×
Ad

ದಾವಣಗೆರೆ: ವಿಧಾನ ಪರಿಷತ್ ಸದಸ್ಯ ರಘು ಆಚಾರ್ ವಿರುದ್ಧ ವಿವಿಧ ಸಂಘ-ಸಂಸ್ಥೆಗಳಿಂದ ಪ್ರತಿಭಟನೆ

Update: 2018-12-05 18:31 IST

ದಾವಣಗೆರೆ,ಡಿ.5: ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆಂದು ಆರೋಪಿಸಿ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ವಿರುದ್ಧ ವಿವಿಧ ಸಂಘ-ಸಂಸ್ಥೆಗಳು, ಶ್ರೀಮಠದ ಸದ್ಭಕ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. 

ನಗರದ ಗಾಂಧಿ ವೃತ್ತದಲ್ಲಿ ರಘು ಆಚಾರ್ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.  

ಈ ಸಂದರ್ಭ ಮಾತನಾಡಿದ ಕೂಡಲ ಸಂಗಮದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ, ಬೆಳಗಾವಿ ಅಧಿವೇಶನದಲ್ಲಿ ರಘು ಆಚಾರ್ ದುರ್ವರ್ತನೆ ಬಗ್ಗೆ ಚರ್ಚಿಸಿ, ವಿಪ ಸದಸ್ಯತ್ವದಿಂದ ಅನರ್ಹಗೊಳಿಸಲಿ. ಒಂದು ವೇಳೆ ಸರ್ಕಾರ ಅಧಿವೇಶನದ ಒಳಗಾಗಿ ಕ್ರಮ ಕೈಗೊಳ್ಳದಿದ್ದರೆ ನಾವೆಲ್ಲರೂ ಸುವರ್ಣ ಸೌಧಕ್ಕೆ ಬರಬೇಕಾಗುತ್ತದೆ. ಸಿರಿಗೆರೆ ಮಠದ ಭಕ್ತರಷ್ಟೇ ಅಲ್ಲ, ಪಂಚಮಸಾಲಿ ಸಮಾಜ, ಜಾಗತಿಕ ಲಿಂಗಾಯತ ಮಹಾಸಭಾ ಇಡೀ ರಾಜ್ಯಾದ್ಯಂತ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಸಿದ ಅವರು, ವಿಪ ಸಭಾಧ್ಯಕ್ಷರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಭಕ್ತಾದಿಗಳು ಸುವರ್ಣ ಸೌಧದತ್ತ ಹೊರಡಲು ಸಜ್ಜಾಗಬೇಕಾದೀತು. ಯಾವುದೇ ಪಕ್ಷದ ವಿರುದ್ಧದ ಹೋರಾಟವಲ್ಲ. ವ್ಯಕ್ತಿಯ ದುರ್ವರ್ತನೆ ವಿರುದ್ಧದ ಹೋರಾಟ ಇದು. ಇಂತಹ ವ್ಯಕ್ತಿಯನ್ನು ಪಕ್ಷದಿಂದಲೇ ಉಚ್ಛಾಟಿಸುವ ಕೆಲಸ ಪಕ್ಷದಿಂದ ಆಗಬೇಕಾಗಿದೆ. ಒಬ್ಬ ಮಠಾಧೀಶರ ಬಗ್ಗೆ ಹಗುರ ಮಾತನಾಡಿದ್ದನ್ನು ಇಡೀ ಸಮಾಜ, ಸಮಸ್ತ ಭಕ್ತಾದಿಗಳು ತೀವ್ರವಾಗಿ ಖಂಡಿಸುತ್ತೇವೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಿ ಎಂದರು. 

