ಶಾಲೆ ಅಥವಾ ಆಸ್ಪತ್ರೆ ನಿರ್ಮಿಸಲಿ

Update: 2018-12-05 18:30 GMT

1992ರಲ್ಲಿ 16ನೇ ಶತಮಾನದ ಬಾಬರಿ ಮಸೀದಿಯನ್ನು ಬಿಜೆಪಿ ನೇತೃತ್ವದ ಗುಂಪು ಧ್ವಂಸಗೊಳಿಸುತ್ತಿದ್ದ ಸಮಯದಲ್ಲಿ ಪಶ್ಚಿಮ ಬಂಗಾಳದ ಕೋಲ್ಕತಾದ ದೈಬತ್ ಮುಖರ್ಜಿ ಕೇವಲ ಮೂರು ತಿಂಗಳ ಹಸುಳೆ. ದೇಶಾದ್ಯಂತ ಕೋಮು ದಳ್ಳುರಿಗೆ ಕಾರಣವಾದ ಮಸೀದಿ ಧ್ವಂಸ ಪ್ರಕರಣ ದೈಬತ್ ಕುಟುಂಬವನ್ನು ಅಷ್ಟಾಗಿ ಕಾಡಲಿಲ್ಲ. ಕೋಲ್ಕತಾದಲ್ಲಿ ಧಾರ್ಮಿಕ ಉತ್ಸಾಹ ಅಥವಾ ಉನ್ಮಾದ ಹೆಚ್ಚಾಗಿದ್ದನ್ನು ನಾನು ಕಂಡೇ ಇಲ್ಲ ಎಂದು ಹೇಳುತ್ತಾರೆ ಸದ್ಯ 26ರ ಹರೆಯದವರಾಗಿರುವ ದೈಬತ್ ಮುಖರ್ಜಿ.

ಜಾದವಪುರ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿರುವ ದೈಬತ್ ಹೇಳುವ ಪ್ರಕಾರ, ಆತ ಎಂಟನೇ ತರಗತಿಯಲ್ಲಿರುವಾಗ ಬಾಬರಿ ಮಸೀದಿ ಧ್ವಂಸದ ಬಗ್ಗೆ ತಿಳಿದುಕೊಂಡರು, ಅದೂ ಶಾಲೆಯ ಪಾಠ ಪುಸ್ತಕದಿಂದಲ್ಲ ಬದಲಿಗೆ ಅಂತರ್ಜಾಲದ ಮೂಲಕ.
ಮನೆಯಲ್ಲಿ ಪ್ರತಿ ಬಾರಿ ಈ ವಿಷಯ ಪ್ರಸ್ತಾಪಕ್ಕೆ ಬರುತ್ತಿದ್ದಂತೆ ಎಲ್ಲರೂ ಆಘಾತ ವ್ಯಕ್ತಪಡಿಸುತ್ತಿದ್ದರು. ಪ್ರಜಾಪ್ರಭುತ್ವದಲ್ಲಿ ಹಾಡಹಗಲೇ ಇಂಥ ಘಟನೆ ನಡೆಯಲು ಸಾಧ್ಯವೇ ಎಂದು ಆಶ್ಚರ್ಯಪಟ್ಟಿದ್ದೆ. ಇದು ಕಾನೂನು ಜಾರಿಯಲ್ಲಿ ಉಂಟಾದ ಘೋರ ವೈಫಲ್ಯ. ನನ್ನ ತಂದೆಯಂತೂ ಇದು ನಂಬಲಸಾಧ್ಯವಾದ ಘಟನೆ ಎಂದು ಹೇಳುತ್ತಿದ್ದರು ಎಂದು ದೈಬತ್ ವಿವರಿಸುತ್ತಾರೆ.
ತಾನೋರ್ವ ಸಮತೋಲಿತ ದೃಷ್ಟಿಕೋನವನ್ನು ಹೊಂದಿರುವ ಮಧ್ಯಪಂಥೀಯ ಎಂದು ದೈಬತ್ ಹೇಳಿಕೊಂಡಿದ್ದು ಅಯೋಧ್ಯೆಯ ಘಟನೆಯ ನಂತರ ರಾಜಕೀಯದಲ್ಲಿ ಗಮನಾರ್ಹ ಬೆಳವಣಿಗೆ ಕಂಡ ಬಿಜೆಪಿ ಸದ್ಯ ಪಶ್ಚಿಮ ಬಂಗಾಳದಲ್ಲಿ ತನ್ನ ಬೇರೂರಲು ಹವಣಿಸುತ್ತಿರುವುದು ಆತನನ್ನು ಚಿಂತೆಗೀಡು ಮಾಡಿದೆ. ಅದರಲ್ಲೂ ಮುಂದಿನ ಲೋಕಸಭಾ ಚುನಾವಣೆಗೂ ಮುನ್ನ ಮತ್ತೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪಕ್ಷವು ಕರೆ ನೀಡಿರುವುದು ದೈಬತ್ ಚಿಂತೆಗೆ ಪ್ರಮುಖ ಕಾರಣವಾಗಿದೆ.
ಸರ್ವೋಚ್ಚ ನ್ಯಾಯಾಲಯ ಏನೇ ತೀರ್ಪು ನೀಡಿದರೂ ದಂಗೆಯಂಥ ಸ್ಥಿತಿಗೆ ಸಿದ್ಧವಾಗಿರಿ ಎಂದು ಎಚ್ಚರಿಕೆ ನೀಡುವ ದೈಬತ್ ಅಯೋಧ್ಯೆಯಲ್ಲಿ ಮಂದಿರ ಅಥವಾ ಮಸೀದಿ ನಿರ್ಮಿಸುವ ಬದಲು ಶಾಲೆ ಅಥವಾ ಆಸ್ಪತ್ರೆಯಲ್ಲಿ ಕಟ್ಟಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸುತ್ತಾರೆ.
2014ರಲ್ಲಿ ನಾನು ಬಿಜೆಪಿಗೆ ಮತ ಹಾಕಿದ್ದೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹಾಗೆ ಮಾಡುವುದು ಅನುಮಾನ. ಯಾಕೆಂದರೆ ಒಬ್ಬ ವ್ಯಕ್ತಿ ಒಂದು ಪಕ್ಷವಾಗಲು ಸಾಧ್ಯವಿಲ್ಲ ಎಂದು ದೈಬತ್ ಮುಖರ್ಜಿ ಅಭಿಪ್ರಾಯಿಸುತ್ತಾರೆ.

Writer - ದೈಬತ್ ಮುಖರ್ಜಿ

contributor

Editor - ದೈಬತ್ ಮುಖರ್ಜಿ

contributor

Similar News