ಪ್ರಧಾನಿ ನರೇಂದ್ರ ಮೋದಿ ಮಹಾನ್ ಸುಳ್ಳುಗಾರ: ಮಾಜಿ ಸಚಿವ ವಿನಯ್‌ ಕುಲಕರ್ಣಿ

Update: 2018-12-06 15:24 GMT

ಧಾರವಾಡ, ಡಿ.6: ಪ್ರಧಾನಮಂತ್ರಿ ನರೇಂದ್ರ ಮೋದಿ ಮಹಾನ್ ಸುಳ್ಳುಗಾರ. ನಾಲ್ಕೂವರೆ ವರ್ಷ ಕೇವಲ ಭಾಷಣದಲ್ಲಿಯೆ ಕಳೆದಿರುವ ಮೋದಿ, ಡಾ.ಸ್ವಾಮಿನಾಥನ್ ವರದಿ ಜಾರಿಗೆ ಹಿಂದೇಟು ಹಾಕುತ್ತಿರುವುದು ಏಕೆ ಎಂದು ಮಾಜಿ ಸಚಿವ ವಿನಯ್‌ಕುಲಕರ್ಣಿ ಪ್ರಶ್ನಿಸಿದ್ದಾರೆ. ರೈತ ಜಾಗೃತಿ ವೇದಿಕೆಯು ಬುಧವಾರ ಧಾರವಾಡದ ಮುರುಘಾಮಠದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಹಮ್ಮಿಕೊಂಡಿದ್ದ ರೈತರ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಯಾದ ಮಹಾದಾಯಿ, ಕಳಸಾ-ಬಂಡೂರಿ ವಿಷಯದಲ್ಲಿ ಮೌನ ಮುರಿಯದೆ ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಹೇಳಿಕೊಟ್ಟ ಮಾತು ಬಿಟ್ಟರೆ ಬೇರೇನೂ ಮಾತನಾಡಲಿಲ್ಲ. ನಮಗೆಲ್ಲಾ ಅವರು ಪ್ರತಿ ಬಾರಿ ಹೊಸ ಹೊಸ ವೇಷ ತೊಡುವುದು ಗೊತ್ತಾಗಿದೆ. ಈ ಆಟ ಬಹಳ ದಿನ ನಡೆಯುವುದಿಲ್ಲ. ರೈತರು, ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಹೋರಾಟ ನಡೆಸೋಣ ಎಂದು ಅವರು ಕರೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮೀತ್ ಶಾ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಕುಮಾರಸ್ವಾಮಿ ಯಾರೇ ಆಗಲಿ ರೈತರ ಅನ್ನ ತಿಂದೇ ಬದುಕೋದು. ಮೈಯಲ್ಲಿ ಹರಿಯುತ್ತಿರುವುದು ರೈತರ ರಕ್ತನೇ. ಹೀಗಾಗಿ ರೈತರ ವಿಷಯ ಬಂದಾಗ ನಾವೆಲ್ಲಾ ಒಂದಾಗಿ ಹೋರಾಟ ನಡೆಸೋಣ ಎಂದು ವಿನಯ್‌ ಕುಲಕರ್ಣಿ ಹೇಳಿದರು.

ನವಲಗುಂದ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿ, ಕೇಂದ್ರದ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರಕಾರದ ವಿರುದ್ಧ ದಿಲ್ಲಿಯಲ್ಲಿ ಲಕ್ಷಾಂತರ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರಕಾರ ಸ್ಪಂದಿಸಲಿಲ್ಲ. ಆದುದರಿಂದ, ಧಾರವಾಡದಲ್ಲಿ ಸಾವಿರಾರು ರೈತರು ಬೀದಿಗಿಳಿದು ತಮ್ಮ ಆಕ್ರೋಶ ಹೊರ ಹಾಕುವ ಅನಿವಾರ್ಯತೆ ಎದುರಾಗಿದೆ ಎಂದರು. ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುವ ಬಿಜೆಪಿ ನಾಯಕರಿಗೆ ಗಂಡಸುತನ ಇದ್ದರೆ ಪ್ರಧಾನಿ ಮೋದಿ ವಿರುದ್ಧ ಪ್ರತಿಭಟನೆ ನಡೆಸಲಿ. ಇಲ್ಲವೇ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿಸಲಿ. ನಾವು ಬೆಳಗಾವಿಗೆ ನಿಮ್ಮೊಂದಿಗೆ ಬರುತ್ತೇವೆ ಎಂದು ಅವರು ಬಹಿರಂಗ ಸವಾಲು ಹಾಕಿದರು.

ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೆ ಬರ ಅಂದ್ರೆ ಗೊತ್ತಿಲ್ಲ. ಈಗ ರಿಯಲ್ ಎಸ್ಟೇಟ್ ಉದ್ದಿಮೆ ಮಾಡಲು ಹುಬ್ಬಳ್ಳಿ-ಧಾರವಾಡದಲ್ಲಿ ಜಮೀನು ಹಿಡಿದಿದ್ದಾರೆ. ಅವರಿಗೇನು ಗೊತ್ತು ರೈತರ ಕಷ್ಟ. ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಇದ್ದರೆ ಕೇಂದ್ರ ಸರಕಾರದ ವಿರುದ್ದ ಪ್ರತಿಭಟನೆ ನಡೆಸಲಿ. ಬಿಜೆಪಿ ಪ್ರಣಾಳಿಕೆಯಲ್ಲಿ ಹಾಕಿಕೊಂಡಿದ್ದ ಡಾ.ಸ್ವಾಮಿನಾಥನ್ ವರದಿ ಯಥಾವತ್ ಜಾರಿ ವಿಳಂಬ ಏಕೆ ಎಂದು ಅವರು ಪ್ರಶ್ನಿಸಿದರು.

ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಂತೂ ರೈತರ ಪಾಲಿಗೆ ಇದ್ದು ಇಲ್ಲದಂತಾಗಿವೆ. ಅವು ಕೇವಲ ಗೌತಮ್ ಅದಾನಿ, ಅನಿಲ್ ಅಂಬಾನಿಯ ವಿಮೆ ಕಂಪನಿಗೆ ಲಕ್ಷಾಂತರ ಕೋಟಿ ರೂ.ಲಾಭ ಮಾಡಿಕೊಡುವ ಉದ್ದೇಶಕ್ಕಾಗಿ ಬಳಕೆಯಾಗುತ್ತಿವೆ ಎಂದು ಕೋನರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಹೋರಾಟಗಾರರಾದ ಜಿ.ಎನ್.ಗಣೇಶ ದೇವಿ, ಸುರೇಖಾ ದೇವಿ, ಜಿ.ಎನ್.ನಾಗರಾಜ್, ಸಿದ್ಧನಗೌಡಪಾಟೀಲ್, ವಿಧಾನಪರಿಷತ್ ಸದಸ್ಯ ಶ್ರೀನಿವಾಸಮಾನೆ ಸೇಂದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News