ತುಮಕೂರು: ಕುಡಿಯುವ ನೀರು, ಮೇವಿಗೆ ಕ್ರಮ ಕೈಗೊಳ್ಳಲು ಡಿಸಿಎಂ ಪರಮೇಶ್ವರ್ ಸೂಚನೆ

Update: 2018-12-06 13:25 GMT

ತುಮಕೂರು,ಡಿ.06: ಜಿಲ್ಲೆಯ ಎಲ್ಲಾ ತಾಲೂಕುಗಳು ಬರದಿಂದ ಕೂಡಿದ್ದು, ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ನರೇಗಾ ಯೋಜನೆಯಡಿ ಜನರಿಗೆ ಕೆಲಸ ಕಲ್ಪಿಸುವ ಕಡೆ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುವಂತೆ ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ್ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಧುಗಿರಿ ಪಟ್ಟಣದಲ್ಲಿರುವ ತಾಲೂಕು ಪಂ. ಸಭಾಂಗಣದಲ್ಲಿ ಬರ ಹಾಗೂ ಬರ ಪರಿಹಾರ ಕಾಮಗಾರಿಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಮಧುಗಿರಿ ಉಪವಿಭಾಗದಲ್ಲಿ ತೀವ್ರ ಬರವಿದ್ದು, ಹಿಂಗಾರು ಮತ್ತು ಮುಂಗಾರು ಮಳೆಗಳು ಕೈಕೊಟ್ಟಿವೆ. ರೈತರು ಸಂಕಷ್ಟದಲ್ಲಿದ್ದಾರೆ. ನರೇಗಾ ಯೋಜನೆಯಡಿ ಜನರಿಗೆ ಕೆಲಸ ಒದಗಿಸಿ, ನರೇಗಾ ಯೋಜನೆಯಡಿ ಜಿಲ್ಲೆಯು ಕಡಿಮೆ ಪ್ರಗತಿ ಸಾಧಿಸಿದೆ. ಜಿಲ್ಲೆಯ ಒಂದೊಂದು ತಾಲೂಕಿನಲ್ಲೂ ಒಂದೊಂದು ರೀತಿಯ ಪ್ರಗತಿಯಾಗಿದೆ. ಕುಣಿಗಲ್ ತಾಲೂಕು ಹೆಚ್ಚು ಇದ್ದರೆ, ಕೊರಟಗೆರೆ ತಾಲೂಕಿನಲ್ಲಿ ಕಡಿಮೆ ಪ್ರಗತಿಯಾಗಿದೆ. ಈ ರೀತಿಯ ಪ್ರಗತಿಯನ್ನು ನಾವು ಒಪ್ಪುವುದಿಲ್ಲ. ಕುಣಿಗಲ್ ತಾಲೂಕು ಪಂ. ಇಓಗೆ ಸಾಧ್ಯವಾದದ್ದು ಕೊರಟಗೆರೆ ತಾಲೂಕು ಇಓಗೆ ಏಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು. 

ನರೇಗಾ ಯೋಜನೆಯಡಿ ಸಾಧಿಸಿರುವ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರ ಪೂರ್ವಾನುಮತಿ ಇಲ್ಲದೆ ರಜೆಯ ಮೇಲೆ ತೆರಳಿರುವ ಕುಣಿಗಲ್ ತಾಲೂಕ್ ಪಂ. ಇಓ ಅವರ ವರ್ತನೆಯನ್ನು ಉಪ ಮುಖ್ಯಮಂತ್ರಿಗಳು ಹಾಗೂ ಸಂಸದ ಎಸ್.ಪಿ. ಮುದ್ದಹನುಮೇಗೌಡ ಅವರು ತೀವ್ರವಾಗಿ ತರಾಟೆ ತೆಗೆದುಕೊಂಡು, ಈ ಬಗ್ಗೆ ವರದಿ ನೀಡುವಂತೆ ಜಿ.ಪಂ. ಸಿಇಓರವರಿಗೆ ಸೂಚಿಸಿದರು. 

ಬರಗಾಲದಿಂದ ಕುಡಿಯುವ ನೀರು ಸಮಸ್ಯೆ ಉದ್ಭವಿಸುವ ಸಮಸ್ಯಾತ್ಮಕ 765 ಗ್ರಾಮಗಳನ್ನು ಗುರುತಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ರಾಮಗಳು ಸೇರ್ಪಡೆಯಾಗಬಹುದು. ಜಿಲ್ಲೆಯಲ್ಲಿರುವ ಶುದ್ಧ ಕುಡಿಯುವ ನೀರು ಘಟಕಗಳನ್ನು ಟಾಸ್ಕ್ ಪೋರ್ಸ್ ಹಣದಲ್ಲಿ ದುರಸ್ತಿ ಮಾಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. 

ಬರಗಾಲ ಸಂದರ್ಭದಲ್ಲಿ ಅಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಳ್ಳದೆ ಹಳ್ಳಿ-ಹಳ್ಳಿಗಳಿಗೂ ತೆರಳಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಬರಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಿ. ಜಿಲ್ಲಾಧಿಕಾರಿಗಳು ಹಾಗೂ ಸಿಇಓಅವರು ಪ್ರಗತಿ ಪರಿಶೀಲನೆ ನಡೆಸಬೇಕು. ನಾನು ಪ್ರತಿ ತಿಂಗಳಿಗೊಮ್ಮೆ ಬರ ಪರಿಹಾರ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಿದ್ದೇನೆ ಎಂದು ಅವರು ತಿಳಿಸಿದರು. 

ಜಿಲ್ಲೆಯಲ್ಲಿ ಸದ್ಯ 3,03,321 ಟನ್ ಒಣ ಮೇವು ಲಭ್ಯವಿದ್ದು, ಮುಂದಿನ 12 ವಾರಗಳಿಗೆ ಸಾಕಾಗುತ್ತದೆ. ನೀರಾವರಿ ಸೌಲಭ್ಯವಿರುವ ರೈತರಿಗೆ 51660 ಸಂಖ್ಯೆಯ ಮೇವಿನ ಕಿರು ಪೊಟ್ಟಣಗಳನ್ನು ನೀಡಿದ್ದು, 5,86,771 ಟನ್ ಹಸಿರು ಮೇವು ದೊರೆಯಲಿದೆ. ಇದು ನಾಲ್ಕು ವಾರಗಳಿಗೆ ಸಾಕಾಗುತ್ತದೆ. ಇನ್ನು 1,03,910 ಮೇವಿನ ಮಿನಿಕಿಟ್‍ಗಳನ್ನು ವಿತರಿಸಲಾಗುವುದು ಎಂದು ಪಶು ಇಲಾಖೆಯ ಉಪನಿರ್ದೇಶಕ ಡಾ.ಪ್ರಕಾಶ್ ಅವರು ಸಭೆಗೆ ಮಾಹಿತಿ ನೀಡಿದರು. 

ಸಭೆಯಲ್ಲಿ ಮಧುಗಿರಿ ಶಾಸಕ ವೀರಭದ್ರಯ್ಯ, ಜಿಲ್ಲಾ ಪಂ. ಅಧ್ಯಕ್ಷೆ ಲತಾ ರವಿಕುಮಾರ್, ಜಿಲ್ಲಾಧಿಕಾರಿ ಡಾ.ರಾಕೇಶ್‍ ಕುಮಾರ್,ಸಿಇಓ ಅನೀಸ್ ಕಣ್ಮಣಿ ಜಾಯ್, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಡಾ.ಶೋಭಾರಾಣಿ, ತಾಲೂಕು ಪಂ. ಅಧ್ಯಕ್ಷೆ ಇಂದಿರಾ ದೇನಾನಾಯ್ಕ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News