ತವರಿಗೆ ಮರಳುತ್ತಿದ್ದ ಕಾರವಾರದ ಯೋಧ ಆಕಸ್ಮಿಕ ಸಾವು: ಪೋಷಕರಿಂದ ಕೊಲೆ ಶಂಕೆ

Update: 2018-12-05 16:54 GMT
ಮೃತ ಯೋಧ ದುಮಿಂಗ್ ಸಿದ್ದಿ

ಕಾರವಾರ, ಡಿ.5: ರಜೆ ಪಡೆದು ತವರಿಗೆ ಹಿಂದಿರುಗುತ್ತಿದ್ದ ಯೋಧರೊಬ್ಬರು ಆಕಸ್ಮಿಕವಾಗಿ ಮೃತಪಟ್ಟಿದ್ದು, ಪೋಷಕರು ಕೊಲೆ ಶಂಕೆ ವ್ಯಕ್ತಪಡಿಸಿ ಸೇನಾಧಿಕಾರಿಗೆ ದೂರು ನೀಡಿರುವ ಘಟನೆ ನಡೆದಿದೆ.

ಪಂಜಾಬ್‌ನ ಪಾಕಿಸ್ತಾನ ಗಡಿಭಾಗವಾದ ಪಠಾಣ್‌ಕೋಟ್‌ನಲ್ಲಿ ಬಿಎಸ್‌ಎಫ್ ಯೋಧನಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಾರವಾರ ತಾಲೂಕಿನ ಶಿರವಾಡ ಗ್ರಾ.ಪಂ. ವ್ಯಾಪ್ತಿಯ ಮಖೇರಿ ಗ್ರಾಮದ ನಿವಾಸಿ ದುಮಿಂಗ್ ಸಿದ್ದಿ ಮೃತಪಟ್ಟವರು.

ದುಮಿಂಗ್ ಸಿದ್ದಿ ಅವರು ಶನಿವಾರ ತನ್ನ ಪತ್ನಿಗೆ ಕರೆ ಮಾಡಿ ತಾನು ರಜೆಯ ಮೇಲೆ ಊರಿಗೆ ಬರುತ್ತಿದ್ದು, ಸೋಮವಾರ ಹೊರಟು ಬುಧವಾರ ಮನೆ ತಲುಪುವುದಾಗಿ ತಿಳಿಸಿದ್ದರು. ಆದರೆ, ಸೋಮವಾರವೇ ಅವರು ಮೃತಪಟ್ಟಿರುವುದಾಗಿ ಮಥುರಾ ಸೈನಿಕ್ ಬೋರ್ಡ್‌ನ ಜವಾನರು ಉತ್ತರ ಕನ್ನಡ ಜಿಲ್ಲಾಧಿಕಾರಿ ಮತ್ತು ಮನೆಯವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು ಎಂದು ತಿಳಿದು ಬಂದಿದೆ.

