×
Ad

ಹೆಣ್ಣು ಮಕ್ಕಳ ಶಿಕ್ಷಣ ಶುಲ್ಕ ಸರಕಾರದಿಂದಲೇ ಪಾವತಿ: ಸಚಿವ ಕೃಷ್ಣ ಭೈರೇಗೌಡ

Update: 2018-12-05 18:45 IST

ಬೆಂಗಳೂರು, ಡಿ. 5: ‘ಪ್ರಸಕ್ತ ಸಾಲಿನಿಂದಲೇ ರಾಜ್ಯದ ಎಲ್ಲ ಸರಕಾರಿ ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಪಡೆದ ಎಲ್ಲ ವಿದ್ಯಾರ್ಥಿನಿಯರ ಶಿಕ್ಷಣ ಶುಲ್ಕವನ್ನು ಸರಕಾರವೆ ಭರಿಸಲಿದೆ’ ಎಂದು ಕಾನೂನು ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದ ಸಚಿವ ಸಂಪುಟ ಸಭಾಮಂದಿರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಿಂದಲೇ ಸರಕಾರಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಈ ಲಾಭ ದೊರೆಯಲಿದೆ ಎಂದರು.

ವಿದ್ಯಾರ್ಥಿನಿಯರ ಶುಲ್ಕ ಭರಿಸುವ ಉದ್ದೇಶಕ್ಕಾಗಿ ಪ್ರತಿವರ್ಷ ರಾಜ್ಯ ಸರಕಾರ 95 ಕೋಟಿ ರೂ.ಗಳನ್ನು ಭರಿಸಬೇಕಾಗುತ್ತದೆ. ರಾಜ್ಯದ 3.70ಲಕ್ಷ ವಿದ್ಯಾರ್ಥಿನಿಯರು ಇದರ ಪ್ರಯೋಜನವನ್ನು ಪಡೆಯಲಿದ್ದಾರೆ ಎಂದು ಕೃಷ್ಣಭೈರೇಗೌಡ ಇದೇ ವೇಳೆ ಮಾಹಿತಿ ನೀಡಿದರು.

ಪ್ರಮುಖ ನಿರ್ಧಾರಗಳು: ಚಲನಚಿತ್ರಗಳಲ್ಲಿ ರಾಜ್ಯದ ಪ್ರವಾಸಿ ತಾಣಗಳನ್ನು ಚಿತ್ರೀಕರಿಸಿ ಪ್ರದರ್ಶಿಸುವ ಮೂಲಕ ಪ್ರವಾಸಿಗರ ಭೇಟಿಯನ್ನು ಹೆಚ್ಚಿಸುವ ಉದ್ದೇಶದಿಂದ ‘ಚಲನಚಿತ್ರ ಪ್ರವಾಸೋದ್ಯಮ ನೀತಿ’ ಅನುಷ್ಠಾನಗೊಳಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ರಾಜ್ಯದ ಪ್ರವಾಸಿ ತಾಣಗಳಲ್ಲಿ ಚಿತ್ರಿಸುವ ಚಿತ್ರಗಳಿಗೆ ಗರಿಷ್ಠ 1 ಕೋಟಿ ರೂ. ಹಾಗೂ ಬಹಳ ದೊಡ್ಡ ಪ್ರಮಾಣದಲ್ಲಿ ಚಿತ್ರಿಸುವ ಚಲನಚಿತ್ರಗಳಿಗೆ 2.5 ಕೋಟಿ ರೂ. ಪ್ರೋತ್ಸಾಹ ನೀಡಲು ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ. ಇದಕ್ಕೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲಾಗಿದೆ. ಈ ಪ್ರಸ್ತಾವನೆಗೆ ಇಂದಿನ ಸಚಿವ ಸಂಪುಟ ಸಭೆ ಸಮ್ಮತಿಸಿದೆ ಎಂದರು.

ಸರಳೀಕರಣ: ಭೂ ಕಂದಾಯ ಕಾಯ್ದೆ 1964ರ ಕಲಂ 95 (2)ರಡಿ ಕಲ್ಪಿಸಲಾದ ಅವಕಾಶದಂತೆ ಕೃಷಿಭೂಮಿಯನ್ನು, ಕೃಷಿಯೇತರ ಉದ್ದೇಶಕ್ಕೆ ಬದಲಾಯಿಸುವ ವಿಧಾನ ಸರಳೀಕರಣಗೊಳಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಅರ್ಜಿದಾರರಿಂದ ಭೂ-ಪರಿವರ್ತನೆ ಕೋರಿಕೆಯೊಂದಿಗೆ ಅಫಿಡೆವಿಟ್ ನಮೂನೆ-‘ಎ’ನಲ್ಲಿ ಪಡೆದು, ವಿವಿಧ ಇಲಾಖೆ/ಪ್ರಾಧಿಕಾರಗಳ ಅಭಿಪ್ರಾಯಕ್ಕಾಗಿ ಏಕಕಾಲಕ್ಕೆ ಆನ್‌ಲೈನ್‌ನಲ್ಲಿ ವರ್ಗಾಯಿಸಿ, ಅವರಿಂದ 1ತಿಂಗಳ ಕಾಲಮಿತಿಯೊಂದಿಗೆ ಅಭಿಪ್ರಾಯ/ವರದಿ ಬಾರದಿದ್ದಲ್ಲಿ ಭೂ-ಪರಿವರ್ತನೆ ಕೋರಿಕೆ ಬಗ್ಗೆ ಅವರಿಂದ ಯಾವುದೇ ರೀತಿಯ ಆಕ್ಷೇಪಣೆ ಇಲ್ಲವೆಂದು ಪರಿಗಣಿಸಲು ಒಪ್ಪಿಗೆ ನೀಡಿದೆ.

ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯು ನಷ್ಟದಲ್ಲಿದ್ದು, ಕಬ್ಬು ಅರೆಯುವ ಕೆಲಸ ಸ್ಥಗಿತವಾಗಿತ್ತು. ಕಬ್ಬು ಬೆಳೆಗಾರರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಕಾರ್ಖಾನೆ ಮರು ಆರಂಭಕ್ಕೆ 20 ಕೋಟಿ ರೂ.ಸಾಲ ಒದಗಿಸಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಹಾಡ್ಯ ಗ್ರಾಮದ ಬಳಿ ಕಾವೇರಿ ನದಿಯಿಂದ ನೀರನ್ನೆತ್ತಿ ಕೆ.ಆರ್.ನಗರ ತಾಲೂಕಿನ 12ಕೆರೆಗಳನ್ನು ತುಂಬಿಸುವ ಯೋಜನೆಗೆ 15ಕೋಟಿ ರೂ.ಮಂಜೂರು ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಆಹಾರ ಇಲಾಖೆಯಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಚಿಲ್ಲರೆ ಮಾರಾಟಗಾರರ ಲಾಭಾಂಶವನ್ನು ಕ್ವಿಂಟಾಲ್ ಗೆ 80 ರೂ.ನಿಂದ 100 ರೂ.ಗಳಿಗೆ ಹೆಚ್ಚಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ರಾಜ್ಯ ಸರಕಾರಿ ನೌಕರರ 6ನೆ ವೇತನ ಆಯೋಗದ ಶಿಫಾರಸ್ಸುಗಳನ್ವಯ ಭತ್ತೆಗಳ ಪರಿಷ್ಕರಣೆಗೆ ಸಂಪುಟ ಒಪ್ಪಿಗೆ ನೀಡಿದೆ. ಇದರಿಂದ 400 ಕೋಟಿ ರೂ.ಹೆಚ್ಚುವರಿಯಾಗಿ ಸರಕಾರ ಭರಿಸಬೇಕಾಗುತ್ತದೆ.

ಬಾಗಲಕೋಟೆ ತಾಲೂಕಿನ ಮುಧೋಳ ತಾಲೂಕಿನ ಯಡಹಳ್ಳಿಯಲ್ಲಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜನ್ನು ಪ್ರಾರಂಭಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನಲ್ಲಿ 450 ಕೋಟಿ ರೂ.ವೆಚ್ಚದಲ್ಲಿ 300 ಹಾಸಿಗೆಗಳ ಹೊಸ ವೈದ್ಯಕೀಯ ಕಾಲೇಜು ಸ್ಥಾಪಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಬೆಂಗಳೂರಿನಲ್ಲಿ ಏರ್ ಶೋ ನಡೆಸುವ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗೆ 30ಕೋಟಿ ರೂ.ಗಳನ್ನು ಒದಗಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಕಾನೂನು ಸಚಿವ ಕೃಷ್ಣಭೈರೇಗೌಡ ಮಾಹಿತಿ ನೀಡಿದರು.

‘ಸರಕಾರಿ ಶಾಲೆಗಳಿರುವ ಕಡೆ ಆರ್‌ಟಿಇಯಡಿ, ಖಾಸಗಿ ಶಾಲೆಗಳಿಗೆ ಪ್ರವೇಶ ನೀಡದಂತೆ ಸಂಪುಟ ಸಭೆ ನಿರ್ಧರಿಸಿದೆ. ಕಾಯ್ದೆಯ ನಿಯಮಾವಳಿಗಳು ಸ್ಪಷ್ಟವಾಗಿದ್ದು, ನಿರ್ದಿಷ್ಟ ದೂರದವರೆಗೂ ಸರಕಾರಿ ಶಾಲೆಗಳು ಇಲ್ಲದಿದ್ದ ವೇಳೆ ಆರ್‌ಟಿಇ ಮೂಲಕ ಖಾಸಗಿ ಶಾಲೆಗಳಿಗೆ ಪ್ರವೇಶ ಕೊಡಿಸಿ ಸರಕಾರ ಶುಲ್ಕ ಪಾವತಿಸಲು ಅವಕಾಶ ಇದೆ. ಆದರೆ, ಸರಕಾರ ಹಿಂದೆ ನಿಯಮವನ್ನು ಸರಿಯಾಗಿ ಪಾಲನೆ ಮಾಡದೆ ಸರಕಾರಿ ಶಾಲೆಗಳಿದ್ದರೂ ಖಾಸಗಿ ಶಾಲೆಗಳಿಗೆ ಪ್ರವೇಶ ಕೊಡಿಸಲಾಗಿದೆ. ಇದರಿಂದ ಸರಕಾರಿ ಶಾಲೆಗಳು ನಿರ್ಲಕ್ಷ್ಯಕ್ಕೊಳಗಾಗಿವೆ. ಹೀಗಾಗಿ ಇನ್ನು ಮುಂದೆ ಸರಕಾರಿ ಶಾಲೆಗಳಿಲ್ಲದ ಕಡೆಗೆ ಮಾತ್ರ ಆರ್‌ಟಿಇನಡಿ ಖಾಸಗಿ ಶಾಲೆಗಳ ಪ್ರವೇಶಕ್ಕೆ ಅವಕಾಶ ಸಿಗಲಿದೆ’

-ಕೃಷ್ಣಭೈರೇಗೌಡ, ಕಾನೂನು ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News