ಚಿಕ್ಕಮಗಳೂರು: ಶಿಷ್ಟಾಚಾರ ಉಲ್ಲಂಘಟನೆ ಆರೋಪ; ಇಂದಿರಾ ಕ್ಯಾಂಟೀನ್ ಉದ್ಘಾಟನೆ ವೇಳೆ ಬಿಜೆಪಿಯಿಂದ ಧರಣಿ

Update: 2018-12-06 12:40 GMT

ಚಿಕ್ಕಮಗಳೂರು, ಡಿ.6: ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಜನಪ್ರತಿನಿಧಿಗಳನ್ನು ಆಹ್ವಾನಿಸದೇ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಗುರುವಾರ ಬಿಜೆಪಿ ಜನಪ್ರತಿನಿಧಿಗಳು ನಡೆಸಿದ ಧರಣಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷಕ್ಕೆ ನಾಂದಿಯಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಜಿಲ್ಲೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ ಹಿನ್ನೆಲೆಯಲ್ಲಿ ನಗರದ ಐ.ಜಿ.ರಸ್ತೆಯಲ್ಲಿ ತೆರವುಗೊಂಡ ಬಂಧಿಖಾನೆ ನಿವೇಶನದಲ್ಲಿ ನಿರ್ಮಿಸಲಾಗಿರುವ ಇಂದಿರಾ ಕ್ಯಾಂಟೀನ್‍ನ ಜಿಲ್ಲಾಡಳಿತ ಉದ್ಘಾಟನಾ ಕಾರ್ಯಕ್ರಮವನ್ನು ತರಾತುರಿಯಲ್ಲಿ ಹಮ್ಮಿಕೊಂಡಿತ್ತು. ಕಾರ್ಯಕ್ರಮಕ್ಕೆ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಮತ್ತು ನಗರಸಭೆ ಸದಸ್ಯರನ್ನು ಹೊರತುಪಡಿಸಿ ಯಾವುದೇ ಜನಪ್ರತಿನಿಧಿಗಳನ್ನು ಆಹ್ವಾನಿಸದ ಹಿನ್ನೆಲೆಯಲ್ಲಿ ಜಿ.ಪಂ.ನ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ತಾ.ಪಂ. ಅಧ್ಯಕ್ಷ ನೆಟ್ಟೇಕೆರೆಹಳ್ಳಿ ಜಯಣ್ಣ, ಭವ್ಯಾ ನಟೇಶ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಏಕಾಏಕಿ ಉದ್ಘಾಟನೆಗೊಳ್ಳಲಿದ್ದ ಕ್ಯಾಂಟೀನ್ ಎದುರು ಧರಣಿ ಕುಳಿತರು. ಇದರಿಂದ ಉದ್ರಿಕ್ತರಾದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಬಿಜೆಪಿ ಮುಖಂಡರು ಮತ್ತು ಶಾಸಕ ಸಿ.ಟಿ.ರವಿ ವಿರುದ್ದ ಘೋಷಣೆಗಳನ್ನು ಕೂಗಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರು ಧಿಕ್ಕಾರದ ಘೋಷಣೆ ಹಾಕಿದರು. ಇದರಿಂದಾಗಿ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಇಂದಿರಾ ಕ್ಯಾಂಟಿನ್ ಎದುರು ನಡೆದ ಈ ಹೈಡ್ರಾಮದಿಂದಾಗಿ ಮುಖ್ಯ ರಸ್ತೆಯಲ್ಲಿದ್ದ ಜನರು ಸ್ಥಳದಲ್ಲಿ ಜಮಾಯಿಸಿದರು. ಈ ವೇಳೆ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಸಂಚಾರಕ್ಕೆ ತೊಡಕುಂಟಾಯಿತು. ಇದೇ ವೇಳೆ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಸ್ಥಳಕ್ಕೆ ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ಗೊಂದಲದ ವಾತಾವರಣವನ್ನು ತಿಳಿಗೊಳಿಸಲು ಧರಣಿ ಹಿಂಪಡೆಯುವಂತೆ ಪೊಲೀಸರು ಬಿಜೆಪಿ ಮುಖಂಡರಿಗೆ ಮನವಿ ಮಾಡಿದರು. ಇದಕ್ಕೆ ಒಪ್ಪದ ಬಿಜೆಪಿ ಮುಖಂಡರನ್ನು ಪೊಲೀಸರು ಮುಂಜಾಗೃತಾ ಕ್ರಮವಾಗಿ ವಶಕ್ಕೆ ಪಡೆದು ಬಸವನಹಳ್ಳಿ ಠಾಣೆಗೆ ರವಾನಿಸಿದರು.

ತದನಂತರ ಸ್ಥಳಕ್ಕೆ ಬಂದ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಶಾಸಕರಾದ ಸಿ.ಟಿ.ರವಿ, ಟಿ.ಡಿ.ರಾಜೇಗೌಡ, ವಿಧಾನಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಎಸ್.ಎಲ್.ಧರ್ಮೇಗೌಡ, ವಿಧಾನಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ, ಕಾಂಗ್ರೆಸ್ ಮುಖಂಡ ಎಂ.ಎಲ್.ಮೂರ್ತಿ ಸೇರಿದಂತೆ ಜನಪ್ರತಿನಿಧಿಗಳು ಇಂದಿರಾ ಕ್ಯಾಂಟೀನ್‍ನ್ನು ಉದ್ಘಾಟಿಸಿ ಅಲ್ಲಿ ತಯಾರಿಸಿದ್ದ ಉಪ್ಪಿಟ್ಟು ಕೇಸರಿಬಾತ್‍ನ್ನು ಸವಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್‍ನ ಮುಖಂಡರಾದ ಮಂಜೇಗೌಡ, ಶಾಂತೇಗೌಡ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News