×
Ad

ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಿ: ಸಚಿವ ಕೃಷ್ಣ ಬೈರೇಗೌಡ

Update: 2018-12-04 19:44 IST

ಚಿಕ್ಕಬಳ್ಳಾಪುರ,ಡಿ.4: ಜಿಲ್ಲೆಯಲ್ಲಿ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಮುನ್ನವೇ, ಕುಡಿಯುವ ನೀರು ಅಗತ್ಯತೆ ಕುರಿತು ಪ್ರತಿ ಗ್ರಾಮದೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಹಾಗೂ ಕುಡಿಯುವ ನೀರು ಸಮಸ್ಯೆ ಎದುರಾಗುತ್ತಿದ್ದಂತೆ, ಮೊದಲಿಗೆ ಎರಡು ದಿನಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳು ಹಾಗೂ ಎಲ್ಲಾ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದರು. 

ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಎದುರಾಗುವ ಮುನ್ನವೇ ಅಧಿಕಾರಿಗಳು ಜಾಗೃತಿ ವಹಿಸಬೇಕು. ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಅರಿವಿಗೆ ಬರುತ್ತಿದ್ದಂತೆ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು, ಎರಡು ದಿನಗಳೊಳಗಾಗಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕು. ಇದರಲ್ಲಿ ಯಾವುದೇ ವಿಳಂಬಕ್ಕೆ ಅವಕಾಶ ನೀಡಬಾರದು ಎಂದರು.

ರಾಜ್ಯಕ್ಕೆ ಕುಡಿಯುವ ನೀರಿಗಾಗಿ 1700 ಕೋಟಿ ನಿಗದಿಪಡಿಸಲಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಗೆ 32 ಕೋಟಿ ನಿಗದಿಪಡಿಸಲಾಗಿದೆ. ಅಧಿಕಾರಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಕುಡಿಯುವ ನೀರು ಹೆಚ್ಚಿನ ಮಟ್ಟದಲ್ಲಿ ಅಭಾವವಾಗುತ್ತಿದ್ದಂತೆ ಟಾಸ್ಕೋರ್ಸ್ ಸಮಿತಿ ಗಮನಕ್ಕೆ ತಂದು ಕೊಳವೆ ಬಾವಿ ಕೊರೆಸಬೇಕು. ಆದಷ್ಟು ಟಾಸ್ಕ್ ಪೋರ್ಸ್ ಹಣವನ್ನು ಕೊಳವೆ ಬಾವಿಗಳನ್ನು ಕೊರೆಸಲು ಬಳಕೆ ಮಾಡಿಕೊಳ್ಳಿ ಎಂದ ಅವರು ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿ ತಹಸೀಲ್ದಾರ್ ಗಳಿಗೆ ಬಿಲ್ಲುಗಳನ್ನು ನೀಡಬೇಕು ಹಾಗೂ 15 ದಿನಗಳೊಳಗಾಗಿ ಬಾಡಿಗೆಗಳನ್ನು ಪಾವತಿ ಮಾಡಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಪ್ರಮುಖವಾಗಿ ಗ್ರಾಮೀಣ ಭಾಗದ ಜನರಲ್ಲಿ ಸ್ವಚ್ಛತೆ ಅರಿವು ಮೂಡಿಸಬೇಕಾಗಿದೆ. ತಾಲೂಕು ಪಂಚಾಯತ್ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಘನ ತ್ಯಾಜ್ಯ ವಿಂಗಡಣೆ ಕುರಿತು ಅರಿವು ಮೂಡಿಸಬೇಕು. ಗ್ರಾಮದ ಹತ್ತಿರದಲ್ಲಿ ಖಾಲಿ ಜಮೀನಿನಲ್ಲಿ ಹಳ್ಳ ಕೊರೆದು ಹಸಿ ತ್ಯಾಜ್ಯವನ್ನು ಅಲ್ಲಿ ಹಾಕಲು ಸೂಚಿಸಬೇಕು ಹಾಗೂ ಪ್ಲಾಸ್ಟಿಕ್, ಪೇಪರ್, ಗ್ಲಾಸ್, ಬಟ್ಟೆಯಂತಹ ತ್ಯಾಜ್ಯಗಳನ್ನು ಸಂಗ್ರಹ ಮಾಡಿ ಪುನರ್ ಬಳಕೆ ಮಾಡಲು ಕ್ರಮ ಕೈಗೊಳ್ಳಬೇಕು. ಪ್ರಸ್ತುತ ದಿನಗಳಲ್ಲಿ ಯಾವುದೇ ಜಮೀನು ಮತ್ತು ಗ್ರಾಮಗಳಿಗೆ ಭೇಟಿ ನೀಡುವ ವೇಳೆ ಪ್ಲಾಸ್ಟಿಕ್, ಗಾಜಿನ ಚೂರುಗಳು ಮತ್ತು ಬಟ್ಟೆ ತುಂಡುಗಳು ಕಂಡು ಬರುತ್ತದೆ. ಇದರಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದೆ. ಹಾಗಾಗಿ, ಈ ಕುರಿತು ಅಧಿಕಾರಿಗಳು ಜಾಗೃತಿಯಿಂದ ಯೋಜನೆ ರೂಪಿಸಿ ಪರಿಸರ ಸಂರಕ್ಷಣೆಯ ಜೊತೆಗೆ ಸ್ವಚ್ಛತೆಯನ್ನು ಕಾಪಾಡಿ ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ಉದ್ಯೋಗ ಖಾತ್ರಿಯಡಿ ಐದು ಕೋಟಿ ಮೂರು ಲಕ್ಷ ಮಾನವ ದಿನಗಳನ್ನು ಸೃಷ್ಟಿ ಮಾಡಲಾಗಿದೆ. ಅದರಂತೆ ಮುಂದಿನ ದಿನಗಳಲ್ಲಿ 10 ಲಕ್ಷ ಮಾನವ ದಿನಗಳನ್ನು ಸೃಷ್ಟಿ ಮಾಡುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 14 ಲಕ್ಷ ಮಾನವ ದಿನಗಳನ್ನು ಸೃಷ್ಟಿ ಮಾಡಲಾಗಿದ್ದು, ಸುಮಾರು 30 ಲಕ್ಷ ಮಾನವ ದಿನಗಳನ್ನು ಸೃಷ್ಟಿ ಮಾಡಲು ಸೂಚನೆ ನೀಡಲಾಗಿದೆ ಎಂದ ಅವರು, ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ರೈತರಿಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ. ಮಾಹಿತಿ ದೊರೆಯದೆ ಅನೇಕ ರೈತರು ಸರ್ಕಾರದ ಅನುದಾನವನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ್ಲ ಎಂದರು. 

ಕೃಷಿ, ತೋಟಗಾರಿಕೆ, ಪಶುಪಾಲನಾ, ರೇಷ್ಮೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ತಮ್ಮ ವ್ಯಾಪ್ತಿಗೆ ಬರುವ ಗ್ರಾಮೀಣಾಭಿವೃದ್ಧಿ ಯೋಜನೆಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು. ಸಭೆಯ ನಂತರ ನೂರು ದಿನಗಳನ್ನು ಪೂರೈಸಿದ ದಿನಗೂಲಿ ಕಾರ್ಮಿಕರನ್ನು ಮಾನ್ಯ ಸಚಿವರಾದ ಕೃಷ್ಣ ಬೈರೇಗೌಡರು ಮತ್ತು ಕೃಷಿ ಸಚಿವರು ಎನ್.ಹೆಚ್.ಶಿವಶಂಕರರೆಡ್ಡಿ ಅವರು ಸನ್ಮಾನಿಸಿದರು. ತದನಂತರ ಜಿಲ್ಲಾ ಪಂಚಾಯತ್ ವತಿಯಿಂದ ನರೇಗಾ ಯೋಜನೆಯಡಿ ರೈತರಿಗೆ ತಮ್ಮ ಜಮೀನುಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಕುರಿತು ಮುದ್ರಿಸಲಾದ ಕರಪತ್ರವನ್ನು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಶಾಸಕರುಗಳಾದ ಸುಬ್ಬಾರೆಡ್ಡಿ, ವಿ. ಮುನಿಯಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಹೆಚ್.ವಿ.ಮಂಜುನಾಥ್, ಉಪಾಧ್ಯಕ್ಷ ನಿರ್ಮಲಾ ಮುನಿರಾಜು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್, ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ಸಿ.ಇ.ಓ ಗುರುದತ್ತ ಹೆಗಡೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News