×
Ad

ಸಿದ್ದಗಂಗಾ ಮಠದ ಸ್ವಾಮೀಜಿಗೆ ಮಠದಲ್ಲೇ ಚಿಕಿತ್ಸೆ ಮುಂದುವರಿಕೆ: ಡಿಸಿಎಂ ಡಾ.ಪರಮೇಶ್ವರ್

Update: 2018-12-06 11:14 IST

ತುಮಕೂರು, ಡಿ.6: ಅನಾರೋಗ್ಯದಿಂದ ಬಳಲುತ್ತಿರುವ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ್ ಸ್ವಾಮೀಜಿಯವರ ಆರೋಗ್ಯ ಈಗ ಸ್ಥಿರವಾಗಿದೆ. ಭಕ್ತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಮಠದ ಕಿರಿಯ ಸ್ವಾಮೀಜಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.

ಸಿದ್ದಗಂಗಾ ಸ್ವಾಮೀಜಿಗೆ ಡಾ.ರವೀಂದ್ರ ನೇತೃತ್ವದಲ್ಲಿ ತುಮಕೂರಿನ ಹಳೆಯ ಮಠದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಅವರು ತಿಳಿಸಿದರು.

ಸಿದ್ದಗಂಗಾ ಮಠಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಸ್ವಾಮೀಜಿಯ ಆರೋಗ್ಯ ವಿಚಾರಿಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಪರಮೇಶ್ವರ್, ಬುಧವಾರ ಸಂಜೆ ಸ್ವಾಮೀಜಿಯ ಹೃದಯ ಬಡಿತದಲ್ಲಿ ಒಂದಿಷ್ಟು ಏರುಪೇರಾಗಿತ್ತು. ಸ್ವಲ್ಪಜ್ವರವೂ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಡಾ.ರವೀಂದ್ರ ನೇತೃತ್ವದ ವೈದ್ಯರ ತಂಡ ಚಿಕಿತ್ಸೆ ನೀಡಿದೆ. ಸದ್ಯ ಸ್ವಾಮೀಜಿಯ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ತೊಂದರೆ ಇಲ್ಲ. ಸ್ವಾಮೀಜಿ ಎಂದಿನಂತೆ ಕಳೆದ ರಾತ್ರಿ ಪೂಜೆ ನೆರವೇರಿಸಿದ್ದಾರೆ ಎಂದರು.

ಅದೇರೀತಿ ಸ್ವಾಮೀಜಿಗೆ 'ಸ್ಟಂಟ್' ಆಳವಡಿಕೆ ವಿಚಾರವಾಗಿ ನುರಿತ ವೈದ್ಯರ ಸಲಹೆಗಳನ್ನು ಪಡೆಯಬೇಕಿದೆ. ಇದಕ್ಕಾಗಿ ತಮಿಳುನಾಡಿನ ಇಬ್ಬರು ವೈದ್ಯರ ಸಲಹೆ ಪಡೆಯಲು ನಿರ್ಧರಿಸಲಾಗಿದೆ. ನಮ್ಮ ವೈದ್ಯರ ತಂಡವೇ ತಮಿಳುನಾಡಿಗೆ ತೆರಳಿ ಅವರ ಅಭಿಪ್ರಾಯ ಪಡೆಯುತ್ತಾರೆ. ಸದ್ಯ ಸ್ವಾಮೀಜಿಯವರಿಗೆ ಮಠದಲ್ಲೇ ಚಿಕಿತ್ಸೆ ಮುಂದುವರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News