ತವರಿಗೆ ಹಿಂದಿರುಗಲು ದುಮಿಂಗ್ ಸಿದ್ದಿ, ದಿಲ್ಲಿಯಲ್ಲಿ ರೈಲು ಏರಿದ್ದರು. ಉತ್ತರ ಪ್ರದೇಶದ ಮಥುರಾದಲ್ಲಿ ಆಕಸ್ಮಿಕವಾಗಿ ರೈಲಿನಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪೋಷಕರು ಸೇನಾಧಿಕಾರಿಗಳಿಗೆ ದೂರು ನೀಡಿದ್ದು, ಸೂಕ್ತ ತನಿಖೆ ನಡೆಸುವವಂತೆ ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಥುರಾದ ಸೇನಾ ಆಸ್ಪತ್ರೆಯಿಂದ ಆಗಮಿಸಿದ್ದ ಪಾರ್ಥಿವ ಶರೀರ ಬುಧವಾರ ಬೆಳಗ್ಗೆ 4ಕ್ಕೆ ಕಾರವಾರಕ್ಕೆ ಆಗಮಿಸಿದೆ. ಪಾರ್ಥಿವ ಶರೀರದೊಂದಿಗೆ ಬಂದಿದ್ದ ಸೇನಾಧಿಕಾರಿಯೊಬ್ಬರು ತಹಶೀಲ್ದಾರ್ ಅವರ ಸಮ್ಮುಖದಲ್ಲಿ ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಬಳಿಕ ಕುಟುಂಬಸ್ಥರು, ಸಂಬಂಧಿಕರು, ಸಾವಿರಾರು ಮಂದಿ ಸಾರ್ವಜನಿಕರು ದುಮಿಂಗ್ ಸಿದ್ದಿಯವರ ಅಂತಿಮ ದರ್ಶನ ಪಡೆದರು. ಮಧ್ಯಾಹ್ನದ ವೇಳೆಗೆ ಮೆರವಣಿಗೆ ನಡೆಸಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನಡೆಯಿತು. ಸೋಮವಾರ ಹೊರಟು ಬುಧವಾರ ಮನೆ ತಲುಪುವುದಾಗಿ ಹೇಳಿದ್ದ ಕೆಲವೇ ಸಮಯದಲ್ಲಿ ಪತಿಯ ಮರಣ ವಾರ್ತೆ ತಿಳಿದ ಪತ್ನಿ ಲೀನಾಸಿದ್ದಿ, ತೀವ್ರ ಅಸ್ವಸ್ಥರಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ.     

ತಂದೆ ಮೊತೇಶ ಸಿದ್ಧಿ, ತಾಯಿ ಸುಶೀಲಾ ಸಿದ್ದಿ, ಅಣ್ಣ ಸಂತಾನ್ ಸಿದ್ದಿ, ಅಜ್ಜಿ ಸಂತಾನಿ ಸಿದ್ದಿ ಹಾಗೂ ಇಬ್ಬರು ಮಕ್ಕಳು ದುಃಖದಲ್ಲಿ ಮುಳುಗಿದ್ದಾರೆ. ಸ್ಥಳೀಯರು ಯೋಧನ ಮನೆ ಬಳಿ ಜಮಾಯಿಸಿದ್ದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ದುಮಿಂಗ್ ಸಿದ್ದಿ ತನ್ನ ಮಗನ ಹುಟ್ಟುಹಬ್ಬ (ಡಿ.9) ದಂದು ಸರ್ಪ್ರೈಸ್ ನೀಡುತ್ತೇನೆ ಹಾಗೂ ಕ್ರಿಸ್‌ಮಸ್ ಹಬ್ಬದ ದಿನ ಎಲ್ಲರನ್ನೂ ಆಮಂತ್ರಿಸಿ ಹೊಸ ಮನೆಯ ಗೃಹಪ್ರವೇಶ ಮಾಡುವುದಾಗಿ ಕನಸು ಹೊಂದಿದ್ದರು ಎಂದು ಕಣ್ಣೀರು ಹಾಕುತ್ತಿದ್ದ ಅವರ ಪತ್ನಿ ಹಾಗೂ ಪೋಷಕರ ರೋದನ ಮುಗಿಲು ಮುಟ್ಟಿತ್ತು.

ಮೃತಯೋಧನಿಗೆ ಜಿಲ್ಲಾಡಳಿತ ಗೌರವ ಸಲ್ಲಿಸಿಲ್ಲ ಎಂದು ಸಾರ್ವಜನಿಕರು ಸ್ಥಳಕ್ಕಾಗಮಿಸಿದ ಸೈನಿಕ ಕಲ್ಯಾಣ ಮಂಡಳಿಯ ಅಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಅಭಿಜಿನ್ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಈ ಸಂದರ್ಭ ಪ್ರತಿಕ್ರಿಯಿಸಿದ ಎಸಿ ಅಭಿಜಿನ್ ಬಿ.,ಯೋಧರು ಕರ್ತವ್ಯದಲ್ಲಿದ್ದಾಗ ಹುತಾತ್ಮರಾದರೆ ಸಕಲ ಗೌರವಗಳನ್ನು ಸಲ್ಲಿಸಲು ಆದೇಶವಿದೆ. ಯೋಧ ದುಮಿಂಗ್ ರಜೆಯಲ್ಲಿದ್ದ ಸಂದರ್ಭ ಮೃತಪಟ್ಟಿದ್ದರಿಂದ ಸಾಮಾನ್ಯ ಗೌರವಗಳನ್ನು ಹೊರತುಪಡಿಸಿ, ಸರಕಾರದಿಂದ ಆದೇಶ ಬರುವವರೆಗೆ ಬೇರೆಯಾವುದೇ ಗೌರವ ನೀಡಲಾಗುವುದಿಲ್ಲ ಎಂದರು. ಬಳಿಕ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಯೋಧನಿಗೆ ಸರಕಾರಿ ಗೌರವ ಸಲ್ಲಿಸಿದರು.

ವರ್ಷದಲ್ಲಿ ನಿವೃತ್ತರಾಗಲಿದ್ದ ಸಿದ್ದಿ

ದುಮಿಂಗ್ ಸಿದ್ದಿ ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ಕರ್ತವ್ಯದಲ್ಲಿದ್ದರು. ಒಂದು ವರ್ಷದಲ್ಲಿ ಸೇನೆಯಿಂದ ನಿವೃತ್ತರಾಗಲಿದ್ದರು. ಹೀಗಾಗಿ ತಮ್ಮ ಗ್ರಾಮದಲ್ಲಿ ಹೊಸ ಮನೆಯ ನಿರ್ಮಾಣ ಕಾರ್ಯವನ್ನು ಆರಂಭಿಸಿದ್ದರು. ಕರ್ತವ್ಯದ ನಂತರ ಬಿಡುವಾದಾಗ ಪ್ರತಿದಿನವೂ ಮನೆಗೆ ವೀಡಿಯೊ ಕರೆ ಮಾಡಿ ತನ್ನ ಕುಟುಂಬದವರೊಂದಿಗೆ ಮಾತನಾಡುತ್ತಿದ್ದರು. ಅದರಂತೆ ಶನಿವಾರ ಮಧ್ಯಾಹ್ನ 2 ಗಂಟೆಗೆ ಕರೆ ಮಾಡಿ ಪತ್ನಿಗೆ ತಾನು ಊರಿಗೆ ಬರುವ ವಿಷಯ ತಿಳಿಸಿದ್ದರು. ಯಲ್ಲಾಪುರದ ಬೋರ್ಡಿಂಗ್ ಸ್ಕೂಲ್‌ನಲ್ಲಿ 10ನೇ ತರಗತಿ ವರೆಗೆ ಓದಿ, ಪಿಯುಸಿಯನ್ನು ಕಾರವಾರದಲ್ಲಿ ಮುಗಿಸಿದ್ದ ಸಿದ್ದಿ, ಬಳಿಕ ಬೆಂಗಳೂರಿಗೆ ತೆರಳಿ ಅಲ್ಲಿಂದಲೇ ಸೈನ್ಯಕ್ಕೆ ಸೇರಿ ಅಸ್ಸಾಂ, ಜಮ್ಮು ಕಾಶ್ಮೀರ, ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಕೆಲಸ ಮಾಡಿದ್ದ. ಆರು ತಿಂಗಳ ಹಿಂದೆ ಪಂಜಾಬಿಗೆ ತೆರಳಿದ್ದ ದುಮಿಂಗ್ ಒಂದು ತಿಂಗಳ ರಜೆ ಪಡೆದು ಮನೆಗೆ ಬರುತ್ತಿರುವುದಾಗಿ ತಿಳಿಸಿದ್ದ.
-ಮೊತೇಶ ಸಿದ್ಧಿ, ಮೃತ ಯೋಧನ ತಂದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News