ಮಂಡ್ಯದ ಮೂವರು ಅಂತರಾಷ್ಟ್ರೀಯ ಚೆಸ್ ರೇಟಿಂಗ್ ಪಟ್ಟಿಗೆ ಸೇರ್ಪಡೆ

Update: 2018-12-04 17:23 GMT

ಮಂಡ್ಯ, ಡಿ.4: ಮಂಡ್ಯ ಚೆಸ್ ಅಕಾಡೆಮಿಯ ಮೂವರು ಚೆಸ್ ಆಟಗಾರರಿಗೆ ಅಂತರಾಷ್ಟ್ರೀಯ ಚೆಸ್ ಸಂಸ್ಥೆ(ಫಿಡೆ) ಡಿ.1ರಂದು ಬಿಡುಗಡೆಗೊಳಿಸಿದ ಅಂತರಾಷ್ಟ್ರೀಯ ರೇಟಿಂಗ್ ಪಟ್ಟಿಯಲ್ಲಿ ಸ್ಥಾನ ದೊರಕಿದೆ ಎಂದು ಎಂದು ಅಕಾಡೆಮಿಯ ಎನ್.ಮಾಧುರಿ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಚೆಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಅಮನ್ ಜೈನ್‍ಗೆ(ಸ್ಯಾನ್ ಇಂಟರ್ ನ್ಯಾಷನಲ್ ಶಾಲೆ) 1094, ಎಂ.ಎಸ್. ಧನುಷ್‍ಗೆ(ಮಾಂಡವ್ಯ ಪಿಯು ಕಾಲೇಜು) 1144 ಹಾಗೂ ಯಶವಂತ್ ಭಾರಧ್ವಜ್‍ಗೆ(ಚಿನ್ಮಯ ವಿದ್ಯಾಲಯ) 1045 ರೇಟಿಂಗ್ ದೊರಕಿದೆ ಎಂಧರು.

ಈ ಮೂವರು ಆಟಗಾರರು ಹೈದರಾಬಾದ್‍ನಲ್ಲಿ ನ.10ರಿಂದ 12ರವರೆಗೆ ನಡೆದ 2ನೇ ಅಖಿಲ ಭಾರತ ರೇಟಿಂಗ್ ಪಂದ್ಯಾವಳಿಯಲ್ಲಿ ರೇಟಿಂಗ್ ಗಳಿಸಿದ್ದಾರೆ. ಇದರೊಂದಿಗೆ ಮಂಡ್ಯ ಚೆಸ್ ಅಕಾಡೆಮಿಯು ರಾಜ್ಯದಲ್ಲಿ ಅತಿ ಹೆಚ್ಚು 48 ಅಂತರಾಷ್ಟ್ರೀಯ ರೇಟಿಂಗ್ ಆಟಗಾರರನ್ನು ಹೊಂದಿದೆ ಎಂದು ಅವರು ಹೇಳಿದರು.

ಮಂಡ್ಯ ಚೆಸ್ ಅಕಾಡೆಮಿಯು 20 ಬಡ ಮಕ್ಕಳಿಗೆ ಉಚಿತವಾಗಿ ಚೆಸ್ ತರಬೇತಿ ನೀಡುತ್ತಿದೆ. ಜಿಲ್ಲೆಯ ಮೂರು ಶಾಲೆಗಳಲ್ಲಿ ಅತಿ ಕಡಿಮೆ ದರದಲ್ಲಿ ವಿದ್ಯಾರ್ಥಿಗಳಿಗೆ ಚೆಸ್ ತರಬೇತಿ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಚೆಸ್ ಆಟದ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯಕ್ರಮ ರೂಪಿಸಲಿದೆ ಎಂದು ಅವರು ತಿಳಿಸಿದರು.

ಚೆಸ್ ಆಟ ಆಡುವುದರಿಂದ ಮಕ್ಕಳಲ್ಲಿ ಬುದ್ಧಿಶಕ್ತಿ ಹೆಚ್ಚುವುದರ ಜೊತೆಗೆ ಕಲಿಕೆಯಲ್ಲೂ ಆಸಕ್ತಿ ಮೂಡುತ್ತದೆ. ಅಂತರಾಷ್ಟ್ರೀಯ ರೇಟಿಂಗ್ ಪಡೆಯಲು ಪ್ರತಿನಿತ್ಯ 5ರಿಂದ 10 ಗಂಟೆ ಅಭ್ಯಾಸ ಅವಶ್ಯಕವಾಗಿದ್ದು, ಚೆಸ್ ಅಕಾಡೆಮಿ ಸೂಕ್ತ ತರಬೇತಿ ನೀಡುತ್ತಿದೆ ಎಂದು ಅವರು ಹೇಳಿದರು.

ಅಂತರಾಷ್ಟ್ರೀಯ ಚೆಸ್ ರೇಟಿಂಗ್ ಪಡೆದ ಆಟಗಾರರಾದ ಅಮನ್ ಜೈನ್, ಎಂ.ಎಸ್.ಧನುಷ್ ಹಾಗೂ ಯಶವಂತ್ ಭಾರಧ್ವಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News