ಮೃತ ಮಹಿಳೆಯ ಭ್ರೂಣ ಕಸಿಯಿಂದ ಹುಟ್ಟಿದ ವಿಶ್ವದ ಮೊದಲ ಮಗು

Update: 2018-12-05 03:59 GMT

ಲಂಡನ್, ಡಿ. 5: ಮೃತ ಮಹಿಳೆಯೊಬ್ಬರ ಭ್ರೂಣ ದಾನ ಪಡೆದ ಬ್ರೆಝಿಲ್ ಮಹಿಳೆಯೊಬ್ಬರು ಯಶಸ್ವಿ ಕಸಿ ಬಳಿಕ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದು ಈ ವಿಧಾನದಲ್ಲಿ ಹುಟ್ಟಿದ ವಿಶ್ವದ ಮೊಟ್ಟಮೊದಲ ಮಗು ಎಂದು ವೈದ್ಯರು ಹೇಳಿದ್ದಾರೆ.

ವೈದ್ಯಕೀಯ ನಿಯತಕಾಲಿಕ ಲ್ಯಾನ್ಸೆಟ್ ಮೆಡಿಕಲ್ ಜರ್ನಲ್‌ನಲ್ಲಿ ಈ ಪ್ರಕರಣ ವರದಿಯಾಗಿದ್ದು, ಈ ವಿಧಾನದಲ್ಲಿ ದಾನಿ ಮಹಿಳೆಯ ಗರ್ಭಾಶಯ, ನಾಡಿ, ಅಸ್ಥಿರಜ್ಜು ಮತ್ತು ಯೋನಿನಾಳದ ರಕ್ತನಾಳಗಳನ್ನು ದಾನ ಪಡೆಯುವ ಮಹಿಳೆಯ ಆಯಾ ಅಂಗಾಂಗಗಳಿಗೆ ಜೋಡಿಸಲಾಗುತ್ತದೆ.

ಅಮೆರಿಕ, ಜೆಕ್ ಗಣರಾಜ್ಯ ಮತ್ತು ಟರ್ಕಿಯಲ್ಲಿ ಹೀಗೆ ಮೃತ ಮಹಿಳೆಯ ಭ್ರೂಣವನ್ನು ಆರೋಗ್ಯವಂತ ಮಹಿಳೆಗೆ ಕಸಿ ಮಾಡುವ ಮೂಲಕ ಮಗು ಪಡೆಯಲು ಈ ಹಿಂದೆ ನಡೆಸಿದ 10 ಪ್ರಯತ್ನಗಳು ವಿಫಲವಾದ ಬಳಿಕ ಈ ಪ್ರಯತ್ನದಲ್ಲಿ ವೈದ್ಯರು ಯಶಸ್ಸು ಕಂಡಿದ್ದಾರೆ. 35 ವಾರ ಮತ್ತು ಮೂರು ದಿನದ ಬಳಿಕ ಶಸ್ತ್ರಚಿಕಿತ್ಸೆ ಮೂಲಕ ಬ್ರೆಝಿಲಿಯನ್ ಮಹಿಳೆಗೆ ಹೆರಿಗೆ ಮಾಡಿಸಲಾಯಿತು. ಮಗು 2.250 ಕೆ.ಜಿ. ತೂಕವಿದೆ ಎಂದು ಲೇಖನ ವಿವರಿಸಿದೆ.

ಗರ್ಭಕೋಶ ಸಂಬಂಧಿ ಸಂತಾನಹೀನತೆಯಿಂದ ಬಳಲುವ ಮಹಿಳೆಯರಿಗೆ ಈ ನೂತನ ವಿಧಾನ ವರದಾನವಾಗಿದ್ದು, ದೊಡ್ಡ ಸಂಖ್ಯೆಯ ಸಂಭಾವ್ಯ ದಾನಿಗಳಿಂದ ಭ್ರೂಣ ಪಡೆದು ಕಸಿ ಮಾಡಬಹುದಾಗಿದೆ ಎಂದು ಈ ವೈದ್ಯಕೀಯ ವಿಧಾನವನ್ನು ಯಶಸ್ವಿಯಾಗಿ ನಿರ್ವಹಿಸಿದ ಸಾವೊ ಪೋಲೊ ವಿವಿ ಆಸ್ಪತ್ರೆಯ ವೈದ್ಯೆ ಡ್ಯಾನಿ ಎಝೆನ್‌ಬರ್ಗ್ ಹೇಳಿದ್ದಾರೆ.

2016ರ ಸೆಪ್ಟೆಂಬರ್‌ನಲ್ಲಿ ಈ ಯಶಸ್ವಿ ಕಸಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News