ಡಿ.10ಕ್ಕೆ ಬೆಳಗಾವಿಯಲ್ಲಿ ರೈತರ ಬೃಹತ್ ರ‍್ಯಾಲಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್

Update: 2018-12-06 14:54 GMT

ಬೆಂಗಳೂರು, ಡಿ. 6: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಯನ್ನು ನಿರ್ಲಕ್ಷಿಸಿದೆ. ಇದರ ವಿರುದ್ಧ ಬೆಳಗಾವಿಯಲ್ಲಿ ಡಿ.10ರಂದು ರೈತರ ಬೃಹತ್ ರ‍್ಯಾಲಿ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳಸಾ ಬಂಡೂರಿ ಯೋಜನೆಯ ತೀರ್ಪು ಬಂದಿದ್ದರೂ ಸರ್ವಪಕ್ಷ ಸಭೆ ಕರೆದಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಆಗಬೇಕಿರುವ ಕೆಲಸಗಳ ಬಗ್ಗೆಯೂ ಸರಕಾರ ಚಕಾರವೆತ್ತುತ್ತಿಲ್ಲ ಎಂದು ಟೀಕಿಸಿದರು.

ರಾಜ್ಯದಲ್ಲಿನ ನೂರು ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದೆ. ಆದರೆ, ಸರಕಾರ ಈ ವರೆಗೆ ಯಾವುದೇ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಂಡಿಲ್ಲ ಎಂದ ಅವರು, ರೈತರ ಸಾಲಮನ್ನಾ ಘೋಷಣೆ ಮಾಡಿದ್ದಾರೆ. ಆದರೆ, ಯಾವೊಬ್ಬ ರೈತರಿಗೂ ಋಣಮುಕ್ತ ಪತ್ರ ನೀಡಿದ ಉದಾಹರಣೆಯೇ ಇಲ್ಲ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಗೋವುಗಳಿಗೆ ಮೇವು ಇಲ್ಲ ಎಂದ ಅವರು, ಜನರಿಗೆ ಕುಡಿಯುವ ನೀರು, ಮತ್ತು ಜಾನುವಾರುಗಳಿಗೆ ಕೂಡಲೇ ಗೋಶಾಲೆ ತೆರೆಯಬೇಕು. ರೈತರ ಸಾಲಮನ್ನಾಕ್ಕೆ ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಕೋರಿದರು.

ಸರಕಾರ ಉರುಳಲಿದೆ: ಸಂಪುಟ ವಿಸ್ತರಣೆಯಾದ ದಿನವೇ ಮೈತ್ರಿ ಸರಕಾರ ಉರುಳಲಿದೆ. ಸಂಪುಟ ವಿಸ್ತರಣೆ ಸಂಬಂಧ ಸರಕಾರದ ವಿರುದ್ಧ ಅವರ ಶಾಸಕರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಲೋಕಸಭೆ ಚುನಾವಣೆಯವರೆಗೂ ಸಂಪುಟ ವಿಸ್ತರಣೆ ಆಗುವುದು ನಿಜಕ್ಕೂ ಕನಸಿನ ಮಾತೇ ಸರಿ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News