ಶಿವಸೈನ್ಯ ಯುವಕ ಸಂಘದ ಹೆಮ್ಮನಬೇತೂರು ಶಶಿಧರ್ ಮಾತನಾಡಿ, ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯರ ಬಗ್ಗೆ ವಿಪ ಸದಸ್ಯ ರಘು ಆಚಾರ್ ಹಗುರವಾಗಿ ಮಾತನಾಡಿ, ಶ್ರೀಗಳು ಪೀಠ ತ್ಯಾಗ ಮಾಡಿ, ಮಠ ಬಿಟ್ಟು ಹೊರಗೆ ಬರಲಿ ಎಂಬ ಉದ್ಧಟತನ ಹೇಳಿಕೆ ನೀಡಿದ್ದನ್ನು ಇಡೀ ಸಮಾಜ ಖಂಡಿಸುತ್ತದೆ. ಗುರುಗಳ ಬಗ್ಗೆ ಹಗುರವಾಗಿ ಮಾತನಾಡಿರುವ ರಘು ಆಚಾರ್ ಗುರುಗಳ ಘನತೆ, ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ. ಇದು ಕೇವಲ ತರಳಬಾಳು ಮಠ, ಮಠದ ಭಕ್ತರಿಗಷ್ಟೇ ಮಾಡಿದ ಅವಮಾನವಲ್ಲ. ಇಡೀ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಭಕ್ತ ವೃಂದಕ್ಕೆ, ಅಭಿಮಾನಿಗಳಿಗೆ ಮಾಡಿದ ಅವಮಾನ ಎಂದು ಆರೋಪಿಸಿದರು. 

ತಕ್ಷಣವೇ ರಘು ಆಚಾರ್ ಸಾರ್ವಜನಿಕವಾಗಿ ಕ್ಷಮೆಯಾಚಿಸಲೆಂದು ತಾಕೀತು ಮಾಡಿದ್ದರೂ ಇಲ್ಲಿವರೆಗೂ ಸ್ಪಂದಿಸಿಲ್ಲ.  ಸಾರ್ವಜನಿಕ ಕ್ಷಮೆ ಕೇಳುವಂತೆ ಸಿಎಂ ಕ್ರಮ ಕೈಗೊಳ್ಳಲಿ. ಈ ಬಗ್ಗೆ ಉದಾಸೀನ ಮಾಡಿದರೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಬೇಕಾದೀತು ಎಂದು ಎಚ್ಚರಿಸಿದರು. 

ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ. ಶಿವಕುಮಾರ ಮಾತನಾಡಿ, ರಘು ಆಚಾರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವವರೆಗೂ ರಾಜ್ಯಾದ್ಯಂತ ನಿರಂತರ ಹೋರಾಟ ನಡೆಸಲಿದ್ದು, ದಾವಣಗೆರೆಯಿಂದಲೇ ಹೋರಾಟ ಆರಂಭಗೊಂಡಿದೆ. ತಕ್ಷಣವೇ ಆಡಳಿತ ಮತ್ತು ವಿಪಕ್ಷಗಳ ಎಚ್ಚೆತ್ತು, ಪಕ್ಷಬೇಧ ಮರೆತು, ಯಾರಿಗೆ ಹೇಗೆ ಮಾತನಾಡಬೇಕೆಂಬ ಸಾಮಾನ್ಯ ಜ್ಞಾನವನ್ನು ಆ ವಿಪ ಸದಸ್ಯಗೆ ತಿಳಿ ಹೇಳಿ, ವಿಪ ಸದಸ್ಯತ್ವವನ್ನು ಅನರ್ಹಗೊಳಿಸಬೇಕೆಂದು ಹೇಳಿದರು. 

ರವಿಕುಮಾರ ನುಗ್ಗೇಹಳ್ಳಿ, ಧನಂಜಯ ಕಡ್ಲೇಬಾಳು, ಆವರಗೆರೆ ರುದ್ರಮುನಿ, ಎಸ್.ಟಿ. ಶಾಂತಗಂಗಾಧರ, ಸುನಿಲ್ ದಾಸಪ್ಳ, ಚೇತನ ಫಾರ್ಮ ಕೆ.ಇ.ಪ್ರಕಾಶ, ನಿಂಗರಾಜ ಅಗಸನಕಟ್ಟೆ, ವನಜಾ ಮಹಲಿಂಗಯ್ಯ, ಕುಮಾರ ಮೆಳ್ಳೇಕಟ್ಟೆ, ದೇವರಾಜ ಅಗಸನಕಟ್ಟೆ, ಶ್ರೀನಿವಾಸ ರಾಮಘಟ್ಟ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News