ಈರುಳ್ಳಿ ಕೃಷಿಕರಲ್ಲಿ ಕಣ್ಣೀರು ಬರಿಸುತ್ತಿರುವ ಈರುಳ್ಳಿ ಬೆಲೆ ಕುಸಿತ

Update: 2018-12-07 16:00 GMT

ಮುಂಬೈ, ಡಿ.7: ಈರುಳ್ಳಿ ಬೆಳೆಯುವ ರೈತ ಒಂದು ಕಿ.ಗ್ರಾಂ ಈರುಳ್ಳಿಯನ್ನು ಮಾರಿದರೆ ಅಂಗಡಿಯವರು 1 ರೂಪಾಯಿ ಕೊಡುತ್ತಾರೆ. ಕಿಲೋ ಒಂದರಲ್ಲಿ ರೈತನಿಗೆ ಸಿಗುವುದು ಕೇವಲ 50 ಪೈಸೆ ಲಾಭ. ಆದರೆ ಇದೇ ಈರುಳ್ಳಿಯನ್ನು ಗ್ರಾಹಕರು ಒಂದು ಕಿ.ಗ್ರಾಂಗೆ 20ರಿಂದ 25 ರೂಪಾಯಿ ನೀಡಿ ಖರೀದಿಸಬೇಕು. ಇದು ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯ ರೈತರು ಎದುರಿಸುತ್ತಿರುವ ಪರಿಸ್ಥಿತಿ.

ಈ ಹಿಂದೆಯೂ ತಮ್ಮ ಬೆಳೆಗೆ ಕನಿಷ್ಟ ಬೆಂಬಲ ಬೆಲೆ ನೀಡಬೇಕೆಂದು ಇಲ್ಲಿಯ ರೈತರು ಪ್ರತಿಭಟನೆ ನಡೆಸಿದ್ದರು. ಆಗ ನಡೆದ ಪೊಲೀಸ್ ಗೋಲಿಬಾರ್‌ನಲ್ಲಿ ಆರು ರೈತರು ಪ್ರಾಣ ಕಳೆದುಕೊಂಡಿದ್ದರು. ಈ ವರ್ಷ ಈರುಳ್ಳಿ ಬೆಲೆ ಕ್ವಿಂಟಾಲ್‌ಗೆ 300 ರಿಂದ 400 ರೂಪಾಯಿ. ಆದರೆ ಕ್ವಿಂಟಾಲ್ ಈರುಳ್ಳಿ ಬೆಳೆಯಲು ಆಗುವ ವೆಚ್ಚ 1,100 ರೂ. ಆದ್ದರಿಂದ ನಮಗೆ ಭಾರೀ ನಷ್ಟವಾಗಿದೆ ಎಂದು ಮಹಾರಾಷ್ಟ್ರದ ಲಸಾಲ್‌ಗಾಂವ್‌ನ ರೈತ ಭಗವಾನ್ ಚವಾಣ್ ಅಳಲು ತೋಡಿಕೊಂಡಿದ್ದಾರೆ. ಈರುಳ್ಳಿ ಬೆಲೆ ಕಿ.ಗ್ರಾಂಗೆ 1 ರೂಪಾಯಿಗಿಂತಲೂ ಕೆಳಮಟ್ಟಕ್ಕೆ ಕುಸಿದಿರುವುದು 2011ರ ಬಳಿಕ ಇದೇ ಮೊದಲಾಗಿದೆ. 2017ರ ನವೆಂಬರ್‌ನಲ್ಲಿ ಒಂದು ಕ್ವಿಂಟಾಲ್ ಈರುಳ್ಳಿಯ ಸರಾಸರಿ ಬೆಲೆ 2,852 ರೂ. ಆಗಿದ್ದರೆ ಈ ವರ್ಷದ ನವೆಂಬರ್‌ನಲ್ಲಿ ಇದು 879 ರೂ.ಗೆ ಕುಸಿದಿದೆ ಎಂದು ರಾಷ್ಟ್ರೀಯ ತೋಟಗಾರಿಕೆ ಬೆಳೆಗಳ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ವರದಿ ತಿಳಿಸಿದೆ.

2016-17ರಲ್ಲಿ 22.47 ಮಿಲಿಯನ್ ಕ್ವಿಂಟಾಲ್ ಈರುಳ್ಳಿ ಬೆಳೆಯಲಾಗಿದ್ದರೆ 2017-18ರಲ್ಲಿ 22.47 ಮಿಲಿಯನ್ ಕ್ವಿಂಟಾಲ್ ಈರುಳ್ಳಿ ಬೆಳೆಯಲಾಗಿದೆ ಎಂದು ಕೃಷಿ ಸಚಿವಾಲಯ ತಿಳಿಸಿದೆ. ಈ ಹಿಂದೆ ಈರುಳ್ಳಿ ಬೆಲೆ ಏರಿಕೆಯ ಹಾದಿಯಲ್ಲಿದ್ದಾಗ ವರ್ತಕರು ಇನ್ನಷ್ಟು ಬೆಲೆ ಹೆಚ್ಚಳದ ನಿರೀಕ್ಷೆಯಲ್ಲಿ ಭಾರೀ ಪ್ರಮಾಣದಲ್ಲಿ ದಾಸ್ತಾನು ಇರಿಸಿಕೊಂಡಿದ್ದರು. ಇದು ಈಗಿನ ಸಮಸ್ಯೆಗೆ ಮೂಲ ಕಾರಣವಾಗಿದೆ ಎಂದು ಮುಂಬೈಯ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ಈರುಳ್ಳಿ ಬೆಲೆ ಕುಸಿತದ ಹಾದಿಯಲ್ಲಿ ಸಾಗುತ್ತಿರುವುದನ್ನು ಕಂಡ ವರ್ತಕರು ತಮ್ಮಲ್ಲಿದ್ದ ಹಳೆಯ ದಾಸ್ತಾನನ್ನು ಮುಗಿಸಿಬಿಡಲು ಮುಂದಾದರು. ಇದು ಸಮಸ್ಯೆಯನ್ನು ಮತ್ತಷ್ಟು ಉಲ್ಬಣಿಸಿತು ಎಂದು ದೇಶದ ಅತೀ ದೊಡ್ಡ ಈರುಳ್ಳಿ ಮಾರುಕಟ್ಟೆಯಾಗಿರುವ ನಾಶಿಕ್‌ನ ವ್ಯಾಪಾರಿಗಳು ತಿಳಿಸಿದ್ದಾರೆ.

ರೈತರಿಂದ 2 ರೂ.ಗೆ ಪಡೆದು ಗ್ರಾಹಕರಿಗೆ 20 ರೂ.ಗೆ ಮಾರಾಟ

ಈರುಳ್ಳಿ ಬೆಳೆಯುವ ಸ್ಥಳೀಯ ರೈತರಿಂದ ಮಧ್ಯವರ್ತಿಗಳು ಕಿ.ಗ್ರಾಂ ಒಂದಕ್ಕೆ 2 ರೂ.ಯಂತೆ ನೀಡಿ ಖರೀದಿಸುತ್ತಾರೆ. ಬಳಿಕ ಇದನ್ನು ನಗರದಲ್ಲಿರುವ ರಖಂ ಮಾರಾಟ ಕೇಂದ್ರಗಳಿಗೆ ಒಂದು ಕಿ.ಗ್ರಾಂಗೆ 8 ರೂ.ಯಂತೆ ಮಾರುತ್ತಾರೆ. ಇಲ್ಲಿಂದ ಸ್ಥಳೀಯ ಮಾರುಕಟ್ಟೆಯ ವ್ಯಾಪಾರಿಗಳು ಕಿ.ಗ್ರಾಂಗೆ 12 ರೂ.ಯಂತೆ ಖರೀದಿಸಿ ಗ್ರಾಹಕರಿಗೆ ಕಿ.ಗ್ರಾಂಗೆ 20 ರೂ.ಯಂತೆ ಮಾರುತ್ತಾರೆ. ನಾಶಿಕ್‌ನಿಂದ ಮುಂಬೈಯವರೆಗಿನ 167 ಕಿ.ಮೀ ದೂರದ ಪ್ರಯಾಣವು ಈರುಳ್ಳಿ ಬೆಲೆಯನ್ನು 2 ರೂ.ನಿಂದ 20 ರೂ.ಗೆ (ಸುಮಾರು ಶೇ.500ರಷ್ಟು ಹೆಚ್ಚಳ) ಏರಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News