ಶಿಲಾಯುಗದ ವೈಭವಕ್ಕೆ ಮರಳಿದ ಉತ್ತರ ಪ್ರದೇಶ

Update: 2018-12-05 07:55 GMT

 ಪ್ರಾಚೀನ ವೈಭವಕ್ಕೆ ಈ ದೇಶವನ್ನು ಕೊಂಡೊಯ್ಯುವಲ್ಲಿ ಮೋದಿ ಸರಕಾರ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಭಾಗಶಃ ಯಶಸ್ವಿಯಾದಂತಿದೆ. ಭಾರತ ಮತ್ತೆ ಶಿಲಾಯುಗಕ್ಕೆ ಕಾಲಿಟ್ಟಿದೆ. ಉತ್ತರ ಪ್ರದೇಶದಲ್ಲಿ ಪೊಲೀಸ್ ಅಧಿಕಾರಿಯನ್ನೇ ಸಾರ್ವಜನಿಕವಾಗಿ ಥಳಿಸಿ ಕೊಂದು ಹಾಕಿದ ಪ್ರಕರಣ ಇದನ್ನು ವಿಶ್ವಕ್ಕೆ ಸಾಬೀತು ಪಡಿಸಿದೆ. ಈವರೆಗೆ ಗುಂಪು ಹಲ್ಲೆಗಳು ಶ್ರೀಸಾಮಾನ್ಯರನ್ನು ಗುರಿ ಮಾಡಿತ್ತು. ಗೋರಕ್ಷಣೆ, ಮಕ್ಕಳ ಸಾಗಣೆ ಎಂಬಿತ್ಯಾದಿ ನೆಪದಲ್ಲಿ ಅಮಾಯಕರನ್ನು ಗುಂಪುಗಳು ಥಳಿಸಿ ಕೊಲ್ಲುತ್ತಿದ್ದರೆ ಅದನ್ನು ಪೊಲೀಸ್ ಇಲಾಖೆ ಮೂಕವಾಗಿ ನೋಡುತ್ತಿತ್ತು. ಇದೀಗ ಈ ಶಿಲಾಮಾನವರು ಪೊಲೀಸ್ ಅಧಿಕಾರಿಗಳನ್ನೇ ಸಾರ್ವಜನಿಕವಾಗಿ ಥಳಿಸಿ ಕೊಂದು ಹಾಕಲು ಶುರು ಹಚ್ಚಿದ್ದಾರೆ. ಕಾನೂನು ಪಾಲಕರೇ ಈ ಶಿಲಾಮಾನವರಿಂದ ತಮ್ಮ ಜೀವ ರಕ್ಷಿಸಿಕೊಳ್ಳಲು ಅಸಮರ್ಥರಾದ ಮೇಲೆ, ಶ್ರೀಸಾಮಾನ್ಯರ ಪಾಡೇನು? ಮುಂದಿನ ದಿನಗಳಲ್ಲಿ ಶ್ರೀಸಾಮಾನ್ಯರು ತಮ್ಮ ದೂರನ್ನು ಯಾರ ಬಳಿ ಕೊಂಡೊಯ್ಯಬೇಕು ಎನ್ನುವ ಪ್ರಶ್ನೆ ಮೃತ ಪೊಲೀಸ್ ಅಧಿಕಾರಿ ಸುಬೋಧ್ ಸಿಂಗ್ ಅವರ ಮೃತದೇಹದ ಜೊತೆಯಲ್ಲಿ ಉತ್ತರವಿಲ್ಲದೆ ಕೊಳೆಯ ತೊಡಗಿದೆ. ರಾಜಸ್ಥಾನ, ಉತ್ತರ ಪ್ರದೇಶ, ಗುಜರಾತ್ ಇಲ್ಲೆಲ್ಲ ಗುಂಪುಗಳು ಸಂಸ್ಕೃತಿ ರಕ್ಷಕರ ವೇಷದಲ್ಲಿ ಹಲ್ಲೆಗಿಳಿಯುತ್ತಿದ್ದರೆ, ಅವರೊಂದಿಗೆ ಪೊಲೀಸ್ ಇಲಾಖೆ ಮೌನವಾಗಿ ಸಹಕರಿಸುತ್ತಿತ್ತು. ಈ ಗೂಂಡಾಗಳ ಬೆನ್ನಿಗೆ ರಾಜಕೀಯ ಶಕ್ತಿಗಳ ಅಭಯ ಇದ್ದುದರಿಂದ ಪ್ರಕರಣ ದಾಖಲಿಸಲು ಹಿಂಜರಿಯುತ್ತಿತ್ತು. ಒಂದು ವೇಳೆ ಪ್ರಕರಣ ದಾಖಲಿಸಿದರೂ, ಅದು ತೀರಾ ದುರ್ಬಲವಾಗಿರುವಂತೆ ಪೊಲೀಸ್ ಇಲಾಖೆ ನೋಡಿಕೊಳ್ಳುತ್ತಿತ್ತು. ಸುಬೋಧ್ ಸಿಂಗ್ ಅವರ ಬರ್ಬರ ಹತ್ಯೆಯಿಂದ ಸಂಘಪರಿವಾರದ ಗೂಂಡಾಗಳು ಪೊಲೀಸ್ ಇಲಾಖೆಗೆ ಇನ್ನೊಂದು ಎಚ್ಚರಿಕೆಯನ್ನು ನೀಡಿದ್ದಾರೆ. ತಾನು ನಡೆಸಿದ ಗುಂಪು ಹತ್ಯೆ, ಥಳಿತ ಇತ್ಯಾದಿಗಳನ್ನು ತನಿಖೆ ನಡೆಸಿ ನಮ್ಮ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡಲ್ಲಿ, ಪೊಲೀಸರನ್ನೂ ಸಾರ್ವಜನಿಕವಾಗಿ ಥಳಿಸಿ ಕೊಲ್ಲುತ್ತೇವೆ ಎನ್ನುವ ಸಂದೇಶವದು. ಪೊಲೀಸ್ ಅಧಿಕಾರಿಯನ್ನು ಕೊಂದವರ ನೇತೃತ್ವವನ್ನು ಬಜರಂಗದಳ, ವಿಎಚ್‌ಪಿಯ ಮುಖಂಡರು ವಹಿಸಿರುವುದು, ಬಿಜೆಪಿಯ ನಾಯಕರೂ ಶಾಮೀಲಾಗಿರುವುದು ಈಗಾಗಲೇ ಬೆಳಕಿಗೆ ಬಂದಿದೆ. ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬನನ್ನು ಥಳಿಸಿಕೊಲ್ಲುವುದೆಂದರೆ, ಒಂದು ಸರಕಾರಕ್ಕೆ ನೇರವಾಗಿ ಬೆದರಿಕೆಯೊಡ್ಡುವುದು ಮತ್ತು ದೇಶದ ಸಾಂವಿಧಾನಿಕ ವ್ಯವಸ್ಥೆಗೆ ಸವಾಲು ಹಾಕುವುದೆಂದು ಅರ್ಥ. ದುರದೃಷ್ಟಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲಿ, ದೇಶದ ಪ್ರಧಾನಿಯಾಗಲಿ ಘಟನೆಯ ಕುರಿತಂತೆ ತುಟಿ ಬಿಚ್ಚಿಲ್ಲ. ಬದಲಿಗೆ ಉತ್ತರ ಪ್ರದೇಶದ ಬಿಜೆಪಿ ಶಾಸಕನೊಬ್ಬ ‘‘ಪೊಲೀಸ್ ಅಧಿಕಾರಿಯನ್ನು ಸಾರ್ವಜನಿಕರು ಕೊಂದಿಲ್ಲ, ಪೊಲೀಸ್ ಗೋಲಿಬಾರ್‌ಗೆ ಅವರು ಬಲಿಯಾಗಿದ್ದಾರೆ’’ ಎಂಬ ಮಾತುಗಳನ್ನಾಡಿ ಕೊಲೆಗಾರರನ್ನು ಬಹಿರಂಗವಾಗಿಯೇ ರಕ್ಷಿಸಲು ನೋಡುತ್ತಿದ್ದಾರೆ. ಅಂದರೆ ಪರೋಕ್ಷವಾಗಿ ಉತ್ತರ ಪ್ರದೇಶ ಸರಕಾರವೇ ಮುಂದೆ ನಿಂತು ಈ ಬರ್ಬರ ಹತ್ಯೆಯನ್ನು ನಡೆಸಿದೆ ಎಂದೇ ಜನರು ಅನುಮಾನಪಡುವಂತಾಗಿದೆ. ಸುಬೋಧ್ ಸಿಂಗ್‌ರ ಹತ್ಯೆ ಮತ್ತು ಪೊಲೀಸ್ ಸಿಬ್ಬಂದಿಯ ಮೇಲಿನ ಗಂಭೀರ ಹಲ್ಲೆ ಪ್ರಕರಣ ಮೀರತ್‌ನ ಅಖ್ಲಾಕ್ ಅವರ ಬರ್ಬರ ಹತ್ಯೆಯನ್ನು ಮತ್ತೆ ನೆನಪಿಸಿದೆ. ಫ್ರಿಜ್‌ನಲ್ಲಿ ಗೋಮಾಂಸವಿದೆ ಎಂಬ ವದಂತಿಯನ್ನು ಹರಡಿ ಅಖ್ಲಾಕ್ ಎನ್ನುವ ವೃದ್ಧರನ್ನು ಗುಂಪು ಬರ್ಬರವಾಗಿ ಹಲ್ಲೆ ನಡೆಸಿ ಕೊಂದು ಹಾಕಿತು. ಸುಬೋಧ್ ಸಿಂಗ್ ಅಖ್ಲಾಕ್ ಪ್ರಕರಣದ ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಈ ಸಂಬಂಧ ಹಲವು ರಾಜಕೀಯ ಒತ್ತಡಗಳು ಅವರಿಗೆ ಎದುರಾಗಿದ್ದರೂ ಅದನ್ನು ಮೀರಿ ಅಖ್ಲಾಕ್ ಹತ್ಯೆ ಆರೋಪಿಗಳನ್ನು ಬಂಧಿಸಲು ಪ್ರಯತ್ನ ಪಟ್ಟಿದ್ದರು. ಅಷ್ಟೇ ಅಲ್ಲ, ಗೋವುಗಳನ್ನು ಮುಂದಿಟ್ಟು ರಾಜಕೀಯ ನಡೆಸುವವರ ಕುರಿತಂತೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಸಂಘಪರಿವಾರ ಕಾರ್ಯಕರ್ತರನ್ನು ಬಂಧಿಸುವ ಸಂದರ್ಭದಲ್ಲಿ ಅವರಿಗೆ ಸಾಕಷ್ಟು ಒತ್ತಡಗಳು, ಬೆದರಿಕೆಗಳು ಬಂದಿದ್ದವು. ಇದೀಗ ಅಖ್ಲಾಕ್‌ರನ್ನು ಕೊಂದು ಹಾಕಿದವರು, ಅದೇ ಮಾದರಿಯಲ್ಲಿ ಆ ಕೊಲೆ ತನಿಖೆ ನಡೆಸುತ್ತಿದ್ದ ಅಧಿಕಾರಿಯನ್ನೂ ಕೊಂದಿದ್ದಾರೆ.

 ಅಧಿಕಾರಿಯನ್ನು ಕೊಲ್ಲುವ ಮೊದಲು, ಸುಮಾರು 25 ದನಗಳ ಕಳೇಬರ ಪತ್ತೆಯಾಗಿದೆ ಎಂಬ ವದಂತಿಗಳನ್ನು ಹರಡಿದರು. ಬಳಿಕ, ಅಕ್ರಮ ಕಸಾಯಿಖಾನೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಬೀದಿಗಿಳಿದರು. ಆದರೆ ದನಗಳ ಕಳೇಬರ ಎಲ್ಲಿ ಪತ್ತೆಯಾಯಿತು? ಒಂದು ವೇಳೆ ಮಾಂಸಕ್ಕಾಗಿ ದನವನ್ನು ಕೊಂದಿದ್ದರೆ ಕಳೇಬರ ಪತ್ತೆಯಾಗುವುದು ಸಾಧ್ಯವೇ? ಕಸಾಯಿಖಾನೆಗಳಲ್ಲಿ ಅದರ ಎಲುಬು, ಚರ್ಮಗಳನ್ನು ಉದ್ಯಮಕ್ಕೆ ಬಳಸುತ್ತಾರೆ. ಹೀಗಿರುವಾಗ, ಕಳೇಬರ ಪತ್ತೆಯಾಗಿದ್ದರೂ ಅದು ಗೋಶಾಲೆಗಳಲ್ಲಿ ಆಹಾರವಿಲ್ಲದ ಸತ್ತ ದನಗಳದ್ದಾಗಿರಬಹುದು ಅಥವಾ ಅಖ್ಲಾಕ್ ಹತ್ಯೆಯ ತನಿಖೆಯನ್ನು ಪ್ರಾಮಾಣಿಕವಾಗಿ ನಡೆಸಲು ಯತ್ನಿಸಿದ ಸುಬೋಧ್ ಸಿಂಗ್‌ರನ್ನು ಕೊಲ್ಲುವುದಕ್ಕಾಗಿಯೇ ಈ ವದಂತಿಯನ್ನು ಸೃಷ್ಟಿಸಿರುವ ಸಾಧ್ಯತೆಯಿದೆ. ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿ ಪೊಲೀಸ್ ಠಾಣೆಗೆ ಯಾಕೆ ದಾಳಿ ನಡೆಸಲಾಯಿತು? ಯಾವ ಕಾರಣಕ್ಕಾಗಿ ಸುಬೋಧ್‌ರನ್ನು ಥಳಿಸಿ ಕೊಂದು ಹಾಕಲಾಯಿತು? ಅವರೇನು ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದರೇ? ಇಷ್ಟಕ್ಕೂ ದನಗಳನ್ನು ಆಹಾರಕ್ಕಾಗಿ, ಉದ್ಯಮಕ್ಕಾಗಿ ಕೊಂದು ಮಾಂಸ ವ್ಯಾಪಾರ ಮಾಡುವ ಕಸಾಯಿಗಳಿಗಿಂತ ನೂರು ಪಟ್ಟು ಕ್ರೌರ್ಯವನ್ನು ಈ ಸಂಘಪರಿವಾರದ ಗೂಂಡಾಗಳು ಪ್ರದರ್ಶಿಸಿದ್ದಾರೆ. ಒಬ್ಬ ಪೊಲೀಸ್ ಅಧಿಕಾರಿಯನ್ನು ಸಾರ್ವಜನಿಕವಾಗಿ ಕೊಲ್ಲ ಬಲ್ಲವರು, ತಮ್ಮ ಉದ್ದೇಶ ಸಾಧಿಸಲು ಗೋವುಗಳನ್ನು ತಾವೇ ಕೊಂದು ಸಾರ್ವಜನಿಕವಾಗಿ ಎಸೆಯಬಲ್ಲರು. ಉತ್ತರ ಪ್ರದೇಶದ ಘಟನೆ ಆ ರಾಜ್ಯ ‘ಜಂಗಲ್ ರಾಜ್ಯ’ವಾಗಿ ಬದಲಾಗಿರುವುದನ್ನು ಅಧಿಕೃತವಾಗಿ ಘೋಷಿಸಿದೆ. ಹಲವು ಕ್ರಿಮಿನಲ್ ಮೊಕದ್ದಮೆಗಳನ್ನು ಮೈಮೇಲೆ ಧರಿಸಿಕೊಂಡಿರುವ ಯೋಗಿಯ ವೇಷದಲ್ಲಿರುವ ರಾಜಕಾರಣಿಯ ಕೈಗೆ ರಾಜ್ಯವನ್ನು ಕೊಟ್ಟರೆ ಏನಾಗಬಹುದೋ ಅದೇ ಉತ್ತರ ಪ್ರದೇಶದಲ್ಲಿ ಸಂಭವಿಸುತ್ತಿದೆ. ಸದ್ಯಕ್ಕೆ ಉತ್ತರ ಪ್ರದೇಶದ ಸರಕಾರವನ್ನು ವಜಾಗೊಳಿಸಿ ಅಲ್ಲಿ ರಾಷ್ಟ್ರಪತಿ ಆಡಳಿತ ಹೇರುವುದು ದೇಶದ ಹಿತದೃಷ್ಟಿಯಿಂದ ಅತ್ಯಗತ್ಯವಾಗಿದೆ. ಆದರೆ ದುರದೃಷ್ಟಕ್ಕೆ ಇಂತಹದೊಂದು ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಾದ ರಾಷ್ಟ್ರಪತಿಯವರೇ ಸಂಘಪರಿವಾರದ ಕೈಗೊಂಬೆಯಾಗಿದ್ದಾರೆ. ದುಷ್ಕರ್ಮಿಗಳು ಕೊಂದು ಹಾಕಿರುವುದು ಒಬ್ಬ ಹಿಂದೂ ಧರ್ಮಕ್ಕೆ ಸೇರಿದ ಪೊಲೀಸ್ ಅಧಿಕಾರಿಯನ್ನು ಎನ್ನುವ ಕಾರಣಕ್ಕಾಗಿಯಾದರೂ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿಯಬೇಕಾಗಿದೆ. ಹಾಗೆಯೇ ಖಾವಿಯ ವೇಷದಲ್ಲಿರುವ ಕ್ರಿಮಿನಲ್ ಆರೋಪಿಯೊಬ್ಬನ ಕೈಯಿಂದ ಉತ್ತರ ಪ್ರದೇಶವನ್ನು ರಕ್ಷಿಸುವ ಧೈರ್ಯವನ್ನು ರಾಷ್ಟ್ರಪತಿಯವರು ಪ್ರದರ್ಶಿಸಲೇ ಬೇಕಾದ ಸಂದರ್ಭ ಅವರ ಎದುರಿಗೆ ಬಂದು ನಿಂತಿದೆ. ದೇಶ-ಸಂಘಪರಿವಾರ ಎರಡರಲ್ಲಿ ಒಂದನ್ನು ರಾಷ್ಟ್ರಪತಿ ಆಯ್ಕೆ ಮಾಡಿಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News