ಬಿಜೆಪಿ ಗಂಗಾ ನದಿ ಇದ್ದಂತೆ, ಎಂತಹ ಕೆಟ್ಟವರು ಬಂದರೂ ಶುದ್ಧಿ ಮಾಡುತ್ತದೆ: ಕೆ.ಎಸ್ ಈಶ್ವರಪ್ಪ

Update: 2018-12-03 17:20 GMT

ಕಲಬುರ್ಗಿ, ಡಿ. 3: ಬಿಜೆಪಿ ಪವಿತ್ರ ಗಂಗಾ ನದಿ ಇದ್ದಂತೆ. ಎಂತಹ ಕೆಟ್ಟವರು, ಕೊಳೆತವರು ಬಂದರೂ, ಅವರನ್ನು ಶುದ್ಧಿ ಮಾಡುವ ಶಕ್ತಿ ಬಿಜೆಪಿಗೆ ಇದೆ ಎಂದು ಹಿರಿಯ ಮುಖಂಡ ಹಾಗೂ ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ಹೇಳಿದ್ದಾರೆ.

ಸೋಮವಾರ ಬರ ಅಧ್ಯಯನದ ಹಿನ್ನೆಲೆಯಲ್ಲಿ ಜಿಲ್ಲೆಗೆ ಭೇಟಿ ನೀಡಿದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಕಾಶವಾದಿ ರಾಜಕಾರಣಿ. ಅವಕಾಶ ಸಿಕ್ಕರೆ ಅವರು ಬಿಜೆಪಿಗೆ ಬರಲು ಸಿದ್ಧರಿದ್ದಾರೆ ಎಂದು ಹೇಳಿದರು.

ನನ್ನ ಹಾಗೂ ಸಿದ್ದರಾಮಯ್ಯ ಮಧ್ಯೆ ಪ್ರೀತಿ ಜಾಸ್ತಿ. ಹೀಗಾಗಿ ಅವರು ನನ್ನ ಬಗ್ಗೆ ಇಲ್ಲ-ಸಲ್ಲದ ಮಾತುಗಳನ್ನು ಆಡುತ್ತಾರೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ. ಆದರೆ, ಸಿದ್ಧರಾಮಯ್ಯನವರಂತ ಅವಕಾಶವಾದಿ ರಾಜಕಾರಣಿ ದೇಶದಲ್ಲಿ ಯಾರೂ ಇಲ್ಲ. ಇದನ್ನು ನಾನು ಹೇಳಿದರೆ ಅವರು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆಂದ ಈಶ್ವರಪ್ಪ ಟೀಕಿಸಿದರು.

ಬೆಲೆ ಇಲ್ಲವೇ: ಜೆಡಿಎಸ್ ಚುನಾವಣಾ ಪ್ರಣಾಳಿಕೆಗೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದ ಈಶ್ವರಪ್ಪ, ಮುಂದಿನ ಚುನಾವಣೆಯಲ್ಲಿ ಪೂರ್ಣ ಬಹುಮತ ಬಂದರೆ ಮಾತ್ರ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಜಾರಿಗೆ ತರುತ್ತೇವೆಂದು ಪ್ರಕಟಿಸಿ ಎಂದು ಟೀಕಿಸಿದ ಅವರು, ನನ್ನ ರಾಜಕೀಯ ಜೀವನದಲ್ಲೆ ಇಂತಹ ಸರಕಾರವನ್ನು ನೋಡಿಲ್ಲ ಎಂದು ಲೇವಡಿ ಮಾಡಿದರು.

ರಾಜ್ಯದಲ್ಲಿನ ಬರ ಪರಿಸ್ಥಿತಿಯ ಬಗ್ಗೆ ಬಿಜೆಪಿ ಅಧ್ಯಯನ ನಡೆಸುತ್ತಿದ್ದು, ರೈತರ ಹೊಲಗಳಿಗೆ ಭೇಟಿ ನೀಡಿದ ವೇಳೆ ದುಃಖವಾಗುತ್ತಿದೆ. ‘ಮಣ್ಣಿನ ಮಗ’ ಎಂದು ಹೇಳುವ ದೇವೇಗೌಡ, ಹಿಂದುಳಿದ ನಾಯಕ ಎನ್ನುವ ಸಿದ್ದರಾಮಯ್ಯ ಒಟ್ಟಿಗೆ ಪ್ರವಾಸ ಮಾಡಲಿ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಬರ ಪೀಡಿತ ತಾಲೂಕುಗಳಿಗೆ ಈಗಾಗಲೇ 50ಲಕ್ಷ ರೂ.ಬಿಡುಗಡೆ ಮಾಡಲಾಗಿದೆ ಎಂದು ಸರಕಾರ ಹೇಳಿದ್ದು, ಇದು ಸಾಕಾಗುವುದಿಲ್ಲ. ಗೋಶಾಲೆಗಳನ್ನು ಆರಂಭಿಸಿಲ್ಲ. ಹೀಗಾಗಿ ರಾಜ್ಯ ಸರಕಾರ ಕೂಡಲೇ ಹೆಚ್ಚುವರಿ ಹಣ ಬಿಡುಗಡೆ ಮಾಡಬೇಕು. ಗೋಶಾಲೆ ಆರಂಭಿಸಬೇಕು. ರೈತರ ಸಾಲಮನ್ನಾಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News