ಪಾಂಡವಪುರ ತಾ.ಪಂ. ಸದಸ್ಯನಿಗೆ ಕೊಲೆ ಬೆದರಿಕೆ ಆರೋಪ: ಆರೋಪಿಯ ಬಂಧನಕ್ಕೆ ಒತ್ತಾಯಿಸಿ ಧರಣಿ

Update: 2018-12-04 17:14 GMT

ಮಂಡ್ಯ, ಡಿ.4: ಪಾಂಡವಪುರ ತಾಲೂಕು ಕಟ್ಟೇರಿ ಮೀಸಲು ಕ್ಷೇತ್ರದ ತಾಲೂಕು ಪಂ. ಸದಸ್ಯ ಅಲ್ಪಹಳ್ಳಿ ಗೋವಿಂದಯ್ಯ ಅವರಿಗೆ ಅದೇ ಗ್ರಾಮದ ವ್ಯಕ್ತಿ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ದಲಿತ ಮುಖಂಡರು ಹಾಗೂ ಗ್ರಾಮಸ್ಥರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ ಸಲ್ಲಿಸಿದ ಧರಣಿ ನಡೆಸಿದ ಅವರು, ಅಲ್ಪಹಳ್ಳಿ ಗ್ರಾಮದ ಚಂದ್ರು ಎಂಬವರು ಗೋವಿಂದಯ್ಯ ಅವರಿಗೆ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.

ಕಳೆದ ನ.18 ರಂದು ಬೆಳಗ್ಗೆ ಗ್ರಾಮದಲ್ಲಿ ಹೋಗುತ್ತಿದ್ದ ಗೋವಿಂದಯ್ಯ ಅವರ ಮೇಲೆ ಚಂದ್ರು ಬೊಲೇರೋ ವಾಹನ ಹರಿಸಿ ಕೊಲೆಗೈಯ್ಯಲು ಯತ್ನಿಸಿದ್ದು, ಇದನ್ನು ಪ್ರಶ್ನಿಸಿದ ಗೋವಿಂದಯ್ಯ ಅವರಿಗೆ ಕೊಲೆ ಮಾಡದೇ ಬಿಡುವುದಿಲ್ಲವೆಂದು ಬೆದರಿಕೆ ಹಾಕಿದ್ದಾರೆ ಎಂದು ಅವರು ದೂರಿದರು. ಗೋವಿಂದಯ್ಯ ಅವರ ಭಾವಮೈದುನ ಮಂಜುನಾಥ್ ಮೇಲೆ ಚಂದ್ರು ಮತ್ತು ಅವರ ಸ್ನೇಹಿತರು ಮಾರಣಾಂತಿಕ ಹಲ್ಲೆ ನಡೆಸಿದ್ದು, ಈ ವಿಚಾರದಲ್ಲಿ ಮಂಜುನಾಥ್ ಅವರ ಸಹಾಯಕ್ಕೆ ಬಂದ ಗೋವಿಂದಯ್ಯ ಅವರ ಮೇಲೆ ಚಂದ್ರು ದ್ವೇಷ ಕಾರುತ್ತಿದ್ದಾರೆ ಎಂದು ಅವರು ಹೇಳಿದರು.

ಕೂಡಲೇ ಚಂದ್ರು ಅವರನ್ನು ಬಂಧಿಸಿ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಚಂದ್ರುವಿಗೆ ಪ್ರಚೋದನೆ ನೀಡುತ್ತಿರುವ ಗ್ರಾಮದ ಕುಮಾರ್, ಬಸವರಾಜು, ಲಕ್ಷ್ಮೇಗೌಡ ಅವರ ವಿರುದ್ಧವೂ ಕ್ರಮ ಜರುಗಿಸಬೇಕು. ಗೋವಿಂದಯ್ಯ ಅವರಿಗೆ ರಕ್ಷಣೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಎಂ.ಬಿ. ಶ್ರೀನಿವಾಸ್, ಕಣಿವೆಯೋಗೇಶ್, ವೆಂಕಟೇಶ್, ಚಂದ್ರು, ಮಹದೇವ, ಬೊಮ್ಮರಾಜು, ಶಿವಪ್ರಕಾಶ, ಮುದ್ದಪ್ಪ, ಹೊನ್ನಯ್ಯ, ಸ್ವಾಮಿಗೌಡ, ವೆಂಕಟೇಶ, ಶ್ರೀಕಂಠಪ್ಪ, ಅಶೋಕ, ಯೋಗೇಶ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News