32 ಕಿ.ಮೀ. ದೂರದಿಂದ ರೋಗಿಗೆ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ

Update: 2018-12-07 10:11 GMT

ಅಹ್ಮದಾಬಾದ್, ಡಿ.7: ನಗರದ ಹೃದ್ರೋಗ ತಜ್ಞ ಡಾ.ತೇಜಸ್ ಪಟೇಲ್ ಜಗತ್ತಿನ ಪ್ರಪ್ರಥಮ ಟೆಲಿರೋಬೋಟಿಕ್ ಕೊರೋನರಿ ಇಂಟರ್‍ವೆನ್ಶನ್ ಪ್ರಕ್ರಿಯೆಯನ್ನು 32 ಕಿ.ಮೀ. ದೂರದಿಂದ ರೊಬೋಟ್ ನಿಯಂತ್ರಿತ ಉಪಕರಣಗಳ ಮೂಲಕ ನಡೆಸಿ ಸಾಧನೆ ಮಾಡಿದ್ದಾರೆ.

ಗಾಂಧಿನಗರದ ಅಕ್ಷರಧಾಮ್ ದೇವಳ ಸಂಕೀರ್ಣದಲ್ಲಿದ್ದ ಡಾ. ಪಟೇಲ್ ಅವರು ಅಹ್ಮದಾಬಾದ್ ನಗರದ ಅಪೆಕ್ಸ್ ಹಾರ್ಟ್ ಇನ್ ಸ್ಟಿಟ್ಯೂಟ್‍ನಲ್ಲಿ ದಾಖಲಾಗಿದ್ದ ಮಧ್ಯವಯಸ್ಸಿನ ಮಹಿಳೆಗೆ ಶಸ್ತ್ರಕ್ರಿಯೆ ನಡೆಸಿದರು.

ಈ ಶಸ್ತ್ರಕ್ರಿಯೆಗಾಗಿ ರೊಬೋಟಿಕ್ ವ್ಯವಸ್ಥೆಯನ್ನು ಆಪರೇಷನ್ ಥಿಯೇಟರಿನಲ್ಲಿ ಇರಿಸಲಾಗಿತ್ತು. ಡಾ.ಪಟೇಲ್ ಅವರಿಗೂ ಈ ವ್ಯವಸ್ಥೆಯ ನಡುವೆ ಹೈಸ್ಪೀಡ್ ವಯರ್ ಲೆಸ್ ಇಂಟರ್‍ನೆಟ್ ಸಂಪರ್ಕವಿತ್ತು. ಹೀಗೆ ಶಸ್ತ್ರಕ್ರಿಯೆ ನೆರವೇರಿಸಿ ಸ್ಟೆಂಟ್ ಕೂಡ ಡಾ ಪಟೇಲ್ ಅಳವಡಿಸಿದ್ದಾರೆ.

ಈ ರೀತಿಯಾಗಿ ಇದು ಜಗತ್ತಿನಲ್ಲಿಯೇ ಮೊದಲ ಬಾರಿ ನಡೆದ ಶಸ್ತ್ರಕ್ರಿಯೆ ಎಂದು ನಂತರ ಡಾ ಪಟೇಲ್ ಹೇಳಿಕೊಂಡಿದ್ದಾರೆ.

ಮುಖ್ಯಮಂತ್ರಿ ವಿಜಯ್ ರುಪಾನಿ ಕೂಡ ಅಕ್ಷರಧಾಮ್ ದೇವಳ ಸಂಕೀರ್ಣದಲ್ಲಿ ಕುಳಿತುಕೊಂಡು ಅಲ್ಲಿದ್ದ ಪರದೆಯ ಮೇಲೆ ಶಸ್ತ್ರಕ್ರಿಯೆ ವೀಕ್ಷಿಸಿದರು. ಇಂತಹ ಒಂದು ಶಸ್ತ್ರಕ್ರಿಯೆ ನಡೆದಿರುವುದು ರಾಜ್ಯಕ್ಕೇ ಹೆಮ್ಮೆಯನ್ನುಂಟು ಮಾಡಿದೆ ಎಂದು ಅವರು ನಂತರ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News