×
Ad

ಮಂಡ್ಯ: ಆತ್ಮಹತ್ಯೆಗೆ ಯತ್ನಿಸಿದ್ದ ಸಾರಿಗೆ ಬಸ್ ಚಾಲಕ ಸಾವು

Update: 2018-12-05 22:56 IST

ಮಂಡ್ಯ, ಡಿ.3: ಕೆಎಸ್‍ಆರ್‍ಟಿಸಿ ಮಳವಳ್ಳಿ ಡಿಪೋ ವ್ಯವಸ್ಥಾಪಕ ಶಾಂತಕುಮಾರ್ ಅವರ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ, ಆತ್ಮಹತ್ಯೆಗೆ ಯತ್ನಿಸಿದ್ದ  ಸಾರಿಗೆ ಬಸ್ ಚಾಲಕ ಲೋಕೇಶ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮೂರು ದಿನದ ಹಿಂದೆ ತನ್ನ ಗಾಜನೂರು ಗ್ರಾಮದಲ್ಲಿ ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದ ಲೋಕೇಶ್ ಅವರನ್ನು ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಸಂಜೆ ಮೃತಪಟ್ಟಿದ್ದಾರೆ.

ಡಿಪೋ ವ್ಯವಸ್ಥಾಪಕರ ವಿರುದ್ಧ ಡಿಪೋದ ಚಾಲಕರು ಹಾಗೂ ನಿರ್ವಾಹಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುರುವಾರ ಬೆಳಗ್ಗೆ ಮಳವಳ್ಳಿ ಡಿಪೋಗೆ ಲೋಕೇಶ್ ಶವ ತಂದು ಪ್ರತಿಭಟನೆ ನಡೆಸುವುದಾಗಿ ಚಾಲಕರು ತಿಳಿಸಿದ್ದಾರೆ.

ಘಟನೆ ಹಿನ್ನೆಲೆ: ಲೋಕೇಶ್ ಮೂರು ದಿನ ಕೆಲಸಕ್ಕೆ ರಜೆ ಹಾಕಿದ್ದು, 2 ದಿನದ ಹಿಂದೆ ಕೆಲಸಕ್ಕೆ ಹಾಜರಾದಾಗ ಅವರಿಗೆ ರೂಟ್ ಬಸ್ ಕೊಡಲಿಲ್ಲ. ಮೂರು ದಿನ ತಪ್ಪಿಸಿಕೊಂಡಿರುವುದಕ್ಕೆ ಕಾರಣ ಕೊಟ್ಟು, ನಂತರ ಕೇಂದ್ರ ಕಚೇರಿಯಲ್ಲಿ ಹೋಗಿ ಜಿಲ್ಲಾ ವ್ಯವಸ್ಥಾಪಕರನ್ನು ಕಂಡು ಅವರು ಏನು ಹೇಳುತ್ತಾರೋ ಅನಂತರ ನಿಮಗೆ ಬಸ್ ರೂಟ್ ಕೊಡುವುದಾಗಿ ಡಿಪೊ ವ್ಯವಸ್ಥಾಪಕ ಶಾಂತಕುಮಾರ್ ಹೇಳಿದ್ದರು ಎನ್ನಲಾಗಿದೆ.

ಕಳೆದ ವಾರ ಕಾಗೇಪುರದ ಬಸ್ ಚಾಲಕ ವೆಂಕಟೇಶ್, ವ್ಯವಸ್ಥಾಪಕರ ಕಿರುಕುಳದಿಂದ ನೊಂದು ಮುಖ್ಯಮಂತ್ರಿಯವರಿಗೆ ಬರೆದ ಪತ್ರದಲ್ಲಿ ತನಗೆ ಆಗುತ್ತಿರುವ ಕಿರುಕುಳದ ಬಗ್ಗೆ ವಿವರಿಸಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಅವರು ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಅಲ್ಲದೆ, ಇದಕ್ಕೂ ಹಿಂದೆ ಶಿವಶಂಕರ ಎಂಬ ಚಾಲಕ ರಾಜೀನಾಮೆ ನೀಡಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News