×
Ad

ಕೊಡಗು ಜಿ.ಪಂ ಬಿಜೆಪಿ ಸದಸ್ಯೆ ಕವಿತಾ ಪ್ರಭಾಕರ್ ಸದಸ್ಯತ್ವ ಅನರ್ಹ: ನ್ಯಾಯಾಲಯದಿಂದ ಮಹತ್ವದ ತೀರ್ಪು

Update: 2018-12-04 19:20 IST
ಕವಿತಾ ಪ್ರಭಾಕರ್

ಮಡಿಕೇರಿ, ಡಿ.4: ಕೊಡಗು ಜಿಲ್ಲಾ ಪಂಚಾಯತ್ ನ ಭಾಗಮಂಡಲದ ಕ್ಷೇತ್ರದ ಚುನಾಯಿತ ಪ್ರತಿನಿಧಿ ಬಿಜೆಪಿಯ ಕವಿತಾ ಪ್ರಭಾಕರ್ ಗೆಲುವನ್ನು ಅಸಿಂಧು ಎಂದು ಘೋಷಿಸಿ ಮಡಿಕೇರಿ ಹಿರಿಯ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿದೆ. ಕವಿತಾ ಪ್ರಭಾಕರ್ ಅವರ ಪ್ರತಿಸ್ಪರ್ಧಿಯಾಗಿ ಪರಾಭವಗೊಂಡಿದ್ದ ದೇವಂಗೋಡಿ ತಿಲಕ ಸುಬ್ರಾಯ ಅವರನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸಿ ನ್ಯಾಯಾಲಯ ತೀರ್ಪು ನೀಡಿದೆ. 

ಭಾಗಮಂಡಲ ಮಹಿಳಾ ಮೀಸಲಾತಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಕವಿತಾ ಪ್ರಭಾಕರ್ ಮತ್ತು ಕಾಂಗ್ರೆಸ್ ನಿಂದ ದೇವಂಗೋಡಿ ತಿಲಕಾ ಸುಬ್ರಾಯ ಅವರು ಸ್ಪರ್ಧಿಸಿದ್ದರು. 2016ರ ಫೆಬ್ರವರಿ 20ರಂದು ನಡೆದ ಜಿ.ಪಂ ಚುನಾವಣೆಯಲ್ಲಿ ಬಿಜೆಪಿಯ ಕವಿತಾ ಪ್ರಭಾಕರ್ ಗೆಲುವು ಸಾಧಿಸಿದ್ದರು. ಚುನಾವಣೆಯಲ್ಲಿ ಪರಾಭವಗೊಂಡ ಕಾಂಗ್ರೆಸ್ ಅಭ್ಯರ್ಥಿ ದೇವಂಗೋಡಿ ತಿಲಕ ಸುಬ್ರಾಯ, ಕವಿತಾ ಪ್ರಭಾಕರ್ ಅವರ ಗೆಲುವನ್ನು ಪ್ರಶ್ನಿಸಿ ವಕೀಲ ಎಂ.ಎ.ನಿರಂಜನ್ ಅವರ ಮೂಲಕ ಮಡಿಕೇರಿಯ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಮಾರ್ಚ್ ತಿಂಗಳಲ್ಲಿ ಚುನಾವಣೆ ತಕರಾರು ಅರ್ಜಿ ಸಲ್ಲಿಸಿದ್ದರು.

ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್ ರಾಜ್ ಕಾಯಿದೆಯ ಕಲಂ 167(ಹೆಚ್)ನ ಅನ್ವಯ ಯಾವುದೇ ಪಂಚಾಯತ್ ಸದಸ್ಯರಿಗೆ ಪಂಚಾಯತ್ ಕಾಮಗಾರಿಗಳಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಯಾವುದೇ ಹಿತಾಸಕ್ತಿಗಳಿರಬಾರದು. ಆದರೆ, ಕವಿತಾ ಪ್ರಭಾಕರ್ ಅವರ ಪತಿ ಪ್ರಭಾಕರ್ ಎಂಬವರು ಜಿ.ಪಂ. ಗುತ್ತಿಗೆದಾರರಾಗಿದ್ದು, ಪಂಚಾಯತ್ ಕಾಮಗಾರಿಗಳನ್ನು ನಡೆಸಿದ್ದರು. ಮಾತ್ರವಲ್ಲದೇ, ಚುನಾವಣೆ ನಡೆದ ಬಳಿಕ ಪ್ರಭಾಕರ್ ಅವರಿಗೆ ಪಂಚಾಯತ್ ನಿಂದ ಹಣ ಬಿಡುಗಡೆಯಾಗಿರುವ ಬಗ್ಗೆ ವಕೀಲ ನಿರಂಜನ್ ನ್ಯಾಯಾಲಯದ ಗಮನ ಸೆಳೆದಿದ್ದರು. 

ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್ ರಾಜ್ ಕಾಯಿದೆ ಉಲ್ಲಂಘಿಸಿರುವುದನ್ನು ಪ್ರಮುಖ ಸಾಕ್ಷಿಯನ್ನಾಗಿಸಿ ಅರ್ಜಿದಾರರ ಪರ ವಕೀಲ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ವಾದ-ಪ್ರತಿವಾದ ಮತ್ತು ಸಾಕ್ಷಿಗಳನ್ನು ಪರಿಗಣಿಸಿದ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯ್ ಕುಮಾರ್ ಬಿಜೆಪಿಯ ಕವಿತಾ ಪ್ರಭಾಕರ್ ಅವರ ಗೆಲುವನ್ನು ಅಸಿಂಧು ಎಂದು ಘೋಷಿಸಿ ತೀರ್ಪು ನೀಡಿದ್ದಲ್ಲದೇ, ಚುನಾವಣೆಯಲ್ಲಿ ಪರಾಭವಗೊಂಡಿದ್ದ ತಿಲಕ ಸುಬ್ರಾಯ ಅವರನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸಿ ಆದೇಶ ಹೊರಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News