ಆರ್‌ಟಿಒ ವಾಹನ ಚಾಲಕರಿಗೆ ನೀಡುವ ಬ್ಯಾಡ್ಜ್‌ಗೆ ಎಸೆಸೆಲ್ಸಿ ಕಡ್ಡಾಯ ಸರಿಯಲ್ಲ: ಝಮೀರ್ ಅಹ್ಮದ್ ಖಾನ್

Update: 2018-12-05 14:09 GMT

ಬೆಂಗಳೂರು, ಡಿ.5: ಆರ್‌ಟಿಒ ವತಿಯಿಂದ ವಾಹನ ಚಾಲಕರು ಬ್ಯಾಡ್ಜ್ ಪಡೆಯಲು ಎಸೆಸೆಲ್ಸಿ ಕಡ್ಡಾಯಗೊಳಿಸಿರುವುದು ಸರಿಯಲ್ಲ. ಈ ನಿಯಮವನ್ನು ರದ್ದು ಪಡಿಸುವ ಕುರಿತು ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗುತ್ತಿದೆ ಎಂದು ಅಲ್ಪಸಂಖ್ಯಾತ ಕಲ್ಯಾಣ ಹಾಗೂ ಆಹಾರ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದರು. 

ಬುಧವಾರ ವಿಧಾನಸೌಧದ ಮುಂಭಾಗ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಆಯೋಜಿಸಿದ್ದ ಫಲಾನುಭವಿಗಳಿಗೆ ಟ್ಯಾಕ್ಸಿ ಹಾಗೂ ಗೂಡ್ಸ್ ವಾಹನಗಳ ವಿತರಣಾ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಅಲ್ಪಸಂಖ್ಯಾತ ಸಮುದಾಯದಲ್ಲಿ ಎಸೆಸೆಲ್ಸಿ ವಿದ್ಯಾಭ್ಯಾಸ ಮಾಡಿದವರ ಸಂಖ್ಯೆ ತೀರ ಕಡಿಮೆಯಿದೆ. ಹಾಗೂ ಸಮುದಾಯದ ಕಡು ಬಡವರು ಎಸೆಸೆಲ್ಸಿವರೆಗೆ ಓದಿರುವುದೆ ಅಪರೂಪ. ಇಂತಹ ಸಂದರ್ಭದಲ್ಲಿ ವಾಹನ ಚಾಲಕರು ಎಸೆಸೆಲ್ಸಿ ಓದಿದವರಿಗೆ ಮಾತ್ರ ಬ್ಯಾಡ್ಜ್ ನೀಡಲು ಆರ್‌ಟಿಒ ನಿಯಮ ಮಾಡಿದೆ. ಇದರಿಂದ ಅಲ್ಪಸಂಖ್ಯಾತ ಸಮುದಾಯದ ಬಡವರು ಸರಕಾರದ ಸೌಲಭ್ಯದಿಂದ ವಂಚಿತರಾಗಲಿದ್ದಾರೆ. ಹೀಗಾಗಿ ಈ ನಿಯಮವನ್ನು ರದ್ದು ಪಡಿಸುವ ಕುರಿತು ಚರ್ಚೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಅಲ್ಪಸಂಖ್ಯಾತರಾದ ಮುಸ್ಲಿಮರು, ಕ್ರೈಸ್ತರು, ಜೈನರು, ಬೌದ್ಧರು, ಸಿಖ್ಖರ್ ಮತ್ತು ಪಾರ್ಸಿ ಸಮುದಾಯದಲ್ಲಿರುವ ಬಡವರ ಆಮೂಲಾಗ್ರ ಅಭಿವೃದ್ಧಿಗಾಗಿ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ಶ್ರಮಿಸುತ್ತಿದೆ. ಇದರ ಭಾಗವಾಗಿ 2018-19ನೆ ಸಾಲಿನಲ್ಲಿ 677 ಫಲಾನುಭವಿಗಳಿಗೆ ಟ್ಯಾಕ್ಸಿ ಹಾಗೂ ಗೂಡ್ಸ್ ವಾಹನಗಳನ್ನು ವಿತರಿಸಲು ಉದ್ದೇಶಿಸಿದ್ದೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News