ಸ್ಮಶಾನದಲ್ಲಿ ಮದುವೆ ಮಾಡಿ ಮೌಢ್ಯಕ್ಕೆ ಸೆಡ್ಡು ಹೊಡೆದಿದ್ದೇವೆ: ಸತೀಶ್ ಜಾರಕಿಹೊಳಿ

Update: 2018-12-06 15:40 GMT

ಬೆಳಗಾವಿ, ಡಿ.6: ಡಾ.ಬಿ.ಆರ್.ಅಂಬೇಡ್ಕರ್ ಆಶಯದಂತೆ ಮುನ್ನಡೆಯಲು ನಾವು ಪಣ ತೊಟ್ಟಿದ್ದೇವೆ. ಅದರ ಭಾಗವಾಗಿ ಡಾ.ಅಂಬೇಡ್ಕರ್‌ರವರ ಪರಿನಿರ್ವಾಣದ ದಿನದಂದು ಸ್ಮಶಾನದಲ್ಲಿ ಅಂತರ್‌ಜಾತಿ ಮದುವೆ ಮಾಡಿಸಿ, ಸಮಾಜದಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಮೂಡಿಸಲು ಸಿದ್ಧರಾಗಿದ್ದೇವೆಂದು ಶಾಸಕ ಸತೀಶ್ ಜಾರಕಿಹೊಳಿ ತಿಳಿಸಿದರು.

ಗುರುವಾರ ಡಾ.ಬಿ.ಆರ್.ಅಂಬೇಡ್ಕರ್‌ರವರ ಪರಿನಿರ್ವಾಣದ ಅಂಗವಾಗಿ ಬೆಳಗಾವಿಯ ಸ್ಮಶಾನದಲ್ಲಿ ಆಯೋಜಿಸಿದ್ದ ಜನತೆಯಲ್ಲಿ ವೈಜ್ಞಾನಿಕ ಚಿಂತನೆಗಳ ಅರಿವು ಮೂಡಿಸುವುದು ಹಾಗೂ ಅಂತರ್‌ಜಾತಿ ವಿವಾಹ ಕಾರ್ಯಕ್ರಮವನ್ನು ಏರ್ಪಡಿಸಿ ಮಾತನಾಡಿದ ಅವರು, ಯಾವುದೆ ಸಂದರ್ಭದಲ್ಲಿ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಚಿಂತನೆಗಳಿಂದ ರಾಜಿಯಾಗುವ ಪ್ರಶ್ನೆಯೇ ಇಲ್ಲವೆಂದು ತಿಳಿಸಿದರು.

ಕಳೆದ ಚುನಾವಣೆಯಲ್ಲಿ ನಾನು ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿದ್ದಕ್ಕೆ ಗೆಲುವಿನ ಅಂತರ ಕಡಿಮೆ ಆಗಿದೆ ಎಂಬುದು ಸುಳ್ಳು. ಕಡಿಮೆ ಖರ್ಚಿನಲ್ಲಿ ನಾನು ಗೆದ್ದು ಬಂದಿದ್ದೇನೆ. ಪ್ರಸ್ತುತ ದಿನಗಳಲ್ಲಿ ಚುನಾವಣೆ ಗೆಲ್ಲಲು ಇಡೀ ಕುಟುಂಬವೇ ಹೋರಾಟ ಮಾಡೋ ಸ್ಥಿತಿ ಎದುರಾಗಿದೆ. ಆದರೆ ನಾನು ಕ್ಷೇತ್ರಕ್ಕೆ ಹೋಗದೇ ಗೆದ್ದಿದ್ದೇನೆ. ಸಾರಾಯಿ ಹಂಚದೇ 3 ಚುನಾವಣೆಯಲ್ಲಿ ಗೆದ್ದಿದ್ದೇನೆ. ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಅಂತರದಲ್ಲಿ ಗೆದ್ದು ತೋರಿಸುತ್ತೇನೆಂದು ಸವಾಲು ಹಾಕಿದರು.

ನಾಡೋಜ ಬರಗೂರು ರಾಮಚಂದ್ರಪ್ಪ ಮಾತನಾಡಿ, ಧಾರ್ಮಿಕ ಮೂಲಭೂತವಾದ ದೊಡ್ಡ ಮೌಢ್ಯವಾಗಿದೆ. ಅದರ ಬೇರುಗಳನ್ನು ಅಲುಗಾಡಿಸಲು ಯುವ ಜನತೆ ಮುಂದೆ ಬರಬೇಕಿದೆ. ಮೌಢ್ಯವು ಮಾರುಕಟ್ಟೆಯ ಸ್ವರೂಪ ಪಡೆದಿದ್ದು, ಧರ್ಮ, ದೇವರು ಹಾಗೂ ಸಂಸ್ಕೃತಿಯನ್ನು ಸರಕುಗಳನ್ನಾಗಿಟ್ಟು ಮಾರಲಾಗುತ್ತಿದೆ. ಈ ಮೌಢ್ಯದ ಮಾರುಕಟ್ಟೆಯಿಂದ ಜನರನ್ನು ಹೊರತರಬೇಕಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News