×
Ad

ಕೊಡಗು: ಪ್ರವಾದಿ ನಿಂದನೆ ಪ್ರಕರಣದ ದೂರುದಾರನಿಗೆ ಬೆದರಿಕೆ; ಬಜರಂಗದಳ ಮುಖಂಡನ ವಿರುದ್ಧ ಪ್ರಕರಣ ದಾಖಲು

Update: 2018-12-04 19:56 IST

ಕೊಡಗು, ಡಿ.4: ಪ್ರವಾದಿ ನಿಂದನೆ ಪ್ರಕರಣದಲ್ಲಿ ಸಂತೋಷ್ ತಮ್ಮಯ್ಯನ ವಿರುದ್ಧ ದೂರು ನೀಡಿದ ದೂರುದಾರನಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಬಜರಂಗದಳದ ದಕ್ಷಿಣ ಪ್ರಾಂತ್ಯ ಸಹ ಸಂಯೋಜಕ ರಘು ಸಕಲೇಶಪುರ ಎಂಬಾತನ ಮೇಲೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರು: ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಸಂಯುಕ್ತಾಶ್ರಯದಲ್ಲಿ ಡಿ.1 ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನಡೆದ ಜನಾಗ್ರಹ ಸಭೆಯಲ್ಲಿ ಮಾತನಾಡಿದ ಬಜರಂಗದಳದ ದಕ್ಷಿಣ ಪ್ರಾಂತ್ಯ ಸಹ ಸಂಯೋಜಕ ಸಕಲೇಶಪುರದ ರಘು ಎಂಬಾತ "ಸಂತೋಷ್ ತಮ್ಮಯ್ಯನ ವಿರುದ್ಧ ನೀಡಿದ ದೂರನ್ನು ಹಿಂಪಡೆದು ಕಾಲಿಗೆ ಬಿದ್ದು ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಅಸ್ಕರ್ ಗೆ ತಕ್ಕ ಉತ್ತರ ನೀಡಲಾಗುತ್ತದೆ” ಎಂಬುದಾಗಿ ತನಗೆ ಬೆದರಿಕೆ ಹಾಕಿದ್ದಾನೆ. ಈತನ ಈ ಬೆದರಿಕೆಯಿಂದಾಗಿ ತನ್ನ ಜೀವಕ್ಕೆ ಅಪಾಯ ಉಂಟಾಗುವ ಸಂಭವ ಇದೆ. ಇಂತಹ ಹೇಳಿಕೆಗಳಿಂದ ಸಂತೋಷ್ ತಮ್ಮಯ್ಯನ ವಿರುದ್ಧ ಸಾಕ್ಷಿ ಹೇಳಬೇಕಾದ ಸಾಕ್ಷಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಂಭವ ಇದೆ. ಆದುದರಿಂದ ಸಂತೋಷ್ ತಮ್ಮಯ್ಯನ ವಿರುದ್ಧ ನೀಡಿದ ದೂರನ್ನು ಹಿಂಪಡೆಯುವಂತೆ ಬೆದರಿಕೆ ಹಾಕಿದ ರಘು ಸಕಲೇಶಪುರ ವಿರುದ್ಧ ಕ್ರಮ ಜರುಗಿಸಬೇಕೆಂದು ಸಿದ್ದಾಪುರದ ಅಸ್ಕರ್ ಮಡಿಕೇರಿ ನಗರ ಠಾಣೆಗೆ ಡಿ.3 ರಂದು ದೂರು ನೀಡಿದ್ದರು. ಅದರಂತೆ ರಘು ಸಕಲೇಶಪುರ ಎಂಬಾತನ ವಿರುದ್ಧ ಡಿ.3 ರ ರಾತ್ರಿ ಮಡಿಕೇರಿ ನಗರ ಠಾಣೆಯಲ್ಲಿ 506 ಐಪಿಸಿ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಾಗಿದೆ.

ಸಂತೋಷ್ ತಮ್ಮಯ್ಯ ಪ್ರಕರಣ: ನ.5 ರಂದು ಟಿಪ್ಪು ಜಯಂತಿಯನ್ನು ವಿರೋಧಿಸಿ ಗೋಣಿಕೊಪ್ಪಲಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪತ್ರಕರ್ತ ಸಂತೋಷ್ ತಮ್ಮಯ್ಯ ಪ್ರವಾದಿಯನ್ನು ನಿಂದಿಸಿದ್ದಾರೆ ಎಂದು ನ.6 ರಂದು ಸಿದ್ದಾಪುರದ ಅಸ್ಕರ್ ಗೋಣಿಕೊಪ್ಪ ಠಾಣೆಯಲ್ಲಿ ದೂರು ನೀಡಿದ್ದರು. ಸಂತೋಷ್ ತಮ್ಮಯ್ಯ ಸೇರಿದಂತೆ 5 ಮಂದಿಯ ಮೇಲೆ (ಮೊ.ಸಂ 136\18) ಕಲಂ 295(ಎ) ಐಪಿಸಿ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಾಗಿತ್ತು. ನ.12 ರಂದು ಗೋಣಿಕೊಪ್ಪ ಪೊಲೀಸರು ತುಮಕೂರಿನಲ್ಲಿ ಸಂತೋಷ್ ತಮ್ಮಯ್ಯನನ್ನು ಬಂಧಿಸಿ ಪೊನ್ನಂಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ.13 ರಂದು ನ್ಯಾಯಾಲಯದ ಷರತ್ತು ಬದ್ದ ಜಾಮೀನಿನ ಮೇಲೆ ಆತ ಬಿಡುಗಡೆಗೊಂಡಿದ್ದಾನೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News