ಮಳೆ ಕೊರತೆ: ಆಹಾರ ಉತ್ಪಾದನೆಯಲ್ಲಿ ಇಳಿಕೆ

Update: 2018-12-05 16:22 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ.5: ಮುಂಗಾರು ಹಾಗೂ ಹಿಂಗಾರಿನಲ್ಲಿ ಸರಿಯಾದ ಮಳೆ ಬಾರದ ಕಾರಣ ಈ ಬಾರಿಯ ಕೃಷಿ ವರ್ಷದಲ್ಲಿ ಆಹಾರ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಹಿಂದಿನ ಐದು ವರ್ಷಗಳಲ್ಲಿನ ಅತ್ಯಂತ ಕನಿಷ್ಠ ಎಂದು ಅಂದಾಜಿಸಿರುವುದು ಆತಂಕವನ್ನುಂಟು ಮಾಡಿದೆ.

ಕೃಷಿ ಇಲಾಖೆಯು ಈ ಸಾಲಿನಲ್ಲಿ ವಾರ್ಷಿಕ 135 ಲಕ್ಷ ಟನ್ ಆಹಾರ ಉತ್ಪಾದನೆ ಮಾಡುವ ಗುರಿಯನ್ನಿಟ್ಟುಕೊಂಡಿತ್ತು. ಆದರೆ, ರಾಜ್ಯದಲ್ಲಿ ವಾಡಿಕೆಯ ಮಳೆಯ ಕೊರತೆಯಿಂದಾಗಿ ಕೃಷಿ ಉತ್ಪನ್ನಗಳ ಬೆಳೆ ಪ್ರಮಾಣ ಇಳಿಕೆಯಾಗಿದೆ. ಅಲ್ಲದೆ, ರಾಜ್ಯದ ಬಯಲು ಸೀಮೆ ಜಿಲ್ಲೆಗಳು ಸೇರಿದಂತೆ ಸುಮಾರು 100 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಇದೆಲ್ಲದರ ಹಿನ್ನೆಲೆಯಲ್ಲಿ ಈ ವರ್ಷದಲ್ಲಿ 95.69 ಲಕ್ಷ ಟನ್ ಆಹಾರ ಉತ್ಪಾದನೆಯಾಗಿದೆ ಎಂದು ಹೇಳಲಾಗಿದೆ.

ವರ್ಷದಲ್ಲಿ ಸರಿಯಾದ ಮಳೆ ಕೊರತೆಯಿಂದ ಕಂಗಾಲಾಗಿರುವ ರೈತರಿಗೆ ಇದೀಗ ಆರ್ಥಿಕ ಕೊರತೆಯೂ ಕಾಡಲಿದೆ. ಅಲ್ಲದೆ, ಕೃಷಿ ಆಂತರಿಕ ಉತ್ಪನ್ನ ಕುಸಿಯುವ ಸಂಭವವೂ ಇದೆ. ಜತೆಗೆ ಇದೀಗ ಬೆಳೆಯುತ್ತಿರುವ ಬೆಳೆಗಳಲ್ಲಿ ಗುಣಮಟ್ಟದ ಕೊರತೆ ಎದ್ದು ಕಾಣುತ್ತಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಇಂದಿನ ಉತ್ಪನ್ನಗಳಿಗೆ ಬೇಡಿಕೆಯೂ ಕುಸಿತವಾಗುವ ಸಾಧ್ಯತೆಯಿದ್ದು, ರಫ್ತು ಮಾಡಿಕೊಳ್ಳಲು ಮೊರೆ ಹೋಗಬಹುದಾದ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಹಿಂಗಾರು ಮತ್ತು ಮುಂಗಾರಿನಲ್ಲಿ ಮಳೆ ಕೈಕೊಟ್ಟಿರುವುದರಿಂದ ರೈತರ ಪಾಲಿಕೆ ಶಾಪವಾಗಿದೆ. ಹೀಗಾಗಿ, ಕೇಂದ್ರ ಸರಕಾರಕ್ಕೆ 1,700 ಕೋಟಿ ಅನುದಾನ ನೆರವು ನೀಡುವಂತೆ ಕೋರಿದ್ದೇವೆ. ಸಾಧ್ಯವಾದಷ್ಟು ರೈತರಿಗೆ ವಿಮೆ ಪರಿಹಾರ ನೀಡುವ ಕೆಲಸ ಮಾಡಲಾಗುತ್ತದೆ.

-ಡಾ.ಕೆ.ಜಿ.ಜಗದೀಶ್, ಕೃಷಿ ಇಲಾಖೆ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News