ಕ್ರಿಶ್ಚಿಯನ್ ಮೈಕಲ್‌ಗೆ ವಕೀಲರನ್ನು ಒದಗಿಸುವಂತೆ ಬ್ರಿಟಿಶ್ ಹೈಕಮಿಷನ್ ಮನವಿ

Update: 2018-12-06 18:28 GMT

ಹೊಸದಿಲ್ಲಿ, ಡಿ. 6: ರೂ. 3600 ಕೋಟಿ ಅಗಸ್ಟಾ ವೆಸ್ಟ್‌ಲ್ಯಾಂಡ್ ಒಪ್ಪಂದದ ಮಧ್ಯವರ್ತಿ ಎಂದು ಹೇಳಲಾದ ಹಾಗೂ ಬ್ರಿಟಿಶ್ ನಾಗರಿಕನಾಗಿರುವ ಕ್ರಿಶ್ಚಿಯನ್ ಮೈಕಲ್‌ಗೆ ವಕೀಲರನ್ನು ಒದಗಿಸುವಂತೆ ಬ್ರಿಟಿಶ್ ಹೈ ಕಮಿಷನ್ ಭಾರತ ಸರಕಾರವನ್ನು ಕೋರಿದೆ. ಕ್ರಿಶ್ಚಿಯನ್ ಮೈಕಲ್‌ಗೆ ವಕೀಲರನ್ನು ಒದಗಿಸುವಂತೆ ಕೋರಿ ಬ್ರಿಟಿಶ್ ಹೈಕಮಿಷನ್‌ನಿಂದ ಭಾರತ ಸರಕಾರ ಮನವಿ ಸ್ವೀಕರಿಸಿದೆ ಎಂದು ಮೂಲಗಳು ತಿಳಿಸಿವೆ. ಮೈಕಲ್ ಅವರನ್ನು ಮಂಗಳವಾರ ರಾತ್ರಿ ಯುಎಇಯಿಂದ ದಿಲ್ಲಿಗೆ ಗಡಿಪಾರು ಮಾಡಲಾಗಿತ್ತು. ದಿಲ್ಲಿಯ ನ್ಯಾಯಾಲಯ ಬುಧವಾರ ಅವರನ್ನು ಐದು ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಿತ್ತು. ವಿಚಾರಣೆ ಸಂದರ್ಭ ಸಿಬಿಐ ಪರವಾಗಿ ವಿಶೇಷ ಸಾರ್ವಜನಿಕ ನ್ಯಾಯವಾದಿ ಡಿ.ಡಿ. ಸಿಂಗ್ ಹಾಜರಾಗಿದ್ದರು ಹಾಗೂ ಸಂಪೂರ್ಣ ವಿಚಾರಣೆಗೆ ಮೈಕಲ್ ಅವರನ್ನು 14 ದಿನಗಳ ಕಾಲ ಕಸ್ಟಡಿಗೆ ಒಪ್ಪಿಸುವಂತೆ ಮನವಿ ಮಾಡಿದ್ದರು. ಮೈಕಲ್ ವಕೀಲ ಅಲ್ಜೊ ಕೆ. ಜೋಸೆಫ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಹಾಗೂ ಮೈಕಲ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಜಾಮೀನು ಅರ್ಜಿಯನ್ನು ನ್ಯಾಯಾಲಯ ಮುಂದಿನ ವಿಚಾರಣೆಗೆ ಕಾಯ್ದಿರಿಸಿತು ಹಾಗೂ ಬೆಳಗ್ಗೆ ಮತ್ತು ಸಂಜೆ ಒಂದು ಗಂಟೆಗಳ ಕಾಲ ಮೈಕಲ್‌ನೊಂದಿಗೆ ಸಮಾಲೋಚನೆ ನಡೆಸಲು ಅವರ ವಕೀಲನಿಗೆ ಅನುಮತಿ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News