ಡಿ.17ಕ್ಕೆ ತಮಿಳುನಾಡು ಗಡಿ ಬಂದ್: ವಾಟಾಳ್ ನಾಗರಾಜ್

Update: 2018-12-06 17:36 GMT

ಬೆಂಗಳೂರು, ಡಿ.6: ಮೇಕೆದಾಟು ಯೋಜನೆಯನ್ನು ಪ್ರಬಲವಾಗಿ ವಿರೋಧಿಸುತ್ತಿರುವ ತಮಿಳುನಾಡು ಸರಕಾರದ ವಿರುದ್ಧ ಡಿ.17ರಂದು ತಮಿಳುನಾಡು ಮತ್ತು ಕರ್ನಾಟಕ ಗಡಿ ಭಾಗವಾಗಿರುವ ಹೊಸೂರು ಬಂದ್ ಮಾಡಲಾಗುವುದು ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಎಚ್ಚರಿಸಿದ್ದಾರೆ.

ಗುರುವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಮೇಕೆದಾಟು ಯೋಜನೆಗಾಗಿ ಆಗ್ರಹಿಸಿ ಹಾಗೂ ವಿರೋಧ ವ್ಯಕ್ತಪಡಿಸಿರುವುದನ್ನು ಖಂಡಿಸಿ ತಮಿಳುನಾಡು ಭೂತ ದಹನ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ವಿಚಾರದಲ್ಲಿ ತಮಿಳುನಾಡು ಬೆದರಿಕೆಗೆ ಮಣಿಯಬಾರದು ಎಂದು ಒತ್ತಾಯಿಸಿದರು.

ಮೇಕೆದಾಟು ಯೋಜನೆಯ ಅನುಷ್ಠಾನದಿಂದ ತಮಿಳುನಾಡಿಗೆ ಯಾವುದೇ ಅನಾನುಕೂಲ ಆಗುವುದಿಲ್ಲ. ಆ ರಾಜ್ಯದ ಕುಡಿಯುವ ನೀರಿನ ಹಿತಾಸಕ್ತಿಗೂ ಧಕ್ಕೆಯಾಗುವುದಿಲ್ಲ. ಆದರೂ, ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿರುವ ತಮಿಳುನಾಡು ಸರಕಾರದ ಧೋರಣೆ ಸರಿಯಲ್ಲ ಎಂದು ಆಪಾದಿಸಿದರು.

ಡಿ.10ರಿಂದ ಬೆಳಗಾವಿಯಲ್ಲಿ ನಡೆಯುವ ವಿಧಾನಸಭಾ ಅಧಿವೇಶನದಲ್ಲಿ ಮೇಕೆದಾಟು ಯೋಜನೆಯ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಬೇಕು. ಜ.1ರಂದು ಈ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಬೇಕೆಂದು ಆಗ್ರಹಿಸಿದರು.

ನಗರದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ರಾಮನಗರಕ್ಕೆ ತೆರಳಿದ ವಾಟಾಳ್ ನಾಗರಾಜ್ ಅವರು ಅಲ್ಲಿ ಮೇಕೆಗಳಿಗೆ ಸನ್ಮಾನ ಮಾಡುವ ಮೂಲಕ ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು ಹಾಕಿರುವುದನ್ನು ವಿರೋಧಿಸಿದರು. ನಂತರ ಸಂಜೆ ಮೇಕೆದಾಟು ಸ್ಥಳಕ್ಕೆ ತೆರಳಿ, ಅಲ್ಲಿ ಪ್ರತಿಭಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News