, ಪರ್ಸೆಂಟೇಜ್‌ಗೆ ಅವಕಾಶವಿಲ್ಲ: ಡಿ.ಕೆ.ಶಿವಕುಮಾರ್
ಬೆಂಗಳೂರು, ಡಿ.3: ಬಳ್ಳಾರಿಯಲ್ಲಿ ನಡೆಸಬೇಕಿರುವ ಹಂಪಿ ಉತ್ಸವಕ್ಕೆ ಹಣಕಾಸಿನ ಕೊರತೆಯಿದೆ ಎಂದು ತಾನು ಎಲ್ಲಿಯೂ ಹೇಳಿಲ್ಲ. ಬರಗಾಲ, ಅಧಿವೇಶನದ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ಬಾರಿ ಉತ್ಸವ ಮಾಡುವುದು ಬೇಡ ಎಂಬ ಸಲಹೆ ನೀಡಿದ್ದರು ಅಷ್ಟೇ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದರು.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಜಯಂತಿ ರಾಜ್ಯದ ಕಾರ್ಯಕ್ರಮ. ಅದಕ್ಕೂ ಹಂಪಿ ಉತ್ಸವಕ್ಕೂ ಹೋಲಿಕೆ ಬೇಡ. ದಸರಾ ಹಬ್ಬವನ್ನು ನಾವು ಕೆಲವು ಸಲ ವಿಜೃಂಭಣೆಯಿಂದ, ಕೆಲವು ಸಲ ಸರಳವಾಗಿ ಆಚರಿಸುತ್ತೇವೆ ಎಂದರು.
ಸರಕಾರದ ಬಳಿ ಹಣ ಇಲ್ಲದಿದ್ದರೆ ನಾವು ಭಿಕ್ಷೆ ಎತ್ತಿಯಾದರೂ ಹಂಪಿ ಉತ್ಸವ ಮಾಡುವುದಾಗಿ ಬಿಜೆಪಿ ಶಾಸಕ ಸೋಮಶೇಖರರೆಡ್ಡಿ ಮಾಡಿರುವ ಸವಾಲಿನ ಕುರಿತು ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಪರ್ಸೆಂಟೇಜ್ ವಸೂಲಿ ಮಾಡುತ್ತಿದ್ದರು. ಈಗ ಅದನ್ನು ಮುಂದುವರೆಸಲು ಹೋಗುತ್ತಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಶಾಸಕರು ಸರಕಾರಕ್ಕೆ ಸಲಹೆ ಕೊಡಲಿ, ಇಲ್ಲದಿದ್ದರೆ ಅವರ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ನೀಡಲಿ, ಅದನ್ನು ಬಿಟ್ಟು ಜನರಿಂದ ಬಲವಂತವಾಗಿ ವಸೂಲಿ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.
ವಿಜಯನಗರ ಸಂಸ್ಕೃತಿ ಹಾಗೂ ಇತಿಹಾಸಕ್ಕೆ ಯಾವುದೇ ರೀತಿ ಧಕ್ಕೆ ಬರದ ರೀತಿಯಲ್ಲಿ ನಾವು ಹಂಪಿ ಉತ್ಸವ ಮಾಡಬೇಕೆಂಬ ಉದ್ದೇಶ ಹೊಂದಿದ್ದೇವೆ. ಹೀಗಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಉತ್ಸವವನ್ನು ಒಂದು ದಿನ ಮಾಡಲು ಸಾಧ್ಯವೇ ಎಂಬುದರ ಕುರಿತು ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಅವರು ತಿಳಿಸಿದರು.
ನನ್ನ ಹೆಸರು ಹೇಳಿದರೆ ಮಾರ್ಕೆಟ್ ಜಾಸ್ತಿ: ಆಪರೇಷನ್ ಕಮಲಕ್ಕೆ ಸಂಬಂಧಿಸಿದ ಆಡಿಯೋ ಬಿಡುಗಡೆ ಸಂಬಂಧ ಬಿಜೆಪಿ ಶಾಸಕ ಸಿ.ಟಿ.ರವಿ ತಮ್ಮ ವಿರುದ್ಧ ಮಾಡಿರುವ ಆರೋಪದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಹೆಸರು ಹೇಳಿದರೆ ಮಾರ್ಕೆಟ್ ಜಾಸ್ತಿ. ಆದುದರಿಂದ, ನನ್ನ ಹೆಸರನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದರು.
ಬಳ್ಳಾರಿಯ ಕಾಂಗ್ರೆಸ್ ಶಾಸಕರ ಹೆಸರಿಗೆ ಮಸಿ ಬಳಿಯಲು ಇಂತಹ ಕುತಂತ್ರಗಳನ್ನು ಮಾಡಲಾಗುತ್ತಿದೆ. ನಾನು ತುಂಬಾ ಚಿಕ್ಕವನು ಅಣ್ಣಾವ್ರು (ಬಿಜೆಪಿ ಶಾಸಕ ಶ್ರೀರಾಮುಲು) ಏನೇನು ಬೇಕು ಅದನ್ನೆಲ್ಲ ಮಾಡಲಿ. ನನ್ನ ಬಿಜೆಪಿಯ ಸ್ನೇಹಿತರು ತಾಳ್ಮೆಯಿಂದ ಇರಬೇಕು. ನಮ್ಮ ಸರಕಾರದಲ್ಲಿ ವಸೂಲಿ, ಪರ್ಸೆಂಟೇಜ್‌ಗೆ ಅವಕಾಶವಿಲ್ಲ ಎಂದು ಶಿವಕುಮಾರ್ ತಿಳಿಸಿದರು.
ಹುಡುಗಾಟ ಮಾಡಿಕೊಂಡು ಉತ್ಸವ ಮಾಡಲು ಸಾಧ್ಯವಿಲ್ಲ. ಯಾವ ಉತ್ಸವ, ಯಾವ ಜೋಳಿಗೆ ಎತ್ತುತ್ತಾರೋ ನೋಡೋಣ. ಅರಮನೆಯಲ್ಲೆ ಉತ್ಸವ ಮಾಡುತ್ತಾರೋ ನೋಡೋಣ. ಎಲ್ಲವನ್ನೂ ನಾನು ಗಮನಿಸುತ್ತಿದ್ದೇನೆ ಎಂದು ಅವರು ಹೇಳಿದರು.
ಶಾಸಕ ಸತೀಶ್ ಜಾರಕಿಹೊಳಿ, ರೆಸಾರ್ಟ್ ರಾಜಕಾರಣಕ್ಕೆ ಸಂಬಂಧಿಸಿದಂತೆ ಏನು ಹೇಳಿಕೆ ಕೊಟ್ಟಿದ್ದಾರೋ ನನಗೆ ಗೊತ್ತಿಲ್ಲ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಪಕ್ಷ ನನಗೆ ಹೇಳಿದ ಕೆಲಸವನ್ನಷ್ಟೇ ಮಾಡುತ್ತೇನೆ ಎಂದು ಅವರು ಹೇಳಿದರು.
ಶಿವಮೊಗ್ಗ ಜಿಲ್ಲೆಯ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಚರ್ಚಿಸಲು ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ನನ್ನನ್ನು ಭೇಟಿ ಮಾಡಿದ್ದರು. ಶಿವಮೊಗ್ಗಕ್ಕೆ ಹೋದಾಗ ಯೋಜನೆಗಳಿಗೆ ಚಾಲನೆ ನೀಡುತ್ತೇನೆ. ಯಡಿಯೂರಪ್ಪ ನೀಡುವ ಆತಿಥ್ಯ ಸ್ವೀಕರಿಸುತ್ತೇನೆ ಎಂದು ಶಿವಕುಮಾರ್ ತಿಳಿಸಿದರು.