×
Ad

ಧರ್ಮದ ಹೆಸರಿನಲ್ಲಿ ಬಲಪಂಥೀಯರ ಹೊಲಸು ರಾಜಕೀಯ: ಮಹಿಳಾ ಪರ ಹೋರಾಟಗಾರ್ತಿ ಡಾ.ಕೆ.ಷರೀಫಾ

Update: 2018-12-03 22:59 IST

ಬೆಂಗಳೂರು, ಡಿ.3: ಮಹಿಳೆಯರ ಮೇಲೆ ಮೂಢನಂಬಿಕೆ, ಕಂದಾಚಾರಗಳನ್ನು ಹೇರುವ ಮೂಲಕ ಬಲಪಂಥೀಯರು ಧರ್ಮದ ಹೆಸರಿನಲ್ಲಿ ಹೊಲಸು ರಾಜಕೀಯ ಮಾಡುತ್ತಿದ್ದಾರೆ ಎಂದು ಮಹಿಳಾ ಪರ ಹೋರಾಟಗಾರ್ತಿ ಡಾ.ಕೆ.ಷರೀಫಾ ಅಭಿಪ್ರಾಯಪಟ್ಟರು.

ನಗರದ ವೈಷ್ಣವಿ ಪಾರ್ಟಿ ಹಾಲ್‌ನಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ದಲಿತ ಹಕ್ಕುಗಳ ಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದ ‘ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಪ್ರವೇಶ ಮತ್ತು ಸುಪ್ರೀಂ ಕೋರ್ಟ್ ತೀರ್ಪು’ ವಿಷಯದ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಲಪಂಥೀಯ ಗುಂಪುಗಳು ತಮ್ಮ ಸ್ವಾರ್ಥ ರಾಜಕೀಯಕ್ಕಾಗಿ ಅನಗತ್ಯವಾಗಿ ಸುಪ್ರೀಂಕೋರ್ಟ್‌ನ ತೀರ್ಪಿನ ಮೇಲೆ ಗೊಂದಲ ಮೂಡಿಸುತ್ತಿದ್ದಾರೆ. ಸಮಾಜದಲ್ಲಿನ ಮೂಢನಂಬಿಕೆ, ಅನಾಚಾರಗಳನ್ನು ಮಹಿಳೆಯರ ನೈಸರ್ಗಿಕ ಬದುಕಿನ ಮೇಲೆ ಹೇರುತ್ತಿದ್ದಾರೆ. ಈ ಮೂಲಕ ಅವರ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಮಹಿಳೆಯರ ಮೇಲೆ ಹೇರಲು ಮುಂದಾಗಿರುವ ಮೂಢನಂಬಿಕೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಅಲ್ಲದೆ, ಮಹಿಳೆಯರ ಹಕ್ಕುಗಳ ಮೇಲೆ ನಡೆಸುತ್ತಿರುವ ದಬ್ಬಾಳಿಕೆಗಳ ಬಗ್ಗೆ ಮಹಿಳೆಯರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕಿದೆ ಎಂದು ಹೇಳಿದರು.

ಮಹಿಳೆಯರಿಗೆ ಶಬರಿಮಲೆ ದೇವಾಲಯ ಪ್ರವೇಶಕ್ಕೆ ನಿರಾಕರಿಸುವುದು ಮಹಿಳೆಯರಿಗೆ ಅಪಮಾನ ಮಾಡಿದಂತೆ. ಶಬರಿಮಲೆ ದೇವಾಲಯ ಪ್ರವೇಶ ವಿಚಾರದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಮಹಿಳೆಯರ ವಿರುದ್ಧವಾಗಿ ಮಹಿಳೆಯರನ್ನೇ ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ ಎಂದು ದೂರಿದರು.

ಮಹಾರಾಷ್ಟ್ರದಲ್ಲಿರುವ ಒಂದು ಶನಿ ಸಿಂಗಾಪುರ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶವನ್ನು ಬಿಜೆಪಿ ಸಂಪೂರ್ಣ ಬೆಂಬಲ ನೀಡಿ ಸ್ವಾಗತಿಸಿತು. ಆದರೆ, ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ನೀಡಬೇಕು ಎಂದು ಕೋರ್ಟ್ ತೀರ್ಪು ನೀಡಿದರೆ ಸ್ವಾಗತಿಸಿದವರೇ ವಿರೋಧಿಸುತ್ತಿದ್ದು, ಅವರ ದ್ವಿಮುಖ ನೀತಿಯನ್ನು ತೋರಿಸುತ್ತದೆ ಎಂದರು.

ಶನಿ ದೇವಸ್ಥಾನಕ್ಕೆ ಮಹಿಳೆಯರಿಗೆ ಅವಕಾಶ ನೀಡಲೇಬೇಕೆಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಒತ್ತಾಯಿಸುತ್ತಾರೆ. ಆದರೆ, ಶನಿ ಸಿಂಗಾಪುರದ ಮಾದರಿಯಲ್ಲಿಯೇ ಶಬರಿಮಲೆ ದೇವಾಲಯಕ್ಕೂ ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ಸುಪ್ರೀಂ ಕೋರ್ಟ್ ಆದೇಶವನ್ನು ಇದೇ ಬಿಜೆಪಿ ವಿರೋಧಿಸುವ ಮೂಲಕ ಕೊಳಕು ರಾಜಕಾರಣ ಮಾಡಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ಎಸ್.ವಿಮಲಾ ಮಾತನಾಡಿ, ಶಬರಿಮಲೆಯ ಅಯ್ಯಪ್ಪ ಸ್ವಾಮಿ ನೈತಿಕ ಬ್ರಹ್ಮಚಾರಿ ಎಂಬುದಾಗಿ ಬಿಂಬಿಸಿ 10 ರಿಂದ 50 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಪ್ರವೇಶಕ್ಕೆ ನೀಡಬಾರದು ಎನ್ನಲಾಗುತ್ತಿದೆ. ಈ ವಯಸ್ಸಿನ ವಯೋಮಾನದವರು ದೇವಾಲಯ ಪ್ರವೇಶಿಸಿದರೆ ದೇವರು ವಿಚಲಿತನಾಗುತ್ತಾನೆ ಎನ್ನುವುದಾದರೆ, ಇಂದು 3 ವರ್ಷದ ಮಗುವಿನಿಂದ 80 ವರ್ಷದ ಅಜ್ಜಿಯವರೆಗೆ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿರುವ ಬಗ್ಗೆ ಇವರ ನಿಲುವೇನು, ಮಹಿಳೆಯರು ಹೊರಗೆ ಹೋಗಲೇಬಾರದೇ ಎಂದು ಪ್ರಶ್ನಿಸಿದರು.

ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶದಿಂದ ಭಂಗವಾಗಿದೆ ಎಂದು ಆರೋಪಿಸಿರುವ ಪಂದಳ ರಾಜವಂಶಸ್ಥರು, ರಾಜಮನೆತನದ ಆಭರಣಗಳನ್ನು ನೀಡುವುದಿಲ್ಲವೆಂದು ಸರಕಾರಕ್ಕೆ ಹೇಳಿದ್ದಾರೆ. ಆದರೆ, ಹಿಂದೆ ರಾಜ ಪುತ್ರನಿಗೆ ದೇವಾಲಯದಲ್ಲಿ ಅನ್ನಪ್ರಾಸನ ಮಾಡಿದ್ದು, ಮಗುವನ್ನು ತಾಯಿಯ ತೊಡೆಯ ಮೇಲೆ ಕೂರಿಸಿಕೊಂಡಿದ್ದು, ಆಕೆಯೂ ಹೆಣ್ಣು ಎಂಬುದನ್ನು ಬಹುಶಃ ಪಂದಳ ರಾಜ ವಂಶಸ್ಥರು ಮರೆತಿರಬೇಕು ಎಂದು ಲೇವಡಿ ಮಾಡಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ಗೌರಮ್ಮ, ದಲಿತ ಹಕ್ಕುಗಳ ಸಮಿತಿ ರಾಜಾಜಿನಗರ ವಲಯ ಸಂಚಾಲಕ ಎಚ್.ಜಿ.ನಾಗಣ್ಣ, ರಾಜ್ಯ ಸಹ ಸಂಚಾಲಕ ಎನ್.ರಾಜಣ್ಣ